ADVERTISEMENT

ಜ್ಞಾನದ- ಬೆಳಕಿನ ಬೆನ್ನುಹತ್ತಿ ಹೋದವರು

ಪುನರ್ವಸು
Published 29 ಆಗಸ್ಟ್ 2012, 19:30 IST
Last Updated 29 ಆಗಸ್ಟ್ 2012, 19:30 IST
ಜ್ಞಾನದ- ಬೆಳಕಿನ ಬೆನ್ನುಹತ್ತಿ ಹೋದವರು
ಜ್ಞಾನದ- ಬೆಳಕಿನ ಬೆನ್ನುಹತ್ತಿ ಹೋದವರು   

`ಸರ್ವಜ್ಞ~ ಸೋಮೇಶ್ವರ
ಕಲ್ಯಾಣಿ ಚಾಲುಕ್ಯ ಸಾಮ್ರಾಟ ಆರನೇ ವಿಕ್ರಮಾದಿತ್ಯ ವಿಖ್ಯಾತ ದೊರೆಗಳಲ್ಲಿ ಒಬ್ಬ. ಅರವತ್ತು ವರ್ಷಗಳ ಕಾಲ ಅರಸೊತ್ತಿಗೆಯ ಮೇಲೆ ಕುಳಿತಿದ್ದ ವಿಕ್ರಮ ಭಾರತದಲ್ಲಿಯೇ ಅತಿಹೆಚ್ಚು ಶಾಸನಗಳನ್ನು ಬರೆಸಿದ ದೊರೆ.
 
ಅವನ ಮಗನೇ ಮೂರನೇ ಸೋಮೇಶ್ವರ (ಕ್ರಿ.ಶ.1127ರಿಂದ 38). `ಸರ್ವಜ್ಞ ಸೋಮೇಶ್ವರ~ ಎಂದುಖ್ಯಾತನಾಗಿರುವ ಸೋಮೇಶ್ವರ ಪ್ರಭುತ್ವದ ಗುಂಗಿನಲ್ಲಿ ಸಿಲುಕದೇ ಜ್ಞಾನ-ಚಿಂತನೆಗಳಲ್ಲಿ ತೊಡಗಿಸಿಕೊಂಡಿದ್ದ. 12ನೇ ಶತಮಾನದ ಪೂರ್ವಾರ್ಧದಲ್ಲಿ ಇದ್ದ ಸೋಮೇಶ್ವರನು ರಚಿಸಿದ ಸಂಸ್ಕೃತ ವಿಶ್ವಕೋಶ `ಮಾನಸೋಲ್ಲಾಸ~ ಕೃತಿಯು ಅವನ ವಿದ್ವತ್ತು ಮತ್ತು ಜ್ಞಾನಕ್ಕೆ ಕನ್ನಡಿ ಹಿಡಿದಂತಿದೆ.
 
ನೂರು ಅಧ್ಯಾಯಗಳನ್ನು ಐದು ವಿಂಶತಿಗಳಲ್ಲಿ ವಿಂಗಡಿಸಲಾಗಿರುವ `ಮಾನಸೋಲ್ಲಾಸ~ದಲ್ಲಿ 20 ಘಟಕಗಳಿವೆ. ಕಲೆ, ಸಾಹಿತ್ಯ, ಸಂಸ್ಕೃತಿ, ಆಡಳಿತ, ಆಹಾರ, ವಿನೋದಗಳನ್ನು ಕುರಿತು ವಿವರವಾಗಿ ಚರ್ಚಿಸಿದ್ದಾನೆ. `ಮಾನಸೋಲ್ಲಾಸ~ ಗ್ರಂಥವನ್ನು ಸೋಮೇಶ್ವರನು `ಮನಭಿಷಲತಾರ್ಥ ಚಿಂತಾಮಣಿ~ ಎಂದು ಕರೆದುಕೊಂಡಿದ್ದಾನೆ.

