ADVERTISEMENT

ನಾವು ಹುಡುಗರು... ಹೃದಯ ಶ್ರೀಮಂತರು!

ಗುರು ಪಿ.ಎಸ್‌
Published 13 ಆಗಸ್ಟ್ 2014, 19:30 IST
Last Updated 13 ಆಗಸ್ಟ್ 2014, 19:30 IST

ಹುಡುಗರು ಪೆದ್ದುಗಳು ಎನ್ನುವುದು ಹುಡುಗಿಯರ ಒನ್‌ಲೈನ್‌ ವಾದ. ನಾವು ಪೆದ್ದು ಅಲ್ಲ, ನೀವು ಪೆದ್ದು ಆಗಲಿ ಎಂದು ನಾವು ಹಾಗೆ ನಡೆದುಕೊಳ್ಳುತ್ತೀವಷ್ಟೇ... ಎನ್ನುವ ಹುಡುಗರ ಮಾತು ಹುಡುಗಿಯರ ಕಿವಿಗೆ ಬೀಳುವುದೇ ಇಲ್ಲ. ಏಕೆಂದರೆ ಅವರು ಜಾಣರು, ಪ್ರತಿಭಾವಂತರು ಹಾಗೂ ಸೌಂದರ್ಯವತಿಯರು... (ಹೀಗೆಂದು ಅವರು ಅಂದುಕೊಂಡಿರುವುದರಿಂದ!)

ಹುಡುಗರು ಬೈಕ್‌ ರೈಡ್‌ ಮಾಡುವ ರೀತಿಯನ್ನು, ಅವರು ತೊಡುವ ಡ್ರೆಸ್ಸುಗಳನ್ನು, ಪ್ರೀತಿ ಪಡೆಯಲು ಅವರು ಮಾಡುವ ಕಸರತ್ತುಗಳನ್ನು ಕಂಡು ನಗುವ ಹುಡುಗಿಯರು, ಆ ಹುಡುಗರ ಪ್ರಯತ್ನದ ಹಿಂದಿರುವ ‘ರಿಸ್ಕ್‌’ ಅನ್ನು ಗಮನಿಸುವುದೇ ಇಲ್ಲ.
ಕಂಬದಂತೆ ಎದುರಿಗೆ ಬಂದು ‘ಐ ಲವ್‌ ಯೂ ರೀ’ ಎಂದರೆ, ‘ಅಕ್ಕ–ತಂಗಿ ಯಾರೂ ಇಲ್ವಾ ನಿಂಗೆ’ ಎಂದು ಕ್ಲಾಸ್‌ ತೆಗೆದುಕೊಳ್ಳುತ್ತೀರಿ.

ನಮ್ಮ ‘ಪ್ರತಿಭೆ’ಯಿಂದಲೇ ನಿಮ್ಮನ್ನು ಒಲಿಸಿಕೊಳ್ಳಬೇಕು ಎಂದು ನಾವು ಬೈಕ್‌ನಲ್ಲಿ ಸ್ಟಂಟ್‌ ಮಾಡಿ ತೋರಿಸಿದರೆ ‘ನೋಡೇ, ಕೋತಿ ಹೆಂಗೆ ಪಲ್ಟಿ ಹೊಡೀತಿದೆ’ ಎಂದು ಆಡಿಕೊಂಡು ನಗುತ್ತೀರಿ. ಹುಡುಗಿ ಇದಕ್ಕೆಲ್ಲ ಒಲಿಯುವುದಿಲ್ಲ ಎಂದು ಗಂಭೀರವಾಗಿ ಕವನ ಬರೆದುಕೊಟ್ಟರೆ, ‘ಓಹೋ, ಕವಿರತ್ನ ಕಾಳಿದಾಸ... ಕಥೆ, ಕವನದಿಂದ ಜೀವನ ನಡೆಸೋದಕ್ಕಾಗೋದಿಲ್ಲ’ ಎಂದು ಆ ‘ಅಪ್ಲಿಕೇಶನ್‌’ ಅನ್ನೂ ತಿರಸ್ಕರಿಸುತ್ತೀರಿ.

