ADVERTISEMENT

ಸಮವಸ್ತ್ರದ ಕೊಳೆ ಬಿಡಿಸುವ ಕಲೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಾಲೆಗಳು ಮತ್ತೆ ಶುರುವಾಗಿವೆ. ಮಕ್ಮೊಕಳು ಮೊದಲ ದಿನದಿಂದಲೇ ಸಮವಸ್ತ್ರ ಧರಿಸಬೇಕಾಗಿದೆ. ಒಂದೆಡೆ ಮಳೆ, ಮತ್ತೊಂದೆಡೆ ಸಮವಸ್ತ್ರದಲ್ಲಿ ಕೊಳೆಯಾಗದಂತೆ ಆಟವಾಡಬೇಕಾದ ಇಬ್ಬಂದಿ ಪರಿಸ್ಥಿತಿ ಮಕ್ಕಳದು. ಮನೆಯಲ್ಲಿ ಬಟ್ಟೆ ತೊಳೆಯುವುದೂ ಸವಾಲಾಗುವುದು ಈಗಲೇ.

ಕೆಲಸದಾಕೆ ಸಮವಸ್ತ್ರ ತೊಳೆದರೆ ಕೊಳೆ, ಕಲೆ ಹೋಗುತ್ತಿಲ್ಲ ಎಂದು ಅಮ್ಮನೇ ಎತ್ತಿಟ್ಟುಕೊಳ್ಳುವುದೂ ಉಂಟು. ಬಿಳಿ ಸ್ಕರ್ಟ್‌, ಪ್ಯಾಂಟ್‌, ಶರ್ಟ್‌, ಕಾಲುಚೀಲಗಳನ್ನು ಎರಡೆರಡು ದಿನ ಧರಿಸಿದರೂ ವಾರದಲ್ಲಿ ಮೂರು ಬಾರಿ ಬಟ್ಟೆ ತೊಳೆಯುವುದು ತಪ್ಪುವುದಿಲ್ಲ. ಬಿಳಿ ಬಣ್ಣದ ಸಮವಸ್ತ್ರಗಳ ಕೊಳೆ ಬಿಡಿಸಲು ಏನಾದರೂ ಜಾಣ ಉಪಾಯ ಕಂಡುಕೊಳ್ಳಲೇಬೇಕಾಗಿದೆ ಈಗ...

* ಒಂದು ಕಪ್‌ ಬಿಳಿ ವಿನೆಗರ್‌ ಮತ್ತು 3 ದೊಡ್ಡ ಚಮಚದಷ್ಟು ಉಪ್ಪನ್ನು ನೀರಲ್ಲಿ ಕಲಸಿ ಸಮವಸ್ತ್ರವನ್ನು ನೆನೆಸಿಡಿ. 30 ನಿಮಿಷಗಳ ನಂತರ ತಣ್ಣೀರಲ್ಲಿ ತೊಳೆಯಿರಿ.

ADVERTISEMENT

* ಕಲೆಯಾದ ಭಾಗಕ್ಕೆ ನಿಂಬೆ ಹುಳಿಯನ್ನು ಹಿಂಡಿ. ನಿಂಬೆ ಸಿಪ್ಪೆಯಿಂದ ಕಲೆಯ ಮೇಲೆ ವೃತ್ತಾಕಾರವಾಗಿ ಉಜ್ಜಿ. ಒಂದೇ ಸಲಕ್ಕೆ ಕಲೆ ಹೋಗದಿದ್ದರೆ 2–3 ಸಲ ತೊಳೆಯುವಾಗಲೂ ಹೀಗೇ ಮಾಡಿ.

* ವಿನೆಗರ್‌ ಅತ್ಯುತ್ತಮ ಬ್ಲೀಚಿಂಗ್‌ ಏಜೆಂಟ್‌ನಂತೆ ಕೆಲಸ ಮಾಡುತ್ತದೆ. ಅಂದರೆ ಕಲೆಗಳನ್ನು ಸಂಪೂರ್ಣವಾಗಿ ನಿವಾರಿಸುತ್ತದೆ ಇಲ್ಲವೇ ಅದರ ಬಣ್ಣ ಮಾಸುವಂತೆ ಮಾಡುತ್ತದೆ. ಹಾಗಾಗಿ ವಿನೆಗರ್‌ ಬೆರೆಸಿದ ನೀರಿನಲ್ಲಿ ಒಂದು ಗಂಟೆ ಬಟ್ಟೆ ನೆನೆಸಿಟ್ಟು ತೊಳೆಯುವುದೂ ಉತ್ತಮ ಫಲಿತಾಂಶ ನೀಡಬಲ್ಲದು.