`ಮಾನಸೋಲ್ಲಾಸ ಗ್ರಂಥದಲ್ಲಿ ಎಲ್ಲವೂ ಇದೆ. ಅಲ್ಲಿ ಇಲ್ಲದಿರುವುದು ಎಲ್ಲಿಯೂ ಇಲ್ಲ~ ಎಂಬ ಮಾತು ಚರ್ಚೆಯಲ್ಲಿದೆ. ಸೋಮೇಶ್ವರನು ತನ್ನ ತಂದೆ ವಿಕ್ರಮಾದಿತ್ಯನನ್ನು ನಾಯಕನನ್ನಾಗಿಸಿ `ವಿಕ್ರಮಾಭ್ಯದಯಂ~ ಕಾವ್ಯ ರಚಿಸಿದ್ದಾನೆ. ವಿಕ್ರಮಾದಿತ್ಯನ ನಂತರ ರಾಜ್ಯಭಾರ ನಡೆಸುವ ಅವಕಾಶ ಸೋಮೇಶ್ವರನಿಗೆ ದೊರೆಯಿತಾದರೂ `ರಾಜ~ನಾಗಿ ಯಶ ಕಾಣುವುದು ಈ ವಿದ್ವಾಂಸನಿಗೆ ಸಾಧ್ಯವಾಗಲಿಲ್ಲ.
 

ಜೇಬುನ್ನೀಸಾ

ದೆಹಲಿಯನ್ನಾಳಿದ ಕೊನೆಯ ಪ್ರಮುಖ ಮೊಗಲ್ ದೊರೆ ಔರಂಗಜೇಬ್. `ಆಲಂಗೀರ್~ ಎಂದೇ ಖ್ಯಾತನಾಗಿರುವ ಔರಂಗಜೇಬ್‌ನ ಪ್ರೀತಿಪಾತ್ರಳಾಗಿದ್ದ ಜೇಬುನ್ನಿಸಾ (1637-1702) ದೊರೆಯ ಆಡಳಿತದಲ್ಲಿ ಸಲಹೆ-ಸೂಚನೆ ನೀಡುತ್ತಿದ್ದವಳು. ಇರಾನ್‌ನ ಸೂಫಿ ಕವಿ ಶೇಕ್ ಫರೀದುದ್ದೀನ್ ಅತ್ತಾರ್‌ನ ಕಾವ್ಯದಿಂದ ಪ್ರೇರಣೆ ಪಡೆದು ಕಾವ್ಯ ರಚಿಸಿದ ಕವಿಯಿತ್ರಿ.

`ಮಕ್ಫಿ~ ಕಾವ್ಯನಾಮದಿಂದ ಕವಿತೆಗಳನ್ನು ಬರೆದ ಜೇಬುನ್ನಿಸಾಳ ಕವಿತೆಗಳು `ದಿವಾನ್ ಎ ಮಕ್ಫಿ~ ಎಂಬ ಸಂಕಲನದಲ್ಲಿ ಸೇರಿವೆ. ತನ್ನ ಏಳನೇ ವಯಸ್ಸಿನಲ್ಲಿಯೇ ಕುರಾನ್ ಬಾಯಿಪಾಠ ಒಪ್ಪಿಸುತ್ತಿದ್ದ ಜೇಬುನ್ನೀಸಾ ತತ್ವಜ್ಞಾನ, ಖಗೋಳವಿಜ್ಞಾನ, ಸಾಹಿತ್ಯಗಳಲ್ಲಿ ಆಸಕ್ತಿ ಹೊಂದಿದ್ದಳು. ಅರಬ್ಬಿ, ಪಾರಸಿ, ಉರ್ದು ಭಾಷೆಗಳಲ್ಲಿ ಪರಿಣಿತಳಾಗಿದ್ದ ಜೇಬುನ್ನೀಸಾ `ಕ್ಯಾಲಿಗ್ರಫಿ~ ಕಲೆಯಲ್ಲಿಯೂ ನಿಷ್ಣಾತಳಾಗಿದ್ದಳು.
 
ಜೇಬುನ್ನೀಸಾ ತನ್ನ 14ನೇ ವಯಸ್ಸಿನಲ್ಲಿಯೇ ಕವಿತೆ ಬರೆಯಲು ಆರಂಭಿಸಿದಳಾದರೂ ಬಹುದಿನಗಳವರೆಗೆ ತಂದೆಯಿಂದ ಅದನ್ನು ಗುಟ್ಟಾಗಿಟ್ಟಿದ್ದಳು. ಐದು ಸಾವಿರಕ್ಕೂ ಹೆಚ್ಚು ಪದ್ಯ ರಚಿಸಿರುವ ಜೇಬುನ್ನೀಸಾ ಕವಿತೆ ಬರೆಯುವ ಸಂಗತಿ ತಿಳಿದ ದೊರೆ ಔರಂಗಜೇಬ್ ಅವಳನ್ನು ಸೆರೆವಾಸಕ್ಕೆ ತಳ್ಳಿದ. ತನ್ನ ಕೊನೆಯ 20 ವರ್ಷಗಳನ್ನು ಸಲೀಂಗಢ ಕೋಟೆಯಲ್ಲಿ ಸೆರೆಯಾಳಾಗಿ ಕಳೆದ ಜೇಜುನ್ನೀಸಾಳ `ಪ್ರೇಮ~ಪದ್ಯಗಳು ಕಾವ್ಯಾಸಕ್ತರ ಗಮನ ಸೆಳೆಯುವಂತಿವೆ.

