ADVERTISEMENT

ಫ್ರೇಮಿನಾಚೆಗಿನ ಪ್ರಾಣಿ ಪ್ರೀತಿ

ಅನಿತಾ ಈ.
Published 9 ನವೆಂಬರ್ 2016, 19:30 IST
Last Updated 9 ನವೆಂಬರ್ 2016, 19:30 IST
ಫ್ರೇಮಿನಾಚೆಗಿನ ಪ್ರಾಣಿ ಪ್ರೀತಿ
ಫ್ರೇಮಿನಾಚೆಗಿನ ಪ್ರಾಣಿ ಪ್ರೀತಿ   

ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕೆಲ ಯುವಜನರ ಕೌರ್ಯಕ್ಕೆ ನಾಯಿ, ಬೆಕ್ಕುಗಳು ಕ್ರೂರವಾದ ಸಾವನ್ನಪ್ಪುತ್ತಿರುವ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇಂತಹವರ ಮಧ್ಯೆ ನಿಸ್ವಾರ್ಥವಾಗಿ ಸಾಕುಪ್ರಾಣಿ ಪ್ರಾಣಿಗಳ ದತ್ತು ಹಾಗೂ ಅವುಗಳ ಕಲ್ಯಾಣಕ್ಕಾಗಿ ಅಶೋಕ್‌ ಚಿಂತಲ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.

ಮೂಲತಃ ಆಂಧ್ರಪ್ರದೇಶದವರಾದ ಅಶೋಕ್‌ ಬಿಎಸ್ಸಿ ಪದವೀಧರ. ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಇವರು ನಗರದ ಎಚ್‌ಎಎಲ್‌ ಪ್ರದೇಶದಲ್ಲಿ ನೆಲೆಸಿದ್ದಾರೆ. ಆಂಧ್ರಪ್ರದೇಶದ ಭೀಮಾವರಂನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಚೆನ್ನೈಗೆ ಬಂದ ಅಶೋಕ್‌ ಅಲ್ಲೇ ಉದ್ಯೋಗಕ್ಕೆ ಸೇರಿದ್ದರು.

ಆಗ ಅವರ ಬಳಿ ಒಂದು ಜಾತಿ ನಾಯಿ ಇತ್ತು. ಅದರ ಸಾವಿನ ನಂತರ ಮತ್ತೊಂದನ್ನು ಸಾಕುವ ಧೈರ್ಯ ಮಾಡಿರಲಿಲ್ಲ. ಆದರೆ 2013ರಲ್ಲಿ ಬೆಂಗಳೂರಿನಲ್ಲಿರುವ ಕ್ಯೂಪಾ ಸೆಕೆಂಡ್‌ ಚಾನ್ಸ್‌ ಸಂಸ್ಥೆಯಿಂದ ಒಂದು ನಾಯಿಯನ್ನು ದತ್ತು ಸ್ವೀಕರಿಸಿದ್ದರು. ಅದು ಸಹ ಮೂತ್ರಪಿಂಡ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಾಯಿ.

ಅದನ್ನು ಯಾರೂ ದತ್ತು ಸ್ವೀಕರಿಸಲು ಮುಂದೆ ಬರದ ಕಾರಣ ದತ್ತುಪಡೆದಿದ್ದರು. ಅದು ಕೆಲ ತಿಂಗಳ ನಂತರ ಅನಾರೋಗ್ಯದಿಂದಲೇ ಸಾವನ್ನಪ್ಪಿತ್ತು. ಇದಾದ ನಂತರ ಮತ್ತೆರಡು ನಾಯಿಗಳನ್ನು ದತ್ತು ಪಡೆದು ನೋಡಿಕೊಳ್ಳುತ್ತಿದ್ದಾರೆ.

ಚಿಕ್ಕಂದಿನಿಂದಲೇ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದ ಅವರಿಗೆ ಪೋಷಕರಿಂದಲೂ ಸಂಪೂರ್ಣ ಸಹಕಾರ ಸಿಕ್ಕಿತ್ತು. ಕಾಲೇಜು ದಿನಗಳಲ್ಲಿ ಕ್ಯಾಮೆರಾ ಹಿಡಿದು ಫೋಟೊ ತೆಗೆಯುವುದನ್ನು ಅಭ್ಯಾಸ ಮಾಡುತ್ತಿದ್ದರು. ಅದಕ್ಕಾಗಿ ಯಾವುದೇ ತರಗತಿಗೆ ಸೇರಲಿಲ್ಲ. ತನ್ನ ಬಳಿ ಇದ್ದ ಮೊದಲ ನಾಯಿ ಲಕ್ಕಿಯ ಫೋಟೊಗಳನ್ನು ತೆಗೆಯಲು ಪ್ರಾರಂಭಿಸಿದರು.