ನಿಮ್ಮ ಸಹವಾಸವೇ ಬೇಡ ಎಂದು ನಾವು ಪುಸ್ತಕ ಹಿಡಿದು ಕುಳಿತರೆ, ‘ಪುಸ್ತಕದ ಹುಳು ಬಂತು ನೋಡ್ರೇ. ಹತ್ತಿರ ಹೋಗಬೇಡಿ, ಕೊರೆದು ಕೊರೆದು ಮೆದುಳಿಗೇ ಬಾಯಿ ಹಾಕಿಬಿಡ್ತಾನೆ’ ಎಂದು ದೂರ ಓಡುತ್ತೀರಿ. ಓದು ಮುಗಿಸಿ, ಕೈ ತುಂಬಾ ಸಂಬಳ ಸಿಗುವ ಒಂದೊಳ್ಳೆ ಕೆಲಸ ತೆಗೆದುಕೊಂಡು ನಿಮ್ಮ ಮುಂದೆ ನಿಲ್ಲುತ್ತೇವೆ. ‘ಅಯ್ಯೋ ಅವನು ಅಂಕಲ್‌, ಅವನು ನನಗೆ ಇಷ್ಟಾನೇ ಇಲ್ಲ’ ಎಂದು ಮುಖ ತಿರುಗಿಸುತ್ತೀರಿ.
ಹೌದು. ಇದನ್ನೆಲ್ಲ ಓದಿ ನಿಮಗೆ ಒಳಗೊಳಗೆ ಖುಷಿ ಆಗುತ್ತಿದೆ. ಹುಡುಗರನ್ನು ಒಲಿಸಿಕೊಳ್ಳುವುದಕ್ಕೆ ನೀವು ಮಾಡುವ ಪ್ಲಾನ್‌ಗಳನ್ನು ನೋಡುತ್ತಿದ್ದರೆ, ನಾವು ಬಿದ್ದು ಒದ್ದಾಡಿ ನಗಬೇಕು, ಹಾಗಿರುತ್ತವೆ.

ಪದವಿಯ ಅಂತಿಮ ವರ್ಷದ ದಿನಗಳು. ನಾವು ನಾಲ್ಕೈದು ಸ್ನೇಹಿತರು ಹರಟೆ ಹೊಡೆಯುತ್ತಾ ನಿಂತಿದ್ದೆವು.  ಯಾರಿಗೆ ಏನಿಷ್ಟ ಎನ್ನುವ ಚರ್ಚೆ ಶುರುವಾಗಿತ್ತು. ‘ನನಗೆ ಒಗ್ಗರಣೆ ಹಾಕಿದ ಮೊಸರನ್ನ ಇಷ್ಟ’ ಎಂದಿದ್ದೆ. ಒಗ್ಗರಣೆ ಹಾಕಿದ್ದ ಮೊಸರನ್ನದ ಡಬ್ಬಿಯೊಂದಿಗೆ ಮರುದಿನವೇ ಪ್ರತ್ಯಕ್ಷವಾಗಿದ್ದಳು ನನ್ನ ಗೆಳತಿ. ‘ಏನ್ರೀ, ನಿನ್ನೆ ಹೇಳಿದ್ದು ಕೇಳಿಸಿಕೊಂಡು ಮೊಸರನ್ನ ತಂದಿದ್ದೀರಿ’ ಎಂದೆ. ‘ಇಲ್ಲ ರೀ, ಮನೆಯಲ್ಲಿ ಇವತ್ತು ಇದನ್ನೇ ಮಾಡಿದ್ದು, ನಿಮಗಿಷ್ಟ ಅಂದರಲ್ಲ, ತೆಗೆದುಕೊಂಡು ಬಂದೆ’ ಎಂದಳು ಮೆಲ್ಲಗೆ. ಇದನ್ನು ನಾವು ನಂಬಬೇಕು!

