ADVERTISEMENT

ಶಿಲ್ಪಾ ಶೆಟ್ಟಿ ಯೋಗಾಯೋಗ

ವಿಶಾಖ ಎನ್.
Published 9 ಮೇ 2017, 19:30 IST
Last Updated 9 ಮೇ 2017, 19:30 IST
ಶಿಲ್ಪಾ ಶೆಟ್ಟಿ ಯೋಗಾಯೋಗ
ಶಿಲ್ಪಾ ಶೆಟ್ಟಿ ಯೋಗಾಯೋಗ   

‘ಸರ್ವಿಕಲ್ ಸ್ಪಾಂಡಿಲೈಟಿಸ್’ ಅರ್ಥಾತ್ ಕುತ್ತಿಗೆಯನ್ನು ಬೆನ್ನಿನ ಭಾಗಕ್ಕೆ ಬೆಸೆಯುವ ಸ್ನಾಯುಗಳಲ್ಲಿ ಶಾಶ್ವತವಾಗಿ ಅವಿತು ಕುಳಿತಂಥ ನೋವು. ಆ ನೋವು ಗೊತ್ತಾಗದಂತೆ ಮಾಡಲು ಔಷಧ ಕೊಡಬಹುದು; ಅದನ್ನು ಪರಿಹರಿಸಲು ಸಾಧ್ಯವಿಲ್ಲ. ಎಲ್ಲ ಘಟಾನುಘಟಿ ವೈದ್ಯರೂ ವ್ಯಾಯಾಮವೇ ಅದಕ್ಕೆ ಮದ್ದು ಎನ್ನುತ್ತಾರೆ. ನಟಿ ಶಿಲ್ಪಾ ಶೆಟ್ಟಿಗೂ ಹೀಗೆಯೇ ವೈದ್ಯರು ಹೇಳಿದ್ದು.

ಶಿಲ್ಪಾ ಯಶಸ್ಸಿನ ಮೆಟ್ಟಿಲನ್ನು ಪಟಪಟನೆ ಹತ್ತಿದವರೇನಲ್ಲ. ಅವರು ತಾಯಿಯ ಗರ್ಭದಲ್ಲಿದ್ದಾಗ ವೈದ್ಯರು, ‘ಈ ಮಗು ಬದುಕುಳಿಯಲು ಸಾಧ್ಯವಿಲ್ಲ’ ಎಂದಿದ್ದರು. ಆ ಮಹಾತಾಯಿ ಸುನಂದಾ ಶೆಟ್ಟಿ, ‘ಮಗು ಬೇಕೇ ಬೇಕು. ಒಮ್ಮೆ ಬದುಕುಳಿದರೆ ಮುಂದೆ ಅದು ಅದೃಷ್ಟದ ಮಗುವಾಗುತ್ತದೆ’ ಎಂದು ಪಟ್ಟುಹಿಡಿದಿದ್ದರು. ಆರು ತಿಂಗಳು ರಕ್ತಸ್ರಾವದ ಸಂಕಟದ ನಡುವೆಯೂ ಅವರು ಹೆತ್ತ ಮಗುವೇ ಶಿಲ್ಪಾ.

ಮದುವೆ ಮನೆಗಳಿಗೆ ಶಿಲ್ಪಾಳನ್ನು ಕರೆದುಕೊಂಡು ಹೋಗಲು ಅಪ್ಪ-ಅಮ್ಮ ಹಿಂದೇಟು ಹಾಕುತ್ತಿದ್ದರು. ತಬಲಾ ಸದ್ದಿಗೋ, ಲೌಡ್ ಸ್ಪೀಕರ್ ಹಾಡಿನ ಲಯಕ್ಕೋ ಬಾಲಕಿ ಶಿಲ್ಪಾ ಏಕ್್ದಂ ಕುಣಿಯಲಾರಂಭಿಸುತ್ತಿದ್ದಳು. ಅದು ಮೊದಮೊದಲು ಅಪ್ಪ-ಅಮ್ಮನಿಗೆ ಇರುಸು ಮುರುಸು ಉಂಟುಮಾಡುವ ವಿಷಯವಾಗಿತ್ತು. ಆಮೇಲೆ ಅದು ಪ್ರತಿಭೆ ಎನ್ನುವುದು ಮನದಟ್ಟಾದದ್ದು.

ADVERTISEMENT

ಭರತನಾಟ್ಯಕ್ಕೆ ಸೇರಿದ ಶಿಲ್ಪಾ ದೇಹಕ್ಕೊಂದು ಶಿಲ್ಪ ಸಿಕ್ಕಿತು. ಕುಣಿದರು, ದಣಿದರು, ದೇಹ ಪಳಗಿಸಿದರು. ಮಾಡೆಲ್ ಆದರು. ನಟಿಯಾದರು. ‘ಬಾಜಿಗರ್’ ಹಿಂದಿ ಚಿತ್ರದ ಚೊಚ್ಚಲ ಅವಕಾಶದ ನಂತರ ‘ಮೈ ಖಿಲಾಡಿ ತೂ ಅನಾಡಿ’ಯಲ್ಲಿ ಕುಣಿದದ್ದಷ್ಟೇ ನೆನಪು. ‘ಅಭಿನಯದಲ್ಲಿ ಈ ಹುಡುಗಿ ಡಲ್ಲು’ ಎಂಬ ವಿಮರ್ಶೆಗಳೇ ಪುಂಖಾನುಪುಂಖ ಪ್ರಕಟವಾದವು.

