ADVERTISEMENT

ದೊಡ್ಡಮಟ್ಟಕ್ಕೆರಿದ ಯುವತಿಯರು

ಪೃಥ್ವಿರಾಜ್ ಎಂ ಎಚ್
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ಕ್ಯಾರ್ಲಿ ಸ್ಮಿತ್
ಆಕೆ ಪುಟ್ಟ ಹುಡುಗಿ. ಮನೆಯ ಹಿಂದಿನ ತೋಟದಲ್ಲಿದ್ದ ಅಂಜೂರದ ಹಣ್ಣುಗಳನ್ನು ಕೊಯ್ದು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಳು. ಅದರಿಂದ ಬಂದ  ಹಣದಲ್ಲಿ ಪೆನ್ನು, ಪುಸ್ತಕ, ನೋಟ್ ಬುಕ್‌ಗಳನ್ನು ಖರೀದಿಸಿ ಶಾಲೆಗೆ ತೆರಳುತ್ತಿದ್ದಳು. ಹೀಗೆ ಬೀದಿ ಬದಿಯಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ಆ ಹುಡುಗಿ ಇಂದು ಲಂಡನ್‌ನಲ್ಲಿ ಹಣ್ಣುಗಳ ಸೂಪರ್ ಮಾರುಕಟ್ಟೆಯನ್ನು ಸ್ಥಾಪಿಸಿದ್ದಾರೆ.

ಆ ಹುಡುಗಿಯೇ ಬ್ರಿಟನ್‌ನ ಕ್ಯಾರ್ಲಿ ಸ್ಮಿತ್. ಸ್ಮಿತ್ ಅವರದ್ದು ಮಧ್ಯಮ ವರ್ಗದ ಕುಟುಂಬ. ಹಿತ್ತಲಿನಲ್ಲಿದ ಎರಡು ಅಂಜೂರದ ಮರಗಳೇ ಅವರ ಈ ಅಭ್ಯುದಯಕ್ಕೆ ಕಾರಣ. ಪ್ರಾಥಮಿಕ ಶಾಲೆಯಿಂದ  ಆರಂಭವಾದ ಹಣ್ಣು ಮಾರುವ ಕಾಯಕ ಪದವಿವರೆಗೂ ನಿರಾತಂಕವಾಗಿ ನಡೆಯಿತು. ಹಣ್ಣು ಮಾರಿದ ಹಣದಿಂದಲೇ ಸ್ಮಿತ್ ವಿದ್ಯಾಭ್ಯಾಸ ಪೂರೈಸಿದ್ದು ವಿಶೇಷ.

ವಿಕ್ಟೋರಿಯಾ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವಿ ಪಡೆದ ಬಳಿಕ ಹಣ್ಣುಗಳ ಸೂಪರ್ ಮಾರುಕಟ್ಟೆ ತೆರೆದರು. ಎಲ್ಲಾ ರೀತಿಯ ತಾಜಾ ಹಣ್ಣುಗಳು ಸಿಗುವಂತೆ ಮತ್ತು ತೋಟದಿಂದ ಕೊಯ್ದ ಹಣ್ಣುಗಳು ನೇರವಾಗಿ ಗ್ರಾಹಕರಿಗೆ ಸಿಗುವಂತಹ ವ್ಯವಸ್ಥೆ ಮಾಡಿದರು.

ಸ್ಮಿತ್ ಆರಂಭಿಸಿರುವ ಮಾರುಕಟ್ಟೆ ಹಲವಾರು ವಿಶೇಷತೆಗಳಿಂದ ಕೂಡಿದೆ. ಇಲ್ಲಿ ಬಹುಪಾಲು ಮಹಿಳಾ ನೌಕರರೇ  ಕೆಲಸ ಮಾಡುತ್ತಿದ್ದಾರೆ. ಮಾರುಕಟ್ಟೆಯ ಒಳಾಂಗಣ ಹಲವಾರು ಕಲಾಕೃತಿಗಳೊಂದಿಗೆ ವಿನ್ಯಾಸಗೊಂಡಿದೆ. ವಾರ್ಷಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. 28ರ ಹರೆಯದ ಸ್ಮಿತ್, ಮಹಿಳೆಯರು ಸ್ವಾವಲಂಬಿಗಳಾಗಿ ಬೆಳೆಯಬೇಕು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.

