ADVERTISEMENT

ಅಪರೂಪದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಕೆಲವು ಕಾಲೇಜುಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ `ಫ್ರೆಶರ್ಸ್‌ ಡೇ~ ಮುಗಿದು ತಿಂಗಳುಗಳು ಕಳೆದರೂ ಇನ್ನೂ ಅದರ ಗುಂಗು ನಿಂತಿಲ್ಲ. ಕೆಲವೆಡೆ ಇನ್ನೂ `ವೆಲ್ ಕಂ ಡೇ~ ನಡೆಯುತ್ತಲೇ ಇದೆ. ಈಗಂತೂ ಇಂತಹ  ದಿನಾಚರಣೆಗಳು  ಕಾಲೇಜು ವಿದ್ಯಾರ್ಥಿಗಳ ಅವಿಭಾಜ್ಯ ಅಂಗವೇ ಆಗಿರುವುದರಿಂದ ಇವು ವರ್ಷದುದ್ದಕ್ಕೂ ನಡೆಯುತ್ತಲೇ ಇರುತ್ತವೆ. 

 ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿನ ಬಿಎನ್‌ಎಂ ಇನ್‌ಸ್ಟಿಟ್ಯೂಟ್‌ನಲ್ಲಿ ಇತ್ತೀಚೆಗೆ `ಫ್ರೆಶರ್ಸ್‌ ಡೇ~ ನಡೆಯಿತು. ಇಲ್ಲಿ ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳು ಜತೆಗೆ ಸೇರಿ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪಾಶ್ಚಾತ್ಯ ನೃತ್ಯವಾಗಲಿ, ರಾಕ್ ಬ್ಯಾಂಡ್‌ಗಳ ಅಬ್ಬರವಾಗಲಿ ಇರಲಿಲ್ಲ. ಅಪ್ಪಟ ಭಾರತೀಯ ನೃತ್ಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು.

 ಭರತನಾಟ್ಯ, ಸಿನಿಮಾ ಹಾಡು, ದೇಶಭಕ್ತಿ ಗೀತೆಗಳೇ ಕಾರ್ಯಕ್ರಮದುದ್ದಕ್ಕೂ ನಡೆದವು. ಪ್ರತಿಭೆಗಳೇ ತುಂಬಿದ್ದ ಹೊಸಬರ ತಂಡದಲ್ಲಿ ಸಾಂಪ್ರದಾಯಿಕ ನೃತ್ಯ ಶೈಲಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಯಿತು.

ವಿದ್ಯಾರ್ಥಿನಿಯರ ಭರತನಾಟ್ಯ ಪ್ರದರ್ಶನ ಮತ್ತಷ್ಟು ಕಳೆ ತುಂಬಿತು. ರೋಜಾ ಸಿನಿಮಾದ ಯೇ ಹಸೀನ್ ವಾದಿಯಾ ಹಾಡಿಗೆ ವಿದ್ಯಾರ್ಥಿಗಳು ಮಾರುಹೋದರು. ಇಷ್ಟೇ ಅಲ್ಲದೆ ಇದಾದ ಬಳಿಕ `ಜನನಿ ಜನ್ಮಭೂಮಿ~ ಎಂಬ ದೇಶಭಕ್ತಿ ಗೀತೆಯನ್ನು ವಿದ್ಯಾರ್ಥಿನಿಯರು ಹಾಡಿದರು.

`ಇಂಜಿನಿಯರಿಂಗ್ ಪದವಿ ಇಷ್ಟು ಆಸಕ್ತಿದಾಯಕವಾಗಿರುತ್ತದೆ ಎಂದು ನಾನು ಎಣಿಸಿರಲಿಲ್ಲ. ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಇಷ್ಟೊಂದು ಪ್ರೋತ್ಸಾಹ ದೊರೆಯುತ್ತದೆ ಎಂದು ನಾವೆಂದೂ ಎಣಿಸಿರಲಿಲ್ಲ~ ಎಂದು ವಿದ್ಯಾರ್ಥಿಗಳು ಇದೇ ವೇಳೆ ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳಿಗೆ ಬರೀ ಪಾಠ ಮಾತ್ರ ಆದರೆ ಸಾಲದು. ಪಾಠದ ಜತೆಗೆ ಪಾಠ್ಯೇತರ ಚಟುವಟಿಕೆಯೂ ಬೇಕು. ಅದಕ್ಕೇ ಕಾಲೇಜುಗಳಲ್ಲಿ ಆಗಾಗ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ ಎಂದು ಕಾಲೇಜು ಮುಖ್ಯಸ್ಥರು ಹೇಳುತ್ತಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.