ಚಾರ್ಲ್ಸ್ ಹಾರ್ಡಿನ್ ಹ್ಯಾಲಿ
`ಬಡಿ ಹ್ಯಾಲಿ~ ಎಂದೇ ಜನಪ್ರಿಯನಾಗಿದ್ದ ಅಮೆರಿಕದ ಚಾರ್ಲ್ಸ್ ಹಾರ್ಡಿನ್ ಹ್ಯಾಲಿ `ರಾಕ್ ಅಂಡ್ ರೋಲ್~ ಸಂಗೀತದ ಪ್ರವರ್ತಕರಲ್ಲಿ ಒಬ್ಬ.
1936ರ ಸೆಪ್ಟೆಂಬರ್ 7ರಂದು ಜನಿಸಿದ ಹ್ಯಾಲಿಯು ಹಾಡುಗಳ ರಚನಕಾರ ಮತ್ತು ಗಿಟಾರ್ ವಾದಕನಾಗಿದ್ದ. ಸಂಗೀತಲೋಕ ಪ್ರವೇಶಿಸಿದ ಕೇವಲ ಒಂದೂವರೆ ವರ್ಷದ ಅವಧಿಯಲ್ಲಿಯೇ ಜನಪ್ರಿಯತೆಯ ತುತ್ತತುದಿ ತಲುಪಿದ್ದ ಹ್ಯಾಲಿ ವಿಮಾನ ಅಪಘಾತದಲ್ಲಿ ಅಸುನೀಗಿದಾಗ (3 ಫೆಬ್ರುವರಿ 1959) ಕೇವಲ 23ವರ್ಷ.
`ರಾಕ್ ಅಂಡ್ ರೋಲ್~ನ ಆರಂಭದ ದಿನಗಳಲ್ಲಿ ಸೃಜನಾತ್ಮಕ ರೀತಿಯಲ್ಲಿ ಪ್ರಸ್ತುತ ಪಡಿಸಿದ ಮತ್ತು ಎಲ್ಲ ಕಾಲಕ್ಕೂ ಸಲ್ಲುವ ಕಲಾವಿದ~ ಎಂದು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರನಾಗಿದ್ದ ಹ್ಯಾಲಿ ತನ್ನ ಸಮಕಾಲೀನ ಮತ್ತು ನಂತರದ ಕಲಾವಿದರ ಮೇಲೆ ಬೀರಿದ ಪ್ರಭಾವ ಅನನ್ಯ.
1940-1950ರ ದಶಕದಲ್ಲಿ ಅಮೆರಿಕದಲ್ಲಿ ಜನಪ್ರಿಯ ಸಂಗೀತ ಪ್ರಕಾರವಾಗಿ ಬೆಳೆದ `ರಾಕ್ ಅಂಡ್ ರೋಲ್~ ಆಫ್ರಿಕಾ ಮತ್ತು ಅಮೆರಿಕದ ಮಿಶ್ರಣದಿಂದ ಕೂಡಿದಂತಹದು. ನಂತರದ ದಿನಗಳಲ್ಲಿ `ರಾಕ್~ ಸಂಗೀತಕ್ಕೆ ಸಮನಾರ್ಥಕ ಪದದಂತೆ ಬಳಕೆ ಆಗುತ್ತಿದೆ.
`ರಾಲಿಂಗ್ ಸ್ಟಾರ್~ ಪತ್ರಿಕೆಯು 2004ರಲ್ಲಿ ನಡೆಸಿದ ಸಮೀಕ್ಷೆಯ ನಂತರ ಪ್ರಕಟಿಸಿದ `ಸಂಗೀತಲೋಕದ ನೂರು ಅತ್ಯುತ್ತಮ ಕಲಾವಿದರ ಪಟ್ಟಿ~ಯಲ್ಲಿ ಹ್ಯಾಲಿ 13ನೇ ಸ್ಥಾನದಲ್ಲಿದ್ದ.