* ಬಿಳಿ ಸಮವಸ್ತ್ರಗಳು ಬೇಗನೆ ಹಳದಿ ಛಾಯೆಗೆ ತಿರುಗುತ್ತವೆ. ಪ್ರತಿ ಬಾರಿಯೂ ಶುಭ್ರವಾಗುವಂತೆ ತೊಳೆದರೆ ಏಳೆಂಟು ತಿಂಗಳು ತಾಜಾತನ ಉಳಿಯಬಹುದು. ಪ್ರತಿ ಬಾರಿ ಡ್ರೈ ಕ್ಲೀನಿಂಗ್‌ಗೆ ಕೊಡುವುದು ಸೂಕ್ತವೂ ಅಲ್ಲ, ಬಟ್ಟೆಯ ಬಾಳ್ವಿಕೆಯೂ ಕಡಿಮೆಯಾಗುತ್ತದೆ. ಹಾಗಾಗಿ ಬಿಳಿ ಬಟ್ಟೆಗಳಲ್ಲಿ ಹೊಸತನ, ತಾಜಾತನ ಇರುವಂತೆ ಮಾಡಲೂ ಕೆಲವು ಉಪಾಯಗಳಿವೆ.

* ವಾಷಿಂಗ್‌ ಮೆಷಿನ್‌ನಲ್ಲಿ ತೊಳೆಯುವುದಾದರೆ ಬಿಳಿ ಬಟ್ಟೆಗಳನ್ನು ಮಾತ್ರ ಹಾಕಿ. ಬಣ್ಣದ ಬಟ್ಟೆಗಳ ಛಾಯೆ ಬಿಳಿ ಬಟ್ಟೆಯ ಮೇಲೆ ಪರಿಣಾಮ ಬೀರುವುದನ್ನು ತಡೆಯಲು ಇದು ಉತ್ತಮ ಉಪಾಯ.

* ಕಲೆ ನಿವಾರಕ ದ್ರಾವಣಗಳನ್ನು (ಸ್ಟೇನ್‌ ರಿಮೂವರ್‌) ಪ್ರತಿ ಬಾರಿ ಮೆಷಿನ್‌ನ ನೀರಿಗೆ ಹಾಕಿ.

* ಕೈಯಲ್ಲಿ ತೊಳೆಯುವುದಾದರೆ ಬಟ್ಟೆಗಳನ್ನು ನೆನೆಸಿಡುವಾಗಲೇ ಸ್ಟೇನ್‌ ರಿಮೂವರ್‌ಅನ್ನೂ ಒಂದು ಚಮಚದಷ್ಟು ಸೇರಿಸಿಬಿಡಿ.

* ಬಟ್ಟೆ ನೆನೆಸಿಡುವಾಗ ಬ್ಲೀಚ್‌ಗಳನ್ನೂ ಬಳಸಬಹುದು. ಮಾರುಕಟ್ಟೆಯಲ್ಲಿ ಸಿಗುವ ಬ್ಲೀಚ್‌ಗಳಿಂದ ಬಟ್ಟೆ ಹಾಳಾಗಬಹುದು. ಹಾಗಾಗಿ ಕ್ಲೋರಿನ್‌ ಬ್ಲೀಚ್‌ ಮತ್ತು ನಿಂಬೆ ರಸವನ್ನೂ ನೀರಿಗೆ ಬೆರೆಸಿ ನೆನೆಸಿಡುವುದು ಸೂಕ್ತ.

* ಎಲ್ಲಕ್ಕಿಂತ ಸುಲಭೋಪಾಯ ಏನು ಗೊತ್ತೇ? ಬಿಸಿ ನೀರಿಗೆ ಅರ್ಧ ಚಮಚ ಸಾಬೂನು ಪುಡಿ ಅಥವಾ ದ್ರಾವಣ ಹಾಕಿ ಅದರಲ್ಲಿ 20 ನಿಮಿಷ ಬಟ್ಟೆ ನೆನೆಸಿಟ್ಟು ಕೈಯಲ್ಲೇ ತೊಳೆದುಬಿಡಿ. ಜಾಡಿಸಲೂ ಬಿಸಿನೀರನ್ನೇ ಬಳಸಿ!

* ಬಟ್ಟೆಗೆ ನೀಲಿ ಬಣ್ಣ ಕೊಡುವ ದ್ರಾವಣವನ್ನು ಅರ್ಧ ಚಮಚ ಬೆರೆಸಿದ ನೀರಿನಲ್ಲಿ ಕೊನೆಯಲ್ಲೊಮ್ಮೆ ಜಾಲಾಡಿ ಒಣಹಾಕಿದರೆ ಬಟ್ಟೆ ಹೊಸದರಂತೆ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.