ADVERTISEMENT

ಸೆನ್ಸಿ ಅಂಬೆರ್ ಮರ್ಫಿ

ಅಂದು ಕಾಲೇಜು ಮುಗಿಸಿಕೊಂಡು ಅಂಬೆರ್ ಮರ್ಫಿ ಮನೆಗೆ ವಾಪಾಸ್ಸಾಗುತ್ತಿದ್ದರು. ಮನೆ ಇನ್ನೂ ಒಂದು  ಕಿ.ಮೀ. ದೂರದಲ್ಲಿತ್ತು. ಇದ್ದಕ್ಕಿದ್ದಂತೆ ಕಾರಿನಲ್ಲಿ ಬಂದ ಮೂವರು ಯುವಕರು ಮರ್ಫಿಯನ್ನು  ಅಪಹರಿಸುತ್ತಾರೆ. ಆದರೆ ಮರ್ಫಿ ಸಿನಿಮೀಯ ರೀತಿಯಲ್ಲಿ  ಪಾರಾಗುತ್ತಾರೆ. ಅಪಹರಿಸಿದ್ದ ಯುವಕರ ಮೇಲೆ ಮರ್ಫಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುತ್ತಾರೆ. ಇದೆಲ್ಲಾ ಸಾಧ್ಯವಾಗಿದ್ದು ಕರಾಟೆ ಎಂಬ ಸಮರ ಕಲೆಯಿಂದ.

ಹೌದು, ಕೆನಡಾದ ಸೆನ್ಸಿ ಅಂಬೆರ್ ಮರ್ಫಿ ಫ್ಯಾಶನ್‌ಗಾಗಿ ಕರಾಟೆ ಕಲಿಯುತ್ತಿದ್ದರು. ಅದೇ ಅವರಿಗೆ ಜೀವದಾನ ನೀಡಿತು. ಅದರ ಫಲವಾಗಿ ಇಂದು ಮರ್ಫಿ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುವುದನ್ನೇ ವೃತ್ತಿಯಾಗಿಸಿಕೊಂಡು ಶಾಲೆಯೊಂದನ್ನು ತೆರೆದಿದ್ದಾರೆ. 

ಮರ್ಫಿ ಕರಾಟೆ ಕಲಿತದ್ದು ತನ್ನ 16ನೇ ವಯಸ್ಸಿಗೆ. ಅವರ ಮೇಲೆ ದಾಳಿ  ನಡೆದಾಗ ಅವರಿಗೆ 17 ವರ್ಷ. ಕೇವಲ ಒಂದು ವರ್ಷದಲ್ಲಿ ಕರಾಟೆಯ ನಾನಾ ಪಟ್ಟುಗಳನ್ನು ಕರಗತ ಮಾಡಿಕೊಂಡು ದಾಳಿಕೋರರ ವಿರುದ್ಧ ದಿಟ್ಟವಾಗಿ ಹೋರಾಟ ನಡೆಸಿದ್ದರು.

ಮಧ್ಯಮವರ್ಗ ಕುಟುಂಬದ ಮರ್ಫಿ ಅವರಿಗೆ ಕರಾಟೆ ಶಾಲೆ ತೆರಯಲು ಹಣಕಾಸಿನ ಮುಗ್ಗಟ್ಟು ಎದುರಾಯಿತು. ಹಲವು ಬ್ಯಾಂಕ್ ಬಾಗಿಲುಗಳಿಗೆ ಎಡತಾಕಿದರೂ ನಯಾ ಪೈಸೆ ಸಾಲ ದೊರೆಯಲಿಲ್ಲ.  ಬ್ಯಾಂಕ್ ಸಾಲ ನೀಡಲಿಲ್ಲ ಎಂದು ಮರ್ಫಿ ವಿಚಲಿತರಾಗಲಿಲ್ಲ. ಮಹಿಳಾ ಸಂಘಟನೆ ಬಳಿ ತೆರಳಿ ಹಣಕಾಸು ನೆರವು ಪಡೆದು ‘ಪರ್ಪಲ್  ಡ್ರ್ಯಾಗನ್ ಅಂತರರಾಷ್ಟ್ರೀಯ ಕರಾಟೆ ಅಕಾಡೆಮಿ’ಯನ್ನು ಸ್ಥಾಪಿಸಿದರು.