ತನ್ನ ಸಹಕಲಾವಿದರೊಂದಿಗೆ ಚಾರ್ಟರ್ ವಿಮಾನದಲ್ಲಿ ಪಯಣಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಾಗ ಪತ್ರಿಕೆಗಳು `ಸಂಗೀತವು ಮೃತಪಟ್ಟ ದಿನ~ ಎಂದು ಬಣ್ಣಿಸಿದ್ದವು.
ಜಿಮ್ ಮಾರಿಸನ್
ಅಮೆರಿಕದ `ದಿ ಡೋರ್ಸ್~ ರಾಕ್ ಬ್ಯಾಂಡ್‌ನ ಪ್ರಮುಖ ಕಲಾವಿದನಾಗಿದ್ದ ಜಿಮ್ ಮಾರಿಸನ್ ಕವಿ, ಗೀತ ರಚನಕಾರ, ಸಂಗೀತ ಸಂಯೋಜಕ ಕೂಡ. ಜೇಮ್ಸ ಡೌಗ್ಲಾಸ್ ಮಾರಿಸನ್ `ಜಿಮ್~ ಎಂಬ ಹೆಸರಿನಿಂದಲೇ ರಾಕ್‌ಲೋಕದಲ್ಲಿ ಚಿರಪರಿಚಿತ. 1943ರ ಡಿಸೆಂಬರ್ 8ರಂದು ಫ್ಲೋರಿಡಾದ ಮೆಲ್ಬೋರ್ನ್‌ನಲ್ಲಿ ಜನಿಸಿದ ಜಿಮ್ ನಾಲ್ಕನೇ ವಯಸ್ಸಿನ ಮಗುವಾಗಿದ್ದಾಗ ನೋಡಿದ ಅಪಘಾತ ಅವನ ಮೇಲೆ ಭಾರಿ ಪರಿಣಾಮ ಬೀರಿತು.
ಕಾರು ಅಪಘಾತದಲ್ಲಿ ನಾಲ್ವರು ಅಮೆರಿಕದ ಮೂಲನಿವಾಸಿಗಳು ಅಸುನೀಗಿದ್ದನ್ನು ಕಣ್ಣಾರೆ ಕಂಡ ಜಿಮ್ ಆ ಘಟನೆಯನ್ನು ತನ್ನ ಹಲವು ಕವಿತೆ, ಹಾಡುಗಳಲ್ಲಿ ಮೇಲಿಂದ ಮೇಲೆ ಉಲ್ಲೇಖಿಸಿದ್ದಾನೆ.
`ಎನ್ ಅಮೆರಿಕನ್ ಪ್ಲೇಯರ್~ ಆಲ್ಬಂನಲ್ಲಿನ `ಡಾನ್ಸ್ ಹೈವೇ~ ಹಾಡು ಅಪಘಾತದ `ಪರಿಣಾಮ~. 1967ರಲ್ಲಿ `ದಿ ಡೋರ್ಸ್~ನ ಜನಪ್ರಿಯತೆಯ ನಂತರ ಮಾದಕ ವ್ಯಸನಕ್ಕೆ ಜಿಮ್ ಬಲಿಯಾದ. ತನ್ನ 27ನೇ ವಯಸ್ಸಿನಲ್ಲಿ ಜಿಮ್ ಮೃತಪಟ್ಟಾಗ `ಹೆರಾಯಿನ್~ ಮಾದಕ ವಸ್ತು ವಿಪರೀತ ಸೇವಿಸಿದ್ದೇ ಕಾರಣ~ ಎಂದು ಹೇಳಲಾಯಿತು. ಆದರೆ, ಮರಣೋತ್ತರ ಪರೀಕ್ಷೆ ನಡೆಸದೇ ಇರುವುದರಿಂದ ಅವನ ಸಾವು ಮಾತ್ರ ನಿಗೂಢವಾಗಿಯೇ ಉಳಿಯಿತು.