ನೋಡಲು ಸುಂದರವಾಗಿಯೇ ಇರುತ್ತೀರಿ. ಆದರೆ, ಬ್ಯೂಟಿಪಾರ್ಲರ್‌ನಲ್ಲಿ ಅರ್ಧ ಆಯಸ್ಸು ಕಳೆದು, ಹುಬ್ಬನ್ನು ಕಾಮನಬಿಲ್ಲಿಗಿಂತ ಹೆಚ್ಚು ಬಗ್ಗಿಸಿಕೊಂಡು, ತುಟಿ ತುಂಬಾ ಲಿಪ್‌ಸ್ಟಿಕ್‌ ಬಳಿದುಕೊಂಡು ಬಂದು ಎದುರು ನಿಲ್ಲುತ್ತೀರಿ. ಹುಡುಗರು ಸಹಜ ಸೌಂದರ್ಯ ಇಷ್ಟಪಡುತ್ತಾರೆ, ಕೃತಕ ಸೌಂದರ್ಯವನ್ನಲ್ಲ ಎಂದು ನಿಮಗೆ ಅದ್ಯಾವ ರೀತಿ ಹೇಳಬೇಕೋ ಅರ್ಥವಾಗಲ್ಲ.

ನಾವು ಯಾರನ್ನೋ ನೋಡುತ್ತಿದ್ದರೂ, ಇವನು ‘ನನ್ನನ್ನೇ’ ನೋಡುತ್ತಿದ್ದಾನೆ ಎಂದುಕೊಳ್ಳುತ್ತೀರಿ. ಹುಡುಗ ಇಷ್ಟ ಆದರೆ ಸಾಕು, ‘ಆ ನೋಟ್ಸ್‌ ಕೊಡು, ಈ ಬುಕ್ಸ್‌ ಕೊಡು’ ಎಂದು ಹಿಂದೆ ಬೀಳುತ್ತೀರಿ. ಅದೇ ಸಲುಗೆಯಲ್ಲಿ ಹುಡುಗ ಅಪ್ಪಿ ತಪ್ಪಿ ಏನಾದರೂ ‘ಪ್ರೀತಿ’ ವಿಷಯ ಬಾಯಿಬಿಟ್ಟನೋ, ‘ನಮ್ಮದು ಸಂಪ್ರದಾಯಸ್ಥರ ಕುಟುಂಬ, ಇದನ್ನೆಲ್ಲ ಒಪ್ಪಲ್ಲ. ನಾವು ಕೊನೆಯವರೆಗೂ ಫ್ರೆಂಡ್ಸ್‌ ಆಗಿರೋಣ’ ಎನ್ನುತ್ತೀರಿ.

ಇದು ಯಾಕೋ ನಮ್ಮ ಲೈನ್‌ಗೆ ಬರುವುದಿಲ್ಲ, ಬೇರೆ ಕಡೆ ನೋಡೋಣ ಎಂದು ಹೊರಟರೆ ಮುಗೀತು ನಮ್ಮ ಕಥೆ. ‘ಫ್ರೆಂಡ್‌ಷಿಪ್‌ ಅಂದ್ರೆ ಇಷ್ಟೇನಾ, ನನಗೆ ನಿನ್ನ ಬಿಟ್ಟಿರುವುದಕ್ಕೆ ಆಗಲ್ಲ ಕಣೋ’ ಎಂದು ಕಣ್ಣೀರು ಹಾಕುತ್ತೀರಿ. ಯಾವಾಗ ಹುಡುಗಿಯರ ಕಣ್ಣೀರು ಕಪಾಳಕ್ಕೆ ಬಿತ್ತೋ, ನಾವು ಸೋತು, ಕರಗಿ ನೀರಾಗಿಬಿಡುತ್ತಾರೆ. ಕೆಲ ವರ್ಷಗಳಲ್ಲೇ ನಿಮ್ಮ ಮದುವೆ ಆಹ್ವಾನ ಪತ್ರಿಕೆ ಹಿಡಿದುಕೊಂಡು ಬಂದು ಮುಂದೆ ನಿಲ್ಲುತ್ತೀರಿ.  ‘ಏನಿದೆಲ್ಲ’ ಎನ್ನುವ ನಮ್ಮ ಪ್ರಶ್ನೆಗೆ, ‘ನಾನು ನಿನ್ನನ್ನ ಒಳ್ಳೆಯ ಫ್ರೆಂಡ್‌’ ಅಂದುಕೊಂಡಿದ್ದೇನಷ್ಟೇ ಎಂದು ಹಿಂದಿರುಗುತ್ತೀರಿ!