ಹೀಗೆ ಕಷ್ಟಪಟ್ಟು ಕಟ್ಟಿದ ಪರ್ಪಲ್  ಡ್ರ್ಯಾಗನ್ ಕರಾಟೆ ಶಾಲೆ  ಕೆನಡಾದಲ್ಲಿ ಬಹು ಜನಪ್ರಿಯತೆ ಪಡೆದಿದೆ. ದೇಶದೆಲ್ಲೆಡೆ ಈ ಅಕಾಡೆಮಿಯ 50ಕ್ಕೂ ಹೆಚ್ಚು ತರಬೇತಿ ಶಾಲೆಗಳನ್ನು ಹೊಂದಿದೆ. ಇಲ್ಲಿ ಬಾಲಕಿಯರಿಗೆ ಮತ್ತು ಮಹಿಳೆಯರಿಗೆ ಮಾತ್ರ ಕರಾಟೆ ಕಲಿಸಲಾಗುತ್ತದೆ.

ಸ್ವತಃ ಮರ್ಫಿಯೇ ಪ್ರತಿ ನಿತ್ಯ ಏಳು ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. 2004 ಮತ್ತು 2005ರಲ್ಲಿ ನಡೆದ ಯುಎಸ್ ಓಪನ್ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಗೆದ್ದ ಶ್ರೇಯ ಮರ್ಫಿಗೆ ಸಲ್ಲುತ್ತದೆ.

ಪ್ರತಿಯೊಬ್ಬ ಮಹಿಳೆ ತಮ್ಮ ರಕ್ಷಣೆಗಾಗಿ ಕರಾಟೆ ಕಲಿಯಲೇಬೇಕು. ಇಲ್ಲವಾದಲ್ಲಿ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಬೇಕಾಗುತ್ತದೆ ಎಂದು  ಮರ್ಫಿ ಮಹಿಳೆಯರಿಗೆ ಕಿವಿ ಮಾತು ಹೇಳುತ್ತಾರೆ. 
http://www.purpledragonacademy.ca/

ಹಿಥರ್ ಕ್ಯಾಲಾನ್ 

ಕೆನಡಾದ ಹಿಥರ್ ಕ್ಯಾಲಾನ್ ಅವರದ್ದು ನಿಸ್ವಾರ್ಥ ಮತ್ತು ಪ್ರತಿಫಲಾಪೇಕ್ಷೆ ಇಲ್ಲದ ಸಮಾಜ ಸೇವೆ. ಅತಿ ಕಿರಿಯ ವಯಸ್ಸಿಗೆ ಹಿರಿದಾದ ಸಾಧನೆ ಅವರದ್ದು. ಕೆನಡಾದ ಫೆರ್ನೆಯಲ್ಲಿ ನೆಲೆಸಿರುವ ಕ್ಯಾಲಾನ್ ಕ್ರೀಡಾಪಟುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವುದನ್ನು ನಿತ್ಯ ಕಾಯಕ ಮಾಡಿಕೊಂಡರು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾ ಟೂರ್ನಿಗಳಲ್ಲಿ ಫಿಟ್‌ನೆಸ್ ತಜ್ಞರು ಮತ್ತು ವೈದ್ಯರ ತಂಡ ಇರುವುದು ಸಹಜ. ಆದರೆ ಸ್ಥಳೀಯ ಮಟ್ಟದ ಟೂರ್ನಿಗಳಲ್ಲಿ ಇಂತಹ ಯಾವುದೇ ಸೌಲಭ್ಯಗಳಿರುವುದಿಲ್ಲ. ಹಾಗಾಗಿ ಫೆರ್ನೇ ಸುತ್ತ ಮುತ್ತ ಯಾವುದೇ ಕ್ರೀಡೆಗಳು ಜರುಗಿದರೂ ಕ್ಯಾಲನ್ ಅಲ್ಲಿ ಹಾಜರಿರುತ್ತಾರೆ.

ಹಾಕಿ, ಫುಟ್‌ಬಾಲ್, ರಗ್ಬಿ, ಕ್ರಿಕೆಟ್, ಟೆನಿಸ್ ಸೇರಿದಂತೆ ಅಥ್ಲೆಟಿಕ್ ಟೂರ್ನಿಗಳಲ್ಲಿ ಗಾಯಗೊಂಡ ಕ್ರೀಡಾಪಟುಗಳಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡುತ್ತಾರೆ. ಗಂಭೀರ ಸ್ವರೂಪದ ಗಾಯಗಳಾದರೆ ಅವರನ್ನು ತಮ್ಮ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿಕೊಂಡು ಉಚಿತವಾಗಿ  ಚಿಕಿತ್ಸೆ ನೀಡುತ್ತಾರೆ.