ಆಡುಮಾತನ್ನು ಕವಿತೆಯಾಗಿಸಿದ. ಅದಕ್ಕೆ ದನಿ, ಧ್ವನಿತುಂಬಿ ಹಾಡುವಲ್ಲಿ ಜಿಮ್ ಮಾರಿಸನ್ ಹೆಸರುವಾಸಿಯಾಗಿದ್ದ. ವೇದಿಕೆಯಲ್ಲಿ ಆಡುವಾಗ, ಹಾಡುವಾಗ ಬಳಸುತ್ತ `ಮಾತೇ ಹಾಡಾಗಿಸುವ~ ಜಿಮ್‌ನ ತಂತ್ರ ಅವನಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.
ರಾಕ್ ಸಂಗೀತದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಕಲಾವಿದ ಎಂಬ ಹೆಗ್ಗಳಿಕೆಗೆ ಜಿಮ್ ಪಾತ್ರನಾಗಿದ್ದ. `ರಾಲಿಂಗ್ ಸ್ಟಾರ್~ ಪತ್ರಿಕೆಯು ನಡೆಸಿದ ಸಮೀಕ್ಷೆಯಲ್ಲಿ `ಸಾರ್ವಕಾಲಿನ ನೂರು ಜನ ರಾಕ್ ಕಲಾವಿದರ ಪಟ್ಟಿ~ಯಲ್ಲಿ 22ನೇ ಸ್ಥಾನದಲ್ಲಿದ್ದಾನೆ. ಹಾಗೆಯೇ `ಕ್ಲಾಸಿಕ್ ರಾಕ್ ಮ್ಯಾಗಜೀನ್~ನ 50 ಅತ್ಯುತ್ತಮ ಕಲಾವಿದರ ಪಟ್ಟಿಯಲ್ಲಿಯೂ ಜಿಮ್‌ನ ಹೆಸರಿದೆ.
ಕುರ್ತ್ ಡೊನಾಲ್ಡ್ ಕೊಬೈನ್
ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಆರಂಭಿಸಿದ `ನಿರ್ವಾಣ~ ಬ್ಯಾಂಡ್‌ನ ಗಾಯಕ, ಸಂಗೀತ ಸಂಯೋಜಕ, ಗಿಟಾರ್ ವಾದಕ ಕುರ್ತ್ ಡೊನಾಲ್ಡ್ ಕೊಬೈನ್ ತನ್ನ ಮೊದಲ ಆಲ್ಬಂ `ಬ್ಲೀಚ್~ ಮೂಲಕವೇ ಜನಪ್ರಿಯತೆಯ ಅಂಚು ತಲುಪಿದ್ದ. 1967ರ ಫೆಬ್ರುವರಿ 20ರಂದು ವಾಷಿಂಗ್ಟನ್‌ನಲ್ಲಿ ಜನಿಸಿದ ಕೊಬೈನ್‌ನದು ಸಂಗೀತದ ಹಿನ್ನೆಲೆ ಇದ್ದ ಕುಟುಂಬ.
ಬ್ಯಾಂಡ್ ಮ್ಯೂಸಿಕ್‌ನಲ್ಲಿ ಹೆಸರುವಾಸಿಯಾಗಿದ್ದ ಮಾವನ ಗರಡಿಯಲ್ಲಿ ಸಂಗೀತದ ಪಾಠ ಆರಂಭವಾದಾಗ ಕೊಬೈನ್‌ಗೆ ಕೇವಲ ಎರಡು ವರ್ಷ. ಕೊಬೈನ್ 9ನೇ ವರ್ಷದವನಿದ್ದಾಗಲೇ ತಂದೆ-ತಾಯಿ ವಿಚ್ಛೇದನ ಪಡೆದು ಬೇರೆ ಮದುವೆಯಾದದ್ದರಿಂದ `ಅನಾಥ~ ಪ್ರಜ್ಞೆಗೆ ಒಳಗಾದ. ಜೈನ ಮತ್ತು ಬೌದ್ಧಮತಗಳ ಸಿದ್ಧಾಂತಗಳಲ್ಲಿ ಆಸಕ್ತಿ ತಳೆದ ಕೊಬೈನ್ ಆ ಕಾರಣದಿಂದಲೇ ತನ್ನ ಬ್ಯಾಂಡ್‌ಗೆ `ನಿರ್ವಾಣ~ ಎಂದು ಹೆಸರಿಟ್ಟಿದ್ದ.