ಉಲುಗ್‌ಬೇಗ್

ADVERTISEMENT

ಭಾರತದಲ್ಲಿ ಮೊಗಲ್ ಸಾಮ್ರಾಜ್ಯ ಸ್ಥಾಪನೆಗೆ ಕಾರಣನಾದ ಬಾಬರ್ ಅಜ್ಜ ಉಲುಗ್‌ಬೇಗ್ (1393-1449). ಅವನು ಜಗತ್ತಿನ ಪ್ರಮುಖ ದೊರೆಗಳ ಪೈಕಿ ಒಬ್ಬನಾಗಿದ್ದ ತೈಮೂರ್‌ನ ಮೊಮ್ಮಗ. `ಸಮರಖಂಡ~ನಲ್ಲಿ `ಮದರಸಾ~  (ವಿಶ್ವವಿದ್ಯಾಲಯ) ಆರಂಭಿಸಿದ್ದ ಉಲುಗ್‌ಬೇಗ್ ಗಣಿತ ಮತ್ತು ಖಗೋಳವಿಜ್ಞಾನದಲ್ಲಿ ನಿಷ್ಣಾತನಾಗಿದ್ದ.

ಪ್ರಮುಖ ರಾಜಮನೆತನಕ್ಕೆ ಸೇರಿದವನಾದರೂ ಉಲುಗ್‌ಬೇಗ್ ತನ್ನ ಬಹುಪಾಲು ಸಮಯವನ್ನು ವಿದ್ವಾಂಸರ ಜೊತೆ ಕಳೆಯುತ್ತಿದ್ದ. ಖಗೋಳವಿಜ್ಞಾನದ ಹೆಚ್ಚುವರಿ ಅಧ್ಯಯನ ನಡೆಸುವುದಕ್ಕಾಗಿ ವೀಕ್ಷಣಾಲಯ ನಿರ್ಮಿಸಿದ್ದ. ಟಾಲೆಮಿಯ ನಂತರ ಮತ್ತು ಕೋಪರ್ನಿಕಸ್‌ಗಿಂತ ಮೊದಲ ಅವಧಿಯ ಮಹತ್ವದ ಖಗೋಳಶಾಸ್ತ್ರಜ್ಞ.

120ಕ್ಕೂ ಹೆಚ್ಚು ತಾರೆಗಳನ್ನು ಗುರುತಿಸಿ ಅವುಗಳಿಗೆ ನಾಮಕರಣ ಮಾಡಿದ್ದ ಉಲುಗ್‌ಬೇಗ್ ಅವುಗಳ ಕ್ಯಾಟಲಾಗ್ ತಯಾರಿಸಿದ್ದ. ವೈಜ್ಞಾನಿಕ ಸಂಗತಿಗಳು ಮಾತ್ರವಲ್ಲದೆ ಕಾವ್ಯ, ಇತಿಹಾಸ, ಶಾಸ್ತ್ರ ಸಂಬಂಧಿ ಸಂಗತಿಗಳಲ್ಲಿಯೂ ಆಸಕ್ತಿ ಹೊಂದಿದವನಾಗಿದ್ದ. ಉಲುಗ್‌ಬೇಗ್ ಖಗೋಳಶಾಸ್ತ್ರದಲ್ಲಿ ಮಾಡಿದ ಸಾಧನೆ ಅನನ್ಯ-ಅದ್ಭುತ.
 
ಸೂರ್ಯನ ಗ್ರಹಗಳಾದ ಗುರು, ಶುಕ್ರ, ಮಂಗಳ ಗ್ರಹಗಳು ಮತ್ತು ಭೂಮಿಯ ನಡುವಿನ ಅಂತರವನ್ನು ಉಲುಗ್‌ಬೇಗ್ ಕರಾರುವಾಕ್ಕಾಗಿ ಲೆಕ್ಕ ಮಾಡಿದ್ದ. ಅವನ ಲೆಕ್ಕಾಚಾರವು ಆಧುನಿಕ ಕಾಲದ ವಿಶಿಷ್ಟ ತಂತ್ರಜ್ಞಾನ ಬಳಸಿ ಮಾಡಿದ ಲೆಕ್ಕಾಚಾರದಷ್ಟೇ ನಿಖರ. ರಾಜಕಾರಣದ ತಂತ್ರ-ಕುತಂತ್ರ ಅರಿಯದ ಉಲುಗ್ ತನ್ನ ಪುತ್ರನಿಂದಲೇ ಹತ್ಯೆಗೀಡಾದ.