ಅಲ್ಲಿಂದ ಸಾಕುಪ್ರಾಣಿಗಳ ಚಿತ್ರಗಳನ್ನು ತೆಗೆಯುವ ಗೀಳು ಇವರನ್ನು ಆವರಿಸಿಕೊಂಡಿತು. ಆದರೆ ಅದರ ಸಾವಿನ ನಂತರ ಕೊಂಚ ಮಂಕಾಗಿದ್ದ ಅಶೋಕ್‌ ಅವರ ಜೀವನದಲ್ಲಿ ಮತ್ತೆ ಬಣ್ಣ ತುಂಬಿದ್ದು, ಕ್ಯೂಪಾದಿಂದ ದತ್ತು ಸ್ವೀಕರಿಸಿದ ಬ್ರೂನೊ.

ಕಳೆದ ಕೆಲ ತಿಂಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದು ನೆಲೆಸಿರುವ ಅಶೋಕ್‌ ಅವರಿಗೆ ಬಹಳ ಹಿಂದಿನಿಂದಲೂ ಬೆಂಗಳೂರಿನೊಂದಿಗೆ ಒಡನಾಟವಿದೆ. ತಮ್ಮ ಮೊದಲ ನಾಯಿ ಲಕ್ಕಿ ಸಾವಿನ ನಂತರ ಬೀದಿನಾಯಿ ಹಾಗೂ ಬೆಕ್ಕುಗಳ ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ನಿರತರಾಗಿರುವ ಅಶೋಕ್‌ ಆಗಾಗ ಬೆಂಗಳೂರಿಗೆ ಭೇಟಿ ನೀಡುತ್ತಿದ್ದರು.

ಹೀಗೆ ಭೇಟಿ ನೀಡುವಾಗ ಪ್ರಯೋಗಾಲಯಗಳಿಂದ ರಕ್ಷಿಸಲಾದ ನಾಯಿಗಳಿಗೆ ಮರುಜನ್ಮ ನೀಡುವ ಕ್ಯೂಪಾ ಸೆಕೆಂಡ್‌ ಚಾನ್ಸ್‌ ಸಂಸ್ಥೆಯೊಂದಿಗೆ ಒಡನಾಟ ಬೆಳೆದಿತ್ತು.ಹೀಗಾಗಿಯೇ 2013ರಲ್ಲಿ ಕ್ಯೂಪಾ ಸಂಸ್ಥೆಯಿಂದ ಬ್ರೂನೊವನ್ನು ದತ್ತು ಪಡೆದು ಚೆನ್ನೈಗೆ ತೆಗೆದುಕೊಂಡು ಹೋಗಿದ್ದರು.

ಆಗಲೇ ಸಾಕುಪ್ರಾಣಿಗಳ ಚಿತ್ರಗಳನ್ನು ತೆಗೆಯುವ ಸಲುವಾಗಿ ‘ಪಾಸ್‌ ಫಾರ್‌ ಎ ಪಿಕ್ಚರ್‌’ ಸಂಸ್ಥೆಯನ್ನೂ ಸ್ಥಾಪಿಸಿದರು. 2014ರಲ್ಲಿ ಈ ಸಂಸ್ಥೆ ಆರಂಭವೇನೋ ಆಗಿತ್ತು, ಆದರೆ ಸಂಪೂರ್ಣಗೊಂಡಿರಲಿಲ್ಲ. 2015ರ ಹೊತ್ತಿಗೆ ಪಾಸ್ ಫಾರ್‌ ಎ ಪಿಕ್ಚರ್‌ ಒಂದು ರೂಪ ಪಡೆದುಕೊಂಡಿತ್ತು.

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬೀದಿನಾಯಿ ಹಾಗೂ ಬೆಕ್ಕುಗಳ ದತ್ತು ಸ್ವೀಕರಿಸುವಂತೆ ಪ್ರಕಟಿಸುತ್ತಿದ್ದ ಚಿತ್ರಗಳನ್ನು ಗಮನಿಸುತ್ತಿದ್ದ ಅಶೋಕ್ ಅವರನ್ನು ಸಂಪರ್ಕಿಸಿ ತಾವೇ ಉತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆದುಕೊಡುತ್ತಿದ್ದರು.