‘ಫ್ರೆಂಡ್‌’ ಎನ್ನುವ ಪದದ ಸುತ್ತ ಗಿರಕಿ ಹೊಡೆಯುವ ನಿಮ್ಮ ಮುಂದೆ, ನಿಮ್ಮ ಗೆಳತಿಯನ್ನ ಹೊಗಳಬೇಕು. ಆಗ, ನಿಮ್ಮ ಮುಖ ನೋಡುವುದಕ್ಕೇ ಅದೇನೋ ಖುಷಿ ಕಣ್ರೀ. ನಿಮ್ಮ ಗೆಳತಿ ನಿಮಗಿಂತ ಅದೆಷ್ಟೇ ಬುದ್ಧಿವಂತಳಾಗಿರಲಿ, ಚೆಲುವೆಯಾಗಿರಲಿ, ನಿಮ್ಮ ಮನಸ್ಸು ಅದನ್ನು ಒಪ್ಪಿಕೊಳ್ಳುವುದೇ ಇಲ್ಲ. ಅದರ ಬದಲಾಗಿ ನಮ್ಮ ಮುಂದೆ ಅವಳನ್ನು ವಿನಾಕಾರಣ ಬೈಯತೊಡಗುತ್ತೀರಿ. ಏನೇನೋ ಹೇಳುತ್ತೀರಿ. ಮುಂದುವರೆದು, ಅವಳಿಗಿಂತ ಚೆನ್ನಾಗಿ ಡ್ರೆಸ್‌ ಮಾಡಿಕೊಂಡು ಬರಲು ಆರಂಭಿಸುತ್ತೀರಿ. ನೀವಾಡುವ ಇಂತಹ ಆಟಗಳು ನಮಗೇನು ತಿಳಿಯುವುದಿಲ್ಲ ಎಂದುಕೊಂಡಿದ್ದೀರಾ?

ಅದೇನೇ ಆಗಲಿ. ಹುಡುಗ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದರೆ, ‘ಮಚ್ಚಾ, ನಿನ್ನ ಹುಡುಗಿ ಬಂದಳು ಕಣೋ’ ಎಂದು ಸುಮ್ಮನೆ ಜಾಗ ಖಾಲಿ ಮಾಡುವ ನಮ್ಮಂತಹ ಹುಡುಗರ ಮನಸು ಹಾಲು ಕಣ್ರೀ. ಏನೇ ಇದ್ದರೂ, ಹುಡುಗರು ಅದನ್ನ ‘ಅಗ್ರೆಸಿವ್‌’ ಆಗಿ ಮಾಡುತ್ತಾರೆ. ಅದು ಪ್ರೀತಿಯೇ ಆಗಿರಲಿ, ಗೆಳೆತನವೇ ಆಗಿರಲಿ. ಅದನ್ನೇ ನೀವು ‘ಪೆದ್ದುತನ’ ಎನ್ನುತ್ತೀರಿ. ಆದರೆ, ನಿಮ್ಮ ಪೆದ್ದುತನಗಳನ್ನು ಮಾತ್ರ ನಾವು ಎತ್ತಾಡಿಕೊಳ್ಳುವುದಿಲ್ಲ. ಯಾಕೆಂದರೆ, ನಾವು ಹುಡುಗರು. ಹೃದಯ ಶ್ರೀಮಂತರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.