ದಾರಾ ಶಿಖೋ

ಮೊಗಲ್ ದೊರೆ ಶಹಜಹಾನ್‌ನ ಪ್ರೀತಿಯ ಮತ್ತು ಮೊದಲ ಪುತ್ರ ದಾರಾ (1615-1659). ಔರಂಗಜೇಬ್‌ನ ಹಿರಿಯ ಸಹೋದರ. ಆಡಳಿತ, ರಾಜಕಾರಣದಲ್ಲಿ ದಾರಾ ಬಹುತೇಕ ನಿರಾಸಕ್ತನಾಗಿದ್ದ. ಯುವರಾಜನಾಗಿದ್ದ ಅವಧಿಯಲ್ಲಿ ಪರ್ಷಿಯನ್ನರಿಂದ `ಕಂದಹಾರ~ ಮರಳಿ ಪಡೆಯುವುದಕ್ಕಾಗಿ ದಂಡಯಾತ್ರೆ ನಡೆಸಿದ.
 
ಯಶಕಾಣದ ಮಗನಿಗೆ ಬೇಸರವಾಗದಿರಲಿ ಎಂದು ಶಹಜಹಾನ್ ತನ್ನ ಪುತ್ರನನ್ನು ವಿಜೃಂಭಣೆಯಿಂದ ಬರಮಾಡಿಕೊಂಡ. ಅಲಹಬಾದ್ ಪ್ರದೇಶದ ಪ್ರಾಂತ್ಯಾಧಿಕಾರಿಯನ್ನಾಗಿ ಮಾಡಿದ. ಪರ್ಷಿಯನ್ ಭಾಷೆಯಲ್ಲಿ ಹಲವು ಪುಸ್ತಕಗಳನ್ನು ರಚಿಸಿರುವ ದಾರಾ ಶಿಖೋ ಕವಿ, ಧಾರ್ಮಿಕ ಚಿಂತಕ, ಅನುಭಾವಿ.

ಹಿಂದೂ-ಮುಸ್ಲಿಂ ತತ್ವಜ್ಞಾನಗಳ ನಡುವಿನ ಅನುಸಂಧಾನ ನಡೆಸಿ `ತಾತ್ವಿಕ ಚಿಂತನೆ~ ರೂಪಿಸಲು ಹೆಣಗಾಡಿದ. ರಾಜಕಾರಣದ ಲೆಕ್ಕಾಚಾರ ಅರಿಯುವಲ್ಲಿ ವಿಫಲನಾದ ದಾರಾನು ಔರಂಗಜೇಬ್‌ನಿಂದ ಸೆರೆವಾಸಕ್ಕೆ ಒಳಗಾದ. ತನ್ನ ಕೊನೆಯ ದಿನಗಳಲ್ಲಿ `ಓದಲು ಮತ್ತು ಬರೆಯಲು~ ಅವಕಾಶ ನೀಡುವಂತೆ ಸಹೋದರನ ಬಳಿ ಅಂಗಲಾಚಿದ.
 
ಉಪನಿಷತ್, ಕುರಾನ್‌ಗಳೆರಡನ್ನೂ ದಾರಾನಷ್ಟು ಗಂಭೀರವಾಗಿ ಅಧ್ಯಯನ ನಡೆಸಿದವರು ವಿರಳ. ಎರಡರ ಸಾರ ಅರಿತ ದಾರಾ ಸೂಫಿ ತತ್ವಜ್ಞಾನದ ಬೆಳಕಿನಲ್ಲಿ ಬದುಕಲು ಯತ್ನಿಸಿದವ. ರಾಜಕಾರಣದ ಸುಳಿಗೆ ಸಿಕ್ಕು ನಲುಗಿದ ಅಪರೂಪದ ವಿದ್ವಾಂಸ ದಾರಾ ಪ್ರಭುತ್ವದ ಜೊತೆಗಿದ್ದು ಬೆಳಕಿಗಾಗಿ ಹುಡುಕಾಟ ನಡೆಸಿದವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.