ಉಚಿತವಾಗಿ ಫೋಟೊಗಳನ್ನು ತೆಗೆದುಕೊಡಲು ಕಾರಣ ಏನೆಂದು ಕೇಳಿದಾಗ ಅವರು ಕೊಟ್ಟ ಉತ್ತರ ‘ಸಾಮಾನ್ಯವಾಗಿ ಮೊಬೈಲ್‌ನಲ್ಲಿ ತೆಗೆದ ಫೋಟೊಗಳು ನೋಡಿದ ಕೂಡಲೇ ಯಾರನ್ನೂ ಆಕರ್ಷಿಸುವುದಿಲ್ಲ.

ಅದರಲ್ಲೂ ಫೋಟೊ ತೆಗೆಯುವ ಕಲೆ ತಿಳಿದಿರಬೇಕು. ನಾನು ಸಾಮಾಜಿಕ ಜಾಲತಾಣಗಳಲ್ಲಿ ದತ್ತು ಪಡೆಯುವಂತೆ ಕೋರಿ ಪ್ರಕಟಿಸಲಾಗುತ್ತಿದ್ದ ಚಿತ್ರಗಳು ಅಷ್ಟು ಚೆನ್ನಾಗಿರುತ್ತಿರಲಿಲ್ಲ. ಹೀಗಾಗಿಯೇ ನಾನು ಅವುಗಳ ಚಿತ್ರಗಳನ್ನು ತೆಗೆದುಕೊಡಬೇಕೆಂದು ನಿರ್ಧರಿಸಿದೆ. ಕ್ಯಾಮೆರಾದಲ್ಲಿ ತೆಗೆಯುವ ಪ್ರಾಣಿಗಳ ಚಿತ್ರಗಳನ್ನು ನೋಡಿ ಇಷ್ಟಪಟ್ಟು ದತ್ತು ಪಡೆಯುವವರೂ ಇದ್ದಾರೆ.

ಬೆಂಗಳೂರಿನಲ್ಲಿರುವ ಸಾಕಷ್ಟು ಪ್ರಾಣಿ ದಯಾ ಸಂಘಗಳಿಗೆ ಉಚಿತವಾಗಿ ಚಿತ್ರಗಳನ್ನು ತೆಗೆದುಕೊಟ್ಟಿದ್ದೇನೆ. ನಾನು ತೆಗೆದ ಚಿತ್ರಗಳನ್ನು ನೋಡಿ ಸಾಕಷ್ಟು ಮಂದಿ ನಾಯಿ, ಬೆಕ್ಕುಗಳನ್ನು ದತ್ತು ಪಡೆದಿದ್ದಾರೆ. ಅದನ್ನು ನೆನೆಸಿಕೊಂಡಾಗ ಮನಸ್ಸಿಗೆ ಸಂತೋಷ ಸಿಗುತ್ತದೆ. ನಾನು ತೆಗೆದ ಚಿತ್ರಗಳನ್ನು ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ’ ಎನ್ನುತ್ತಾರೆ ಅಶೋಕ್‌.

‘ನಾನು ಈಗಲೂ ಆಗಾಗ ಚೆನ್ನೈಗೆ, ಆಂಧ್ರಕ್ಕೆ ಹೋಗುತ್ತೇನೆ. ಆಗ ಯಾರಾದರೂ ದತ್ತು ಪಡೆದ ಪ್ರಾಣಿಗಳನ್ನು ತಂದುಕೊಡುವಂತೆ ಕೇಳಿದರೆ, ಅವುಗಳನ್ನು ನನ್ನ ಕಾರಿನಲ್ಲೇ ಕರೆದುಕೊಂಡು ಹೋಗಿ ಬಿಡುತ್ತೇನೆ. ಸಾಕಷ್ಟು ಬಾರಿ ಕ್ಯೂಪಾದಿಂದ ದತ್ತು ಪಡೆದ ನಾಯಿಗಳನ್ನು ತಮಿಳುನಾಡಿಗೆ ಬಿಟ್ಟುಕೊಟ್ಟಿದ್ದೇನೆ. ಕೇವಲ ಪ್ರಾಣಿಗಳ ಬಗೆಗೆ ಇರುವ ಒಲವಿನಿಂದಾಗಿ ಈ ಕೆಲಸ ಮಾಡುತ್ತೇನೆ’ ಎಂದು ಹೇಳುವಾಗ ಅವರ ಮುಖದಲ್ಲಿ ಮಂದಹಾಸ ಮೂಡಿತ್ತು.