ಆ `ತನ್ನ ತಲೆಮಾರಿನವರ ಭಾವನೆಗಳ ವಕ್ತಾರ~ ಎಂದು ಗುರುತಿಸಲಾಗುವ ಕೊಬೈನ್‌ನ ಹಾಡು-ಸಂಗೀತವು ಅವನನ್ನು ಪ್ರಖ್ಯಾತನನ್ನಾಗಿ ಮಾಡಿತು. ಅದರ ಫಲವಾಗಿ ಕೊಬೈನ್‌ನ ವೈಯಕ್ತಿಕ ಬದುಕಿನ ಸಂಗತಿಗಳೇ ಮಾಧ್ಯಮಗಳಲ್ಲಿ ಹೆಚ್ಚು ಚಾಲ್ತಿಗೆ ಬಂದವು.
ಅವನ ಪತ್ನಿಯ ಜೊತೆಗಿನ ಭಿನ್ನಾಭಿಪ್ರಾಯ, ಮಾದಕ ವ್ಯಸನ ಹೀಗೆ ಸಂಗೀತೇತರ ಕಾರಣಗಳಿಗಾಗಿ ಹೆಚ್ಚು ಸುದ್ದಿಯಲ್ಲಿ ಇರುವಂತಾದದ್ದು ಕೊಬೈನ್ ಕಂಗಾಲಾಗುವಂತೆ ಮಾಡಿತು. 1994ರ ಏಪ್ರಿಲ್ 5ರಂದು ತನ್ನ 27ನೇ ವಯಸ್ಸಿನಲ್ಲಿ ಹತಾಶನಾಗಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ.
ಆದರೆ, ಅವನ ಸಾವಿನ ಕುರಿತ ಕತೆ-ದಂತಕತೆಗಳು ಹಲವು ಕಾಲ ರೆಕ್ಕೆಪುಕ್ಕಗಳೊಂದಿಗೆ ಹಾರಾಡಿದವು. `ನಿರ್ವಾಣ~ ಬ್ಯಾಂಡ್‌ನಿಂದ ಅಮೆರಿಕದಲ್ಲಿಯೇ 25 ದಶಲಕ್ಷ ಮತ್ತು ವಿಶ್ವದಾದ್ಯಂತ 50 ದಶಲಕ್ಷ ಆಲ್ಬಂಗಳು ಮಾರಾಟವಾದದ್ದು ಒಂದು ದಾಖಲೆ.
ಓಟಿಸ್ ರೆಡ್ಡಿಂಗ್
`ಸೋಲ್~ ಗಾಯಕ- ಗೀತ ರಚನಕಾರ, ಆಯೋಜಕ ಆಗಿದ್ದ ಓಟಿಸ್ ರೆ ರೆಡ್ಡಿಂಗ್ (ಜ್ಯೂನಿಯರ್) ಜನಪ್ರಿಯ ಸಂಗೀತ ಪ್ರಕಾರವಾದ `ಸೋಲ್ ಸಂಗೀತ~ದ ಪ್ರಮುಖ ಕಲಾವಿದ. ಮುಕ್ತಕಂಠದಿಂದ ಹಾಡುತ್ತಿದ್ದ ಓಟಿಸ್‌ನ ಹಾಡು 1960ರ ದಶಕದಲ್ಲಿ ಹುಚ್ಚು ಹಿಡಿಸುವಂತಿತ್ತು.
