ADVERTISEMENT

ಮೊಬೈಲ್‌ನಿಂದ ದೂರವಾಗಲು...

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 19:30 IST
Last Updated 13 ಡಿಸೆಂಬರ್ 2017, 19:30 IST
ಮೊಬೈಲ್‌ನಿಂದ ದೂರವಾಗಲು...
ಮೊಬೈಲ್‌ನಿಂದ ದೂರವಾಗಲು...   

ವಾಹನ ಓಡಿಸುತ್ತಿರುವಾಗ, ವಾಕಿಂಗ್ ಮಾಡುವಾಗ ಅಥವಾ ಮೀಟಿಂಗ್‌ನಲ್ಲಿ ಇರುವಾಗ, ಎಲ್ಲೇ ಇದ್ದರೂ ಪದೇ ಪದೇ ಮೊಬೈಲ್‌ ನೋಡುವ  ಗೀಳು ಹಲವರಿಗೆ. ಪಕ್ಕದಲ್ಲಿದ್ದ ವರಿಗೆ ಮೆಸೇಜ್ ಬಂದರೆ ತಮ್ಮ ಫೋನನ್ನು ಚೆಕ್‌ ಮಾಡಿಕೊಳ್ಳುವಂತೆ ಆಗುತ್ತದೆ. ಫೋನ್‌ನಲ್ಲಿ ಏನೂ ಕೆಲಸವಿಲ್ಲದಿದ್ದರೂ ಬೆರಳುಗಳು ಮೊಬೈಲ್‌ ಕಡೆಗೇ ಓಡುತ್ತವೆ.

ನಿಮಿಷ ನಿಮಿಷಕ್ಕೂ ಮೊಬೈಲ್‌ ಮೇಲೆ ಕೈಯಾಡಿಸಬೇಕೆನಿಸುತ್ತದೆ. ಆದರೆ ಈ ಗ್ಯಾಜೆಟ್‌ಗಳ ಮೇಲಿನ ಅತಿಯಾದ ಮೋಹ ಒಳ್ಳೆಯದಲ್ಲ. ಇದು ಗೊತ್ತಿದ್ದರೂ ಫೋನನ್ನೂ ಬಿಡಲೂ ಮನಸ್ಸು ಒಪ್ಪುವುದಿಲ್ಲ.

ಸುಮ್ಮಸುಮ್ಮನೆ ಝೂಮ್ ಮಾಡುವುದು, ಸ್ಕ್ರೀನ್ ಮೇಲೆ ಕೈಯಾಡಿಸುವುದು, ಸ್ವೈಪ್ ಮಾಡುವುದು ನಡೆದೇ ಇರುತ್ತದೆ. ಮತ್ತೊಬ್ಬರೊಂದಿಗೆ ಮಾತನಾಡುತ್ತಿದ್ದರೂ ಮೊಬೈಲ್ ಕಡೆಯೇ ಮನಸ್ಸು. ಇಂಥ ಮೊಬೈಲ್‌ ಗೀಳು ಇಟ್ಟುಕೊಂಡಿರುವವರಿಗೆಂದೇ ನಕಲಿ ಫೋನೊಂದು ರೂಪಿತಗೊಂಡಿದೆ.

ADVERTISEMENT

ಗ್ಯಾಜೆಟ್‌ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಲು ಈ ಫೋನ್ ಉಪಯೋಗಕ್ಕೆ ಬರುತ್ತದೆಯಂತೆ. ವಿಯೆನ್ನಾ ಮೂಲದ ಕೆಲ್ಮೆನ್ ಶಿಲ್ಲಿಂಜರ್ ಈ ಮೊಬೈಲನ್ನು ವಿನ್ಯಾಸಗೊಳಿಸಿರುವುದು.

ಫಿಜೆಟ್ ಸ್ಪಿನ್ನರ್‌ ಅನ್ನು ಹೇಗೆ ಒತ್ತಡದಲ್ಲಿದ್ದಾಗ ಗಮನ ಬೇರೆಡೆ ಹರಿಸುವಂತೆ ರೂಪಿಸಲಾಗಿತ್ತೋ ಆ ಧಾಟಿಯಲ್ಲೇ ಈ ಫೋನ್ ಕೂಡ ವಿನ್ಯಾಸವಾಗಿದೆ. ಇದು ಪ್ಲಾಸ್ಟಿಕ್ ಫೋನ್. ಮೆಸೇಜ್, ಕಾಲ್‌ಗಳು ಬರುವುದಿಲ್ಲ. ಸ್ಕ್ರೀನ್ ಇಲ್ಲ, ನಂಬರ್ ಇಲ್ಲ, ಡಿಜಿಟಲ್ ಅಲ್ಲವೇ ಅಲ್ಲ. ಸ್ಮಾರ್ಟ್‌ಫೋನ್‌ನಷ್ಟೇ ತೂಕವನ್ನು ಹೊಂದಿದ್ದು, ಫೋನ್ ಹಿಡಿದಂತೆಯೇ ಅನುಭವ ನೀಡುತ್ತದೆ ಅಷ್ಟೆ.

