ADVERTISEMENT

ಕಾಲೇಜಲ್ಲಿ ಕಂಡ ಅಚ್ಚರಿಯ ಹೆಸರುಗಳು

ಚಾಣುಕ್ಯ.ಎಂ
Published 26 ಏಪ್ರಿಲ್ 2011, 19:30 IST
Last Updated 26 ಏಪ್ರಿಲ್ 2011, 19:30 IST

ಕರ್ಣ ದೋಷವಿದ್ದರೆ ಎಂದಾದರೂ ಹೇಗಾದರೂ ಸರಿ ಪಡಿಸಬಹುದು, ಆದರೆ ನಾಮಕರಣ ದೋಷವಿದ್ದರೆ ಆತ ಅನುಭವಿಸುವ ಬಾಧೆ ಅಷ್ಟಿಷ್ಟಲ್ಲ. ಹುಡುಗಿಗೆ ಅಕ್ಕಮ್ಮ ಎಂದು ಹೆಸರಿಟ್ಟರೆ ಮುಂದೆ ಕೈ ಹಿಡಿಯುವ ಪತಿ ಮಹಾಶಯ ಅಕ್ಕ ಎಂದು ಕರೆಯುತ್ತಾನೋ? ಅಥವಾ ಅಮ್ಮ ಎಂದು ಕರೆಯುತ್ತಾನೋ? ಎಂಬ ಗೊಂದಲ ಮೂಡುತ್ತದೆ ಇದು ಒಂದು ಜೋಕ್ ಅಷ್ಟೇ.

ಹೆಸರಲ್ಲಿನ ಇಂತಹ ಸಣ್ಣ ಪುಟ್ಟ ಎಡವಟ್ಟುಗಳು ವಿದ್ಯಾರ್ಥಿ ದಿಸೆಯಲ್ಲಿ ಎಲ್ಲಿಯಾದರೂ ಹೇಗಾದರೂ ಒಂದಲ್ಲಾ ಒಂದು ದಿನ ಕಾಡುತ್ತದೆ. ಇಂತಹ ಕೆಲ ಹೆಸರುಗಳು ಪರಿಚಿತವಾಗಿದ್ದು ಮೈಸೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿದ್ದಾಗ.

ಅದು ಕಾಲೇಜಿನ ಮೊದಲ ದಿನ. ಎಲ್ಲರನ್ನೂ ಎಲ್ಲರಿಗೂ ಪರಿಚಯ ಮಾಡಿಕೊಡುವ ಒಂದು ಔಪಚಾರಿಕ ಕ್ಷಣಗಳು ಅಂದು ಎದುರಾದವು. ಎಲ್ಲರೂ ಎದ್ದು ತಮ್ಮ ತಮ್ಮ ನಾಮಾಂಕಿತಗಳನ್ನು ಸಾಲು ಸಾಲಾಗಿ ಹೇಳ ಹೊರಟಾಗ ನೆರೆದಿದ್ದವರ ಮೊಗದಲ್ಲಿ ಅಚ್ಚರಿ.ಅಲ್ಲಿಯವರೆಗೂ ಕಂಡು ಕೇಳಿರದ ಹೆಸರುಗಳು ನಮ್ಮಲ್ಲಿಯೇ ಸೇರಿ ಹೋಗಿದ್ದವು.

ಮೊದಲು ಅಚ್ಚರಿ ಹುಟ್ಟಿಸಿದ ಹೆಸರು ಗೆಳೆಯರ ಬಳಗದಲ್ಲಿಯೇ ಮೆಚ್ಚಿನವನಾದ ಲಲಾಟಾಕ್ಷನ ಹೆಸರು. ಉಚ್ಚರಿಸಲು ಕಷ್ಟವಾಗುತ್ತಿದ್ದ ಈತನ ಹೆಸರು ಕಲಿಯಲು ತಿಂಗಳುಗಳೇ ಹಿಡಿಯಿತು.ಕೊನೆಗಂತು ಉಚ್ಚರಿಸಲು ಬಾರದ ಗೆಳೆಯರಿಗೆ ಆತ ‘ಲಟ’ ಆದ.