1950-60ರ ದಶಕದಲ್ಲಿ ಆಫ್ರಿಕಾದ ಸಂಗೀತದ ಪಲುಕುಗಳು ಅಮೆರಿಕದ ಧಾರ್ಮಿಕ ಸಂಗೀತದ ಜೊತೆ ಬೆರೆತ ಪರಿಣಾಮದಿಂದ ಹುಟ್ಟಿ, ಜನಪ್ರಿಯವಾದ ಸಂಗೀತ ಪ್ರಕಾರ `ಸೋಲ್ ಮ್ಯೂಸಿಕ್~. 1941ರ ಸೆಪ್ಟೆಂಬರ್ 9ರಂದು ಜಾರ್ಜಿಯಾದ ಡಾಸನ್‌ನಲ್ಲಿ ಜನಿಸಿದ ಓಟಿಸ್ 15ನೇ ವಯಸ್ಸಿನಲ್ಲಿಯೇ ಕುಟುಂಬಕ್ಕೆ `ಸಹಾಯ~ ಆಗಲಿ ಎಂದು ಬ್ಯಾಂಡ್ ಸೇರಿಕೊಂಡ.
1967ರಲ್ಲಿ ನಡೆದ `ಮಾಂಟ್ರೆ ಪಾಪ್ ಫೆಸ್ಟಿವಲ್~ನಲ್ಲಿ ಕಾಣಿಸಿಕೊಂಡ ನಂತರ ರಚಿಸಿದ `ಡಾಕ್ ಆಫ್ ದಿ ಬೇ~ ಜನಪ್ರಿಯತೆಯ ತುದಿಗೇರಿತ್ತು. ಅಮೆರಿಕದ ನಂಬರ್ ಒನ್ ಹಾಡು ಎಂಬ ಖ್ಯಾತಿಗೆ ಒಳಗಾಗಿದ್ದ `ಡಾಕ್ ಆಫ್ ದಿ ಬೇ~ ಮರಣೋತ್ತರ ಜನಪ್ರಿಯವಾದದ್ದು ವಿಷಾದದ ಸಂಗತಿ. `ಸ್ಟ್ಯಾಕ್ಸ್ ರೆಕಾರ್ಡ್ಸ್~ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡ ಓಟಿಸ್ 1964ರಲ್ಲಿ `ಪೇನ್ ಇನ್ ಮೈ ಹಾರ್ಟ್~ ಅಲ್ಬಂ ಹೊರತಂದಿದ್ದ.
ಗಾಯಕ, ಪಿಯಾನೋ, ಗಿಟಾರ್ ವಾದಕನಾಗಿದ್ದ ಓಟಿಸ್ ತನ್ನ 26ನೇ ವಯಸ್ಸಿನಲ್ಲಿ ವಿಮಾನ ಅಪಘಾತದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ. ಓಟಿಸ್‌ನ ನಿಧನದ ನಂತರ `ಸ್ಟ್ಯಾಕ್ಸ್ ರೆಕಾರ್ಡ್ಸ್~ ಕಂಪೆನಿಯು ಬಹುತೇಕ ದಿವಾಳಿಯ ಅಂಚು ತಲುಪಿತ್ತು. ಓಟಿಸ್‌ನ ಹಾಡುಗಳ ಹಕ್ಕು ದೊರೆತದ್ದರಿಂದ ಚೇತರಿಸಿಕೊಂಡಿತು. ಜೀವಮಾನದ ಸಾಧನೆಗಾಗಿ ಗ್ರ್ಯಾಮ್ಮಿ ಅವಾರ್ಡ್ ಸೇರಿದಂತೆ ಹಲವು ಗೌರವಗಳು ಓಟಿಸ್‌ನಿಗೆ ಮರಣೋತ್ತರವಾಗಿ ದೊರೆತವು. `ಕಿಂಗ್ ಆಫ್ ಸೋಲ್~ ಎಂಬ ಹೆಗ್ಗಳಿಕೆಗೆ ಓಟಿಸ್ ಪಾತ್ರನಾಗಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.