ಯಾವುದೇ ಒಂದು ದೇಶ ವಿಶ್ವಮಟ್ಟದಲ್ಲಿ ಗುರುತಿಸಿ ಕೊಳ್ಳಬೇಕಾದರೆ ಅಲ್ಲಿ ಆಟ ಶ್ರೀಮಂತವಾಗಿರಬೇಕು. ಅರ್ಥಾತ್ ಕ್ರೀಡಾಪಟುಗಳು ಸದೃಢರಾಗಿರಬೇಕು ಎನ್ನುತ್ತಾರೆ ಕ್ಯಾಲಾನ್. ದೇಶದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಬೆಳಗುವ ಕ್ರೀಡಾಪಟುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು ತುಂಬ ವಿರಳ, ಅವರ ಸೇವೆಗಾಗಿ ಈ ಕೆಲಸ ಮಾಡುತ್ತಿದ್ದೇನೆ ಎಂದು ಕ್ಯಾಲಾನ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಮೂಲತಃ ವೈದ್ಯೆಯಾಗಿರುವ ಕ್ಯಾಲಾನ್ ಹೆಲ್ತ್ ಕ್ಲಿನಿಕ್ ನಡೆಸುತ್ತಿದ್ದಾರೆ. ಇದರಿಂದ ಬರುವ ಆದಾಯವನ್ನು ತಮ್ಮ  ಪುನರ್ವಸತಿ ಕೇಂದ್ರಕ್ಕೆ ವಿನಿಯೋಗಿಸುತ್ತಿದ್ದಾರೆ. ಪ್ರಸ್ತುತ ನೂರಾರು ಕ್ರೀಡಾಪಟುಗಳು ಉಚಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇವರೆಲ್ಲಾ ದೇಶವನ್ನು ಪ್ರತಿನಿಧಿಸಿ ಆಡಬೇಕು ಎಂಬ ಬಯಕೆ ಹೊಂದಿರುವವರು.

ಕೆನಡಾ ಸರ್ಕಾರ ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳಿಂದಲೂ ಕ್ಯಾಲಾನ್ ಆರ್ಥಿಕ ನೆರವು ಪಡೆಯುತ್ತಿಲ್ಲ ಎಂಬುದು  ಅವರ ಅಗ್ಗಳಿಕೆ. ಕ್ಯಾಲಾನ್ ಸೇವೆಗೆ ಕೆನಡಾ ಸರ್ಕಾರ ಭವಿಷ್ಯದ ನಾಯಕಿ ಎಂಬ ಬಿರುದು ನೀಡಿ ಸನ್ಮಾನಿಸಿದೆ.

ಸಾರಾ ಮೊಶ್ರಾಕ್

ಕೆನಡಾದ ಸಾರಾ ಮೊಶ್ರಾಕ್ ವ್ಯಾಂಕೌರ್ ಪಟ್ಟಣದಲ್ಲಿರುವ  ಡೊಗ್ಲಾಸ್ ಕಾಲೇಜಿನಲ್ಲಿ ಪದವಿ ಓದುತ್ತಿದ್ದರು.ಅವರಿಗೆ ಕಣ್ಣಿನ ತೊಂದರೆ ಇದ್ದುದರಿಂದ ನೇತ್ರ ತಜ್ಞರು ಕನ್ನಡಕ ಧರಿಸುವಂತೆ ಸೂಚಿಸಿದ್ದರು. ಕೌಸ್ ಸಿಬುಕ್ ಎಂಬುವರು ನಡೆಸುತ್ತಿದ್ದ ಗ್ರಾನ್ವಿಲ್ಲಿ ಐಲ್ಯಾಂಡ್ ಫ್ರೇಮ್ ಮೇಕರ್ ಎಂಬ ಆಫ್ಟಿಕಲ್ ಅಂಗಡಿಗೆ ಸಾರಾ ಕನ್ನಡಕ ಕೊಳ್ಳಲು ಬಂದರು.