ಅವಳು ಎಲ್ಹಾಮ್ ದೂರದ ಇಟಲಿ ದೇಶದವಳು. ಆದರೆ ಭಾರತೀಯ ಸಂಸ್ಕೃತಿಯ ಮೇಲೆ ಅಪಾರ ಪ್ರೀತಿ ಇದ್ದಾಕೆ. ಮಾನಸ ಗಂಗೋತ್ರಿಗೆ ಪ್ರವೇಶ ಪಡೆದ ನಂತರ  ಆಕೆಯ ಹೆಸರನ್ನು ‘ಎಲ್ಲಮ್ಮ’ನೆಂದು ಬದಲಾಯಿಸಿದ್ದು ಉಂಟು. ಹೆಸರಿಗೆ ತಕ್ಕಂತೆ ಆಗಾಗ್ಗೆ ಆಕೆ ನೃತ್ಯಮಾಡಿ ಎಲ್ಲರನ್ನೂ ನಗಿಸುತ್ತಿದ್ದಳು.

ರುದ್ರಗೌಡ ಎಲ್ಲರಿಗಿಂತ ತಡವಾಗಿ ತರಗತಿಗೆ ಬಂದ ಆಸಾಮಿ. ಅವನ ಬರುವಿಕೆಗೂ ಮುನ್ನ ಕೆಲವರು ಆತನ ಹೆಸರು ಇಷ್ಟು ರೌದ್ರವಾಗಿದೆ ಎಂದರೆ ಆತ ಮುಂಗೋಪಿಯೇ ಆಗಿರಬೇಕೆಂದು ಊಹಿಸಿದ್ದುಂಟು. ಮತ್ತೆ ಕೆಲವರಂತೂ ದಪ್ಪ ಮೀಸೆಯವನಾಗಿರಬೇಕೆಂದು ಕಲ್ಪನೆ ಮಾಡಿಕೊಂಡದ್ದೂ ಉಂಟು.

ಆದರೆ ಎಲ್ಲರ ಎಣಿಕೆ ತಪ್ಪಾದದ್ದು ಆತ ತರತಿಗೆ ಬಂದ ನಂತರವೆ. ದಪ್ಪದೊಂದು ಪುಸ್ತಕ ಹಿಡಿದು ಹೈಸ್ಕೂಲು ಹುಡುಗನಂತೆ ಬಂದ ಆತ ನಗೆ ಪಾಟಲಿಗೆ ಸಿಕ್ಕ ಮೊದಲಿಗ. ಆಕೆ ಹೆಸರು ಮಾನ್ಯ ಸದಾ ಹಸನ್ಮುಖಿ. ಹೆಸರು ಸರಳ ಆದರೂ ಹೊಸತು. ಕಾಲೇಜು ಕಾರ್ಯಕ್ರಮಗಳಲ್ಲಿ ಮಾನ್ಯ ಅತಿಥಿಗಳೇ, ಮಾನ್ಯ ಪತ್ರಕರ್ತರೇ ಎಂದು ಧ್ವನಿ ವರ್ಧಕದಲ್ಲಿ ಹೇಳುವಾಗ ಆಕೆಯನ್ನು ಎಲ್ಲರೂ ಛೇಡಿಸುತ್ತಿದ್ದದ್ದು ಉಂಟು.

ಆಕೆ ಹೆಸರು ಶ್ರೀಮತಿ ನನಗಾಕೆಯ ಪರಿಚಯವಿಲ್ಲ. ಆದರೂ ಆಕೆಯ ವಿಭಿನ್ನ ಹೆಸರಿನ ಪ್ರಭಾವದಿಂದ ಹಲವರಿಗೆ ಆಕೆಯ ಮುಖ ಪರಿಚಿತ. ಸ್ನಾತಕೋತ್ತರ ಇಂಗ್ಲಿಷ್ ತರಗತಿಯವಳಾದರೂ ಇತರರಿಗೆ ಈಕೆ ಹೆಸರು ಸೋಜಿಗದಂತೆ ಸೆಳೆದದ್ದುಂಟು.

ಮದುವೆಯಾಗದಿದ್ದರೂ ಈಕೆ ಹೆಸರು ಶ್ರೀಮತಿ ಹೇಗೆಂದು ನಮ್ಮಲ್ಲೇ ಚರ್ಚೆಯಾದದ್ದೂ ಉಂಟು. ಕಾಲೇಜಲ್ಲಿ ಕಂಡ ಅಚ್ಚರಿಯ ಹೆಸರುಗಳು ಇನ್ನೂ ನೆನಪಿವೆ. ಅಕಸ್ಮಾತಾಗಿ ಇವರೆಲ್ಲ ಸಾಮಾನ್ಯರಂತೆ ಹೆಸರಿಟ್ಟುಕೊಂಡಿದ್ದರೆ ಎಷ್ಟೆಲ್ಲಾ ವಿನೋದದ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೆವು ಅಲ್ಲವೇ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.