ಯುವಜನರು ದಿನಕ್ಕೆ 2 ಗಂಟೆ 40 ನಿಮಿಷ ಫೋನ್ ಮುಂದೆಯೇ ಇರುತ್ತಾರೆ.ಅಂದರೆ, ವರ್ಷಕ್ಕೆ ಪೂರ್ಣ ನಲವತ್ತು ದಿನಗಳಿಗೂ ಹೆಚ್ಚು ಕಾಲ ಫೋನ್ ನೋಡುತ್ತಲೇ ಕಳೆಯುತ್ತಾರೆ ಎಂಬ ಸಮೀಕ್ಷೆಯೊಂದರ ಅಂಶವೇ ಕೆಲ್ಮೆನ್ ಅವರಿಗೆ ಈ ಸಾಧನ ತರಲು ಪ್ರೇರೇಪಿಸಿದ್ದು. ಸ್ಮಾರ್ಟ್‌ಫೋನ್ ಬಳಕೆಯನ್ನು ತಗ್ಗಿಸುವ, ಸುಮ್ಮಸುಮ್ಮನೆ ಪರದೆ ಸರಿಸುವ ಈ ಚಾಳಿಯನ್ನು ಬಿಡಿಸಲು ಫೋನ್‌ಗೆ ಬದಲಿಯಾಗಿ ಇದನ್ನು ವಿನ್ಯಾಸಗೊಳಿಸಿದರು.

ಕಪ್ಪು ಪಾಲ್ಯೊಆಕ್ಸಿಮೆಥಿಲಿನ್ ಪ್ಲಾಸ್ಟಿಕ್‌ನಿಂದ ಈ ಮೊಬೈಲನ್ನು ತಯಾರಿಸಲಾಗಿದ್ದು, ಕೇಸ್‌ನಲ್ಲಿ ಹೌಲೈಟ್‌ ಖನಿಜಗಳಿಂದ ಮಣಿಗಳನ್ನು ಜೋಡಿಸಲಾಗಿದೆ. ಈ ಮಣಿಗಳ ಮೇಲೆ ಬೆರಳಾಡಿಸಿದರೆ, ಮೊಬೈಲ್‌ನ ಮೇಲೆ ಸ್ವೈಪ್ ಮಾಡಿದಂತೆಯೇ ಅನುಭವ ನೀಡುತ್ತದೆ. ಹಾಗೆಯೇ ಚಲನವಲನ ಕೂಡ ಮಾಡಬಹುದು.

ಇದರಿಂದ ಸುಮ್ಮನೆ ಮೊಬೈಲ್ ನೋಡುತ್ತಾ ಇರುವುದನ್ನು ತಪ್ಪಿಸುವುದ ಲ್ಲದೆ, ಕಣ್ಣುಗಳ ಮೇಲಿನ ಹೆಚ್ಚು ಒತ್ತಡವನ್ನೂ ಪರೋಕ್ಷವಾಗಿ ತಡೆಯಬಹುದಾಗಿದೆಯಂತೆ.

ಇದು ಚಿಕಿತ್ಸಕ ವಿಧಾನದಂತೆ ಕೆಲಸ ಮಾಡುತ್ತದೆ ಎಂದು ಹೇಳಿಕೊಂಡಿದ್ದಾರೆ ವಿನ್ಯಾಸಕರು. ಆಸ್ಟ್ರಿಯಾದಲ್ಲಿ ಸದ್ಯಕ್ಕೆ ಭಾರೀ ಸುದ್ದಿಯಲ್ಲಿರುವ ಈ ಫೋನ್‌ ಅನ್ನು ಭಾರತದಲ್ಲೂ ತರುವ ಆಲೋಚನೆಯನ್ನು ಯಾರಾದರೂ ಮಾಡಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.