ಬೆಂಗಳೂರಿನ ಪ್ರೀಶಿಯಸ್ ಪಾಸ್‌ ಸಂಸ್ಥೆ ಪ್ರತಿ ವರ್ಷ ಅವರ ಆಶ್ರಯದಲ್ಲಿರುವ ನಾಯಿಗಳ ಚಿತ್ರಗಳನ್ನು ತೆಗೆಸಿ ಕ್ಯಾಲೆಂಡರ್‌ ಮಾಡುತ್ತಾರೆ. ಈ ಬಾರಿ ಆ ಸಂಸ್ಥೆಯ ಕ್ಯಾಲೆಂಡರ್‌ಗಾಗಿ ಅಶೋಕ್‌ ಅವರೇ ಉಚಿತವಾಗಿ ಫೋಟೊಶೂಟ್‌ ಮಾಡಿದ್ದಾರೆ.

ಸಾಲದ್ದಕ್ಕೆ ಬೆಂಗಳೂರು ನಗರದಲ್ಲಿರುವ ಪ್ರಾಣಿ ದಯಾ ಸಂಸ್ಥೆಗಳಲ್ಲಿರುವ ನಾಯಿ ಹಾಗೂ ಬೆಕ್ಕುಗಳ ಫೋಟೊಗಳನ್ನು ಉಚಿತವಾಗಿ ತೆಗೆದಿದ್ದಾರೆ. ಈಗಲೂ ಯಾವುದೇ ಸಂಘ ಸಂಸ್ಥೆಯವರು ಪ್ರಾಣಿಗಳ ಫೋಟೊ ತೆಗೆಯಲು ಕರೆದರೆ ಸಾಕು ಯಾವುದೇ ಷರತ್ತುಗಳನ್ನು ಹಾಕದೆ ವಾರಾಂತ್ಯದಲ್ಲಿ ಕೆಲಸ ಮುಗಿಸುತ್ತಾರೆ.

ಇನ್ನು ಪ್ರತಿ ಭಾನುವಾರ ನಗರದ ಕಬ್ಬನ್‌ ಉದ್ಯಾನದಲ್ಲಿ ನಾಯಿ ಪ್ರೇಮಿಗಳು ನಡೆಸುವ ಸ್ನೇಹಕೂಟದಲ್ಲೂ ಭಾಗವಹಿಸುವ ಕುಟುಂಬಗಳಿಗೆ ಅವರ ಮುದ್ದಿನ ನಾಲ್ಕು ಕಾಲಿನ ಸ್ನೇಹಿತನೊಂದಿಗೆ ಚಿತ್ರಗಳನ್ನು ಉಚಿತವಾಗಿಯೇ ಕ್ಲಿಕ್ಕಿಸಿ ಕೊಡುತ್ತಾರೆ. ಇಷ್ಟೇ ಅಲ್ಲದೆ ಪೆಟ್‌ ಫೋಟೊಗ್ರಫಿಗಾಗಿ ಊರೂರು ಸುತ್ತುವ ಅಶೋಕ್‌ಗೆ ಅಲ್ಲಿನ ಪ್ರದೇಶಗಳಲ್ಲಿ ಬೀದಿಯಲ್ಲಿ ವಾಸಿಸುವ ಪ್ರಾಣಿಗಳ ಕುರಿತು ಜನ ಹಾಗೂ ಅಲ್ಲಿನ ಸಂಘಟನೆಗಳು ಯಾವ ರೀತಿ ಕೆಲಸ ಮಾಡುತ್ತಿವೆ ಎನ್ನುವುದನ್ನು ತಿಳಿದುಕೊಳ್ಳುವ ಅಭ್ಯಾಸ.