ಕನ್ನಡಕದ ಫ್ರೇಮ್ ತಯಾರಿಸಲು ಎರಡು ಗಂಟೆ ಕಾಲಾವಕಾಶ ಬೇಕು, ನೀವು ಎರಡು ಗಂಟೆ ಬಿಟ್ಟು ಬನ್ನಿ ಎಂದು ಸಾರಾಗೆ ಮಾಲೀಕರು ತಿಳಿಸುತ್ತಾರೆ. ಪರವಾಗಿಲ್ಲ, ನಾನು ಎರಡು ಗಂಟೆವರೆಗೂ ಕಾಯುತ್ತೇನೆ, ಅಲ್ಲಿಯವರೆಗೂ ನಿಮ್ಮ ಕೆಲಸದ ವೈಖರಿಯನ್ನು ನೋಡಬಹುದೇ ಎಂದು ಮಾಲೀಕರಲ್ಲಿ ಕೇಳುತ್ತಾರೆ.

ಸಾರಾ ವಿದ್ಯಾರ್ಥಿ ಆಗಿದ್ದರಿಂದ ಮಾಲೀಕರು ಅನುಮತಿ ನೀಡುತ್ತಾರೆ. ಸಾರಾಗೆ ಫ್ರೇಮ್ ತಯಾರಿಸುವ ಕೆಲಸ ತುಂಬಾ ಆಕರ್ಷಣೀಯವಾಗಿ ಕಾಣುತ್ತದೆ. ಮುಂದೆ ನಾನು ಇಂಥದ್ದೆ ಒಂದು ಅಂಗಡಿ ಇಟ್ಟು ವ್ಯಾಪಾರ ಮಾಡಬೇಕು ಎಂದು  ನಿಶ್ಚಯಿಸುತ್ತಾರೆ.

 ಈ ಘಟನೆ ನಡೆದ 9 ವರ್ಷಗಳ ಬಳಿಕ ಸಾರಾ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ ಕನ್ನಡಕ ಕೊಳ್ಳಲು ಬಂದಿದ್ದ ಸಾರಾ,  ಗ್ರಾನ್ವಿಲ್ಲಿ ಐಲ್ಯಾಂಡ್ ಫ್ರೇಮ್ ಮೇಕರ್ ಅಂಗಡಿಯನ್ನೇ ಕೊಂಡುಕೊಳ್ಳುತ್ತಾರೆ.

ವಿವಿಧ ವಿನ್ಯಾಸಗಳ ಫ್ರೇಮ್ ತಯಾರಿಸುವ ಲ್ಯಾಬ್, ನೇತ್ರ ತಪಾಸಣೆ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ದೊರೆಯುವಂತೆ ಆ ಅಂಗಡಿಗೆ ಮರು ಜೀವ ನೀಡುತ್ತಾರೆ. ಹೀಗೆ ಉನ್ನತೀಕರಣಗೊಂಡ ಗ್ರಾನ್ವಿಲ್ಲಿ ಐಲ್ಯಾಂಡ್ ಫ್ರೇಮ್ ಮೇಕರ್ ಕೆನಡಾದಲ್ಲಿ ಭಾರಿ ಜನಪ್ರಿಯತೆ ಪಡೆದಿದೆ.

ಇಲ್ಲಿ ಅಂಗವಿಕಲರಿಗೆ ಮತ್ತು ವಯೋವೃದ್ಧರಿಗೆ ಉಚಿತವಾಗಿ ಕನ್ನಡಕಗಳನ್ನು ನೀಡುತ್ತಿರುವುದು ವಿಶೇಷ. ಇದೆಲ್ಲಾ ಸಾಧ್ಯವಾಗಿದ್ದು ಸಾರಾ ಅವರ ಇಚ್ಛಾಶಕ್ತಿಯಿಂದ. ಅತಿ ಕಿರಿಯ ವಯಸ್ಸಿಗೆ ಈ ಸಾಧನೆ ಮಾಡಿದ್ದಕ್ಕೆ ಕೆನಡಾ ಸರ್ಕಾರ 2012ನೇ ಸಾಲಿನ ‘ದೇಶದ ಅತ್ಯುತ್ತಮ ಯುವ ಸಾಧಕಿ’ ಬಿರುದು ನೀಡಿ ಗೌರವಿಸಿದೆ.
–-ಪೃಥ್ವಿರಾಜ್ ಎಂ.ಎಚ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.