ಐದು ವರ್ಷ ಶಿಲ್ಪಾ ಬಾಲಿವುಡ್ ಕೆರಿಯರ್ ಮಂಕೋ ಮಂಕು. ‘ಧಡ್್ಕನ್’, ‘ಗರ್ವ್’, ‘ಲೈಫ್ ಇನ್ ಎ ಮೆಟ್ರೊ’ ಸಿನಿಮಾಗಳ ಅಭಿನಯಕ್ಕಿಂತ ಹೆಚ್ಚಾಗಿ ಅಕ್ಷಯ್ ಕುಮಾರ್ ಜತೆಗಿನ ಡೇಟಿಂಗ್ ಹೆಚ್ಚು ಸುದ್ದಿಯಾಯಿತು. ಅದು ಮದುವೆಯಲ್ಲಿ ಕೊನೆಯಾಗಲಿಲ್ಲ. ಉದ್ಯಮಿ ರಾಜ್ ಕುಂದ್ರಾ ಬಾಳ ಸಂಗಾತಿಯಾದದ್ದೂ ಡೇಟಿಂಗ್ ನಂತರವೇ.

ಮಗ ವಿವಾನ್ ಹುಟ್ಟಿದ ಮೇಲೆ ಶಿಲ್ಪಾ ಬದುಕಿನ ದಿಕ್ಕು ಬದಲಾಯಿತು. ಅದಕ್ಕೂ ಮೊದಲು ಬ್ರಿಟಿಷ್ ಚಾನೆಲ್‌ನ ರಿಯಾಲಿಟಿ ಷೋ ‘ಸೆಲೆಬ್ರಿಟಿ ಬಿಗ್ ಬ್ರದರ್ 5’ನಲ್ಲಿ ಜನಾಂಗ ನಿಂದನೆಯ ನೋವುಂಡು, ಆಮೇಲೆ ಜೇಡ್ ಗೂಡಿ, ಡೇನಿಯೆಲ್ ಲಾಯ್ಡ್ ತರಹದ ನಟಿಯರೂ ಕ್ಷಮಾಪಣೆ ಕೇಳುವಷ್ಟು ಮನೋಬಲ ತೋರಿದ್ದವರು ಶಿಲ್ಪಾ.

ತಮ್ಮ ನಲವತ್ತನೇ ವಯಸ್ಸಿನಲ್ಲಿ ಈ ನಟಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಅರ್ಧ ತಾಸು ಯೋಗ ಮಾಡಿದರು. ಎಲ್ಲ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣುಗಳು ನೆಟ್ಟಿದ್ದು ಅವರ ಮೇಲೆಯೇ.

ಶಿವಕುಮಾರ್ ಮಿಶ್ರ ಹೇಳಿಕೊಟ್ಟ ಯೋಗ ಶಿಲ್ಪಾ ಕುತ್ತಿಗೆ ನೋವು ನಿವಾರಣೆಯ ಮಾರ್ಗವಷ್ಟೇ ಆಗಲಿಲ್ಲ; ದೊಡ್ಡ ಮಾರುಕಟ್ಟೆಯನ್ನೇ ಈ ನಟೀಮಣಿಯ ಎದುರು ತೆರೆದಿಟ್ಟಿತು. ‘ಶಿಲ್ಪಾಸ್ ಯೋಗ’ ಡೀವಿಡಿಗಳನ್ನು ಜನ ಮುಗಿಬಿದ್ದು ಕೊಂಡುಕೊಂಡರು. ಹೊಟ್ಟೆಗೇನು, ಎಷ್ಟು ತಿನ್ನಬೇಕು ಎಂಬ ಅವರ ಟಿಪ್ಸ್‌ಗಳನ್ನು ಒಳಗೊಂಡ ಪುಸ್ತಕಕ್ಕೂ ಭಾರಿ ಬೇಡಿಕೆ. ಕಿರುತೆರೆ ರಿಯಾಲಿಟಿ ಷೋದ ತೀರ್ಪುಗಾರಳಾಗುವ ಅವಕಾಶ ಕೂಡ ಹುಡುಕಿಕೊಂಡು ಬಂದಿತು.

ಮೈಗಂಟಿದ ಬಟ್ಟೆ ಹಾಕಿಕೊಂಡು ಶಿಲ್ಪಾ ಮಾಡುವ ಯೋಗಗಳನ್ನು ಎಷ್ಟೋ ಆಸ್ಪತ್ರೆಗಳಲ್ಲಿ ಇಡಲಾದ ಟಿ.ವಿ.ಗಳು ಇಂದಿಗೂ ಪ್ರದರ್ಶಿಸುತ್ತವೆ. ಅದನ್ನು ನೋಡುವ ಜನರಲ್ಲಿ ಕೆಲವರಾದರೂ ಯೋಗ ಮಾಡಲು ಮನಸ್ಸು ಮಾಡುತ್ತಾರೆ. ನಟಿಯಾಗಿ ದೊಡ್ಡ ಯಶಸ್ಸು ಕಾಣದ ಶಿಲ್ಪಾ ತಮ್ಮ ಯೋಗದಿಂದ ಮಾಡಿರುವ ಮೋಡಿಯ ಹಿಂದೆ ಸ್ಫೂರ್ತಿ ಕಥನವಂತೂ ಹುದುಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.