ಕೆಲವೊಮ್ಮೆ ಎಲ್ಲೆಲ್ಲಿ ಬೀದಿ ಪ್ರಾಣಿಗಳ ಕುರಿತು ಯಾವ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹುಡುಕುತ್ತಲೂ ಹೊರಟು ಬಿಡುತ್ತಾರೆ. ಈ ಹವ್ಯಾಸದಿಂದಲೇ ಕೆಲವು ರಾಜ್ಯಗಳಲ್ಲಿಯೂ ಅಡ್ಡಾಡಿ ಮಾಹಿತಿ ಕಲೆ ಹಾಕಿದ್ದಾರೆ. ಚೆನ್ನೈನಲ್ಲಿ ಕಳೆದ ವರ್ಷ ಬಂದಿದ್ದ ಪ್ರವಾಹದ ವೇಳೆ ಮನೆ ಕಳೆದುಕೊಂಡಿದ್ದ ಜಾತಿ ನಾಯಿಯೊಂದು ಕಾಯಿಲೆಯಿಂದಾಗಿ ಗುರುತಿಸಲಾಗದಷ್ಟು ಸೊರಗಿ ಹೋಗಿತ್ತು.

ಸಾಲದ್ದಕ್ಕೆ ಅಲ್ಲಿನ ಕೊಳಚೆ ಪ್ರದೇಶದಲ್ಲಿ ಮನೆಯೊಂದರ ಮುಂದೆ ತುತ್ತು ಅನ್ನಕ್ಕಾಗಿ ಒದ್ದಾಡುತ್ತಿದ್ದುದನ್ನು ಕಂಡ ಅಶೋಕ್‌ ಅದನ್ನು ತಮ್ಮೊಂದಿಗೆ ಕರೆತಂದಿದ್ದರು. ನಂತರ ಅದಕ್ಕೆ ಚಿಕಿತ್ಸೆ ಕೊಡಿಸಿ, ಅಗತ್ಯ ಸೌಕರ್ಯಗಳನ್ನು ಮಾಡಿಸಿದ ನಂತರ ಅದು ವಿದೇಶಿ ತಳಿಯ ನಾಯಿಯೆಂದು ತಿಳಿದದ್ದು. ಇಷ್ಟೆಲ್ಲ ಆಗಲು ಮೂರು ತಿಂಗಳು ಬೇಕಾಗಿತ್ತು.

ನಂತರ ಅದನ್ನು ಅವರ ಬಳಿಯೇ ಇಟ್ಟುಕೊಂಡು ನಿಕ್ಕಿ ಎಂದು ಹೆಸರನ್ನೂ ನೀಡಲಾಗಿತ್ತು. ಅದನ್ನು ಕೊಳಚೆ ಪ್ರದೇಶದಿಂದ ತಂದಾಗ ನೋಡಿದ್ದವರು ಮೂರು ತಿಂಗಳ ನಂತರ ನೋಡಿದಾಗ ಅವರ ಕಣ್ಣುಗಳನ್ನು ಅವರೇ ನಂಬಲಾಗದಷ್ಟು ಬದಲಾಗಿತ್ತು ನಿಕ್ಕಿ. ಅದನ್ನು ಒಮ್ಮೆ ನೋಡಿದ ಅಶೋಕ್‌ ಅವರ ಸ್ನೇಹಿತೆ ಅದನ್ನು ದತ್ತು ಪಡೆದಿದ್ದಾರೆ.

2015ರಲ್ಲಿ ಚೆನ್ನೈನಲ್ಲಿ ಸಂಭವಿಸಿದ್ದ ಪ್ರವಾಹದಿಂದಾಗಿ ಸಾಕಷ್ಟು ಕುಟುಂಬಗಳು ಬೀದಿಪಾಲಾಗಿದ್ದವು. ಅವುಗಳೊಂದಿಗೆ ಅಲ್ಲಿನ ಸಾಕು ಪ್ರಾಣಿಗಳೂ ಮನೆ ಕಳೆದುಕೊಂಡಿದ್ದವು.

ಆಗ ನಾನಾ ರಾಜ್ಯಗಳಿಂದ ಬಂದಿದ್ದ ಪ್ರಾಣಿಪ್ರಿಯರು ನಿಧಿ ಸಂಗ್ರಹಿಸಿ, ತಮ್ಮ ಕೈಲಾದಷ್ಟು ಜೀವಿಗಳನ್ನು ರಕ್ಷಿಸಿದ್ದರು. ಆಗ ಅಶೋಕ್‌ ಸಹ ಪಾಸ್‌ ಫಾರ್‌ ಎ ಪಿಕ್ಚರ್‌ ಸಂಸ್ಥೆ ವತಿಯಂದ ನಿಧಿ ಸಂಗ್ರಹಿಸಿ ಮೂಕ ಜೀವಿಗಳಿಗೆ ಸಹಾಯ ಹಸ್ತ ಚಾಚಿದ್ದರು. ಸದ್ಯಕ್ಕೆ ಲಫಿ ಹಾಗೂ ಜಾಸ್‌ ಎಂಬ ಎರಡು ನಾಯಿಗಳನ್ನು ದತ್ತು ಪಡೆದು ನೋಡಿಕೊಳ್ಳುತ್ತಿರುವ ಅಶೋಕ್‌ ಅವರಿಗೆ ಅವರು ವಾಸವಿರುವ ಮನೆ ಬಳಿಯ ನೆರೆಹೊರೆಯವರಿಂದ ಸಾಕಷ್ಟು ತೊಂದರೆಯಾಗುತ್ತಿದೆ.

