ADVERTISEMENT

ಆಟೊಟೆಕ್

ಪ್ರಜಾವಾಣಿ ವಿಶೇಷ
Published 11 ಜುಲೈ 2012, 19:30 IST
Last Updated 11 ಜುಲೈ 2012, 19:30 IST

ಅಚ್ಚು ಮತ್ತು ಕಂಭ
ಸೈಕಲ್ ಒಂದರಲ್ಲಿ ಸರಿಸುಮಾರು ಸಾವಿರ ಬಿಡಿಭಾಗಗಳು ಇರುತ್ತವೆ ಎಂದರೆ ನಂಬಲು ಸಾಧ್ಯವೆ. ನಂಬಲೇ ಬೇಕು. ಏಕೆಂದರೆ ಸೈಕಲ್ ಒಂದು ಪರಿಪೂರ್ಣ ವಾಹನ. ಸೈಕಲ್‌ಗಳಿಂದಲೇ ವಾಹನ ಲೋಕದ ಎಲ್ಲ ಸಾಧ್ಯತೆಗಳು ತೆರೆದುಕೊಂಡಿದ್ದು.

ಸೈಕಲ್ ತುಳಿಯುವವರ ಸಂಖ್ಯೆ ಇಂದಿಗೂ ವಿಶ್ವಾದ್ಯಂತ ಹೆಚ್ಚೇ ಇದೆ. ಕೇವಲ ಸಂಚಾರದ ಸಾಧನವನ್ನಾಗಿ ಸೈಕಲ್ ಬಳಸುವವರು ಇದ್ದರೂ, ಮೋಜಿಗಾಗಿ, ಸಾಹಸಕ್ಕಾಗಿ ಬಳಸುವವರೂ ಈಗ ಕಡಿಮೆಯೇನಿಲ್ಲ.

ಸೈಕಲ್ ಅನ್ನು ನಾವೆಲ್ಲರೂ ಬಳಸಿರುತ್ತೇವೆಯಾದರೂ, ಅದರ ಬಿಡಿಭಾಗಗಳ ಬಗ್ಗೆ ನಮಗೆ ತಿಳಿವಳಿಕೆಯೇ ಇರುವುದಿಲ್ಲ. ಕೆಲವರಿಗೆ ಸೈಕಲ್ ಕೆಟ್ಟರೆ ರಿಪೇರಿ ಮಾಡುವಷ್ಟು ಕುಶಲತೆಯೂ ಇರುತ್ತದೆ. ಆದರೆ ಅದರ ಬಿಡಿಭಾಗಗಳ ಹೆಸರು ತಿಳಿದಿರುವುದಿಲ್ಲ.

ಸೀಟ್ ಪೋಸ್ಟ್
ಸೀಟ್ ಪೋಸ್ಟ್ ಅಥವಾ ಸ್ಯಾಡಲ್ ಪೋಸ್ಟ್ ಎಂದು ಕರೆಯಲಾಗುವ ಈ ಸಾಧನ ವಾಸ್ತವದಲ್ಲಿ ಯಾವುದೇ ರೀತಿಯ ಚಲನೆಯ ಕಾರ್ಯದಲ್ಲಿ ತೊಡಗಿಕೊಂಡಿರುವುದಿಲ್ಲ. ಬದಲಿಗೆ ಇದು ಸೈಕಲ್‌ಗೆ ಸ್ಥಿರತೆಯನ್ನು, ಸವಾರನಿಗೆ ಉತ್ತಮ ಸಮತೋಲನವನ್ನು ತಂದು ಕೊಡುತ್ತದೆ.
 
ಇದು ಒಂದು ಸಾಮಾನ್ಯ ಕೊಳವೆ. ಆರಂಭದಲ್ಲಿ ಸೈಕಲ್‌ಗಳನ್ನು ಕೊಳವೆಯ ಬದಲಿಗೆ ಸರಳುಗಳಲ್ಲಿ ತಯಾರಿಸಿದ್ದರಂತೆ. ಸರಳಿಗೆ ಕೊಳವೆಗಿಂತ ಸಾಂದ್ರತೆ ಕಡಿಮೆ. ಜತೆಗೆ ತೂಕವೂ ಹೆಚ್ಚು. ಹಾಗಾಗಿ ಈಗ ಸೈಕಲ್ ಸೇರಿದಂತೆ ಯಾವ ವಾಹನದಲ್ಲೂ ಸರಳಿನ ಬಳಕೆ ಇಲ್ಲ.

ಅಂತೆಯೇ ಸೀಟ್ ಪೋಸ್ಟ್ ಸಹ, ಉತ್ತಮ ಸಾಂದ್ರತೆಯುಳ್ಳ ಲೋಹದಿಂದ ಮಾಡಿದ ಕೊಳವೆ. ಸ್ಟ್ರೀಟ್ ಬೈಕ್, ಮೌಂಟೇನ್ ಬೈಕ್‌ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ವಿವಿಧ ಉದ್ದಗಳ ಪೋಸ್ಟ್ ಬಳಕೆಯಾಗುತ್ತದೆ. ಉದ್ದವನ್ನು ಸರಿಹೊಂದಿಸಿಕೊಳ್ಳಬಲ್ಲ ಸುಲಭ ಬಳಕೆಯ ಕೀಲಿಯೂ ಈಗ ಸೈಕಲ್‌ನ ಸೀಟ್‌ನ ಬಳಿಯೇ ಇರುತ್ತದೆ.

ವ್ಹೀಲ್ ಹಬ್
ಚಕ್ರವೊಂದನ್ನು ಬಿಚ್ಚಿದರೆ ಅದು ಸುಮಾರು ಭಾಗಗಳಾಗಿ ತೆರೆದುಕೊಳ್ಳುತ್ತದೆ. ಸ್ಪೋಕ್, ರಿಮ್, ನಿಪ್ಪಲ್, ಟಯರ್, ಟ್ಯೂಬ್ ಹಾಗೂ ಅತಿ ಮುಖ್ಯವಾದದ್ದು ಹಬ್. ಸೈಕಲ್‌ನ ಚಕ್ರದಲ್ಲಿ ಸ್ಪೋಕ್‌ಗಳು ಚಕ್ರದ ಕಂಪನಗಳನ್ನು ಹೀರಿಕೊಂಡು ಸಸ್ಪೆನ್ಷನ್ ಸಿಸ್ಟಂನಂತೆ ಕಾರ್ಯನಿರ್ವಹಿಸುತ್ತವೆ.

ಸ್ಪೋಕ್ ಅನ್ನು ರಿಮ್ ಹಾಗೂ ಚಕ್ರದ ಆಕ್ಸೆಲ್ ನಡುವೆ ಬಂಧಿಸುವ ಸಾಧನವೇ ಹಬ್.  ಈ ಸ್ಪೋಕ್ ಅನ್ನು ಬಿಗಿಗೊಳಿಸುವ ಸಾಧನ ನಿಪ್ಪಲ್. ಹಬ್‌ನಲ್ಲಿ ಸಮಾನಾಂತರವಾಗಿ ಹಾಗೂ ಪರಸ್ಪರ ವಿರುದ್ಧ ದಿಕ್ಕಿಗೆ ಮುಖಮಾಡಿದ ರಂಧ್ರಗಳಿರುತ್ತವೆ. ಇದರಿಂದ ಚಕ್ರಕ್ಕೆ ಬಿಗಿ ಹಿಡಿತ ಸಿಕ್ಕುತ್ತದೆ. ಚಕ್ರದ ಕಾರ್ಯಕ್ಷಮತೆ ಹೆಚ್ಚುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.