ಆದರೆ ಮನೆಯನ್ನು ಬಾಡಿಗೆಗೆ ನೀಡಿರುವ ಮಾಲೀಕರು ಮಾತ್ರ ಅವರ ಈ ಪ್ರಾಣಿಸ್ನೇಹಿ ಕಾರ್ಯಕ್ಕೆ ಸಹಕಾರಿಯಾಗಿದ್ದಾರೆ. ನಿತ್ಯ ಅಶೋಕ್‌ ಅವರ ಮನೆ ಮಾಲೀಕರಿಗೆ ನೆರೆಹೊರೆಯವರಿಂದ ಇಮೇಲ್‌ ಮೂಲಕ ನಾಯಿಗಳ ಇರುವಿಕೆಗೆ ಸಬಂಧಿಸಿದ ದೂರುಗಳು ಬಂದಿರುತ್ತವೆ. ಇಂಥ ಪರಿಸ್ಥಿತಿ ನಡುವೆಯೂ ಅಶೋಕ್‌ ತಮ್ಮ ಕಾರ್ಯವನ್ನು ಮಾತ್ರ ನಿಲ್ಲಿಸದೆ ಮುಂದುವರೆಸಿದ್ದಾರೆ. 

ಪೆಟ್‌ ಫೋಟೊಗ್ರಫಿ ಹಿಂದೆ...
ಖಾಸಗಿಯಾಗಿ ಕುಟುಂಬಗಳು ಅವರ ಮುದ್ದಿನ ನಾಯಿ ಹಾಗೂ ಬೆಕ್ಕುಗಳೊಂದಿಗೆ ಫೋಟೊ ತೆಗೆಸಿಕೊಳ್ಳಲು ಬಯಸಿದಾಗ ಮಾತ್ರ ಅವರು ಹೇಳುವ ಸ್ಥಳಕ್ಕೆ ಹೋಗಿ ಫೋಟೊ ತೆಗೆದುಕೊಡುತ್ತೇನೆ. 3 ಗಂಟೆ ಫೋಟೊ ಶೂಟ್‌ಗೆ ₹5 ಸಾವಿರ ಹಣ ಪಡೆಯುತ್ತೇನೆ. ಹೀಗೆ ಪಡೆದ ಹಣವನ್ನು ಬೀದಿ ನಾಯಿಗಳು, ಅಪಘಾತಕ್ಕೀಡಾದ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನಾಯಿಗಳ ಚಿಕಿತ್ಸೆಗಾಗಿ ಬಳಸುತ್ತೇನೆ.

ಕೆಲವೊಮ್ಮೆ ಬೀದಿ ನಾಯಿಗಳಿಗೆ ರಿಫ್ಲೆಕ್ಟಿಂಗ್‌ ಕಾಲರ್‌ ತೊಡಿಸುವ ಪ್ರಾಜೆಕ್‌ಗಳಿಗೆ ಬಳಸಿಕೊಳ್ಳುತ್ತೇನೆ. ಒಂದು ಫೋಟೊ ಶೂಟ್‌ಗೆ ₹5 ಸಾವಿರ ಹಣ ನಿಗದಿ ಮಾಡುವ ಹಿಂದೆ ಬಲವಾದ ಕಾರಣವಿದೆ. ಒಮ್ಮೆ ಬೆಂಗಳೂರಿನಲ್ಲಿ ಅಪಘಾತಕ್ಕೊಳಗಾಗಿದ್ದ ನಾಯಿಯನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದಾಗ ಅಲ್ಲಿ ಮೊದಲು ₹5 ಸಾವಿರ ಮುಂಗಡವಾಗಿ ನೀಡುವಂತೆ ಹೇಳಿದ್ದರು. ಹೀಗಾಗಿ ಒಂದು ಶೂಟ್‌ ಮಾಡಿದರೆ ಒಂದು ಪ್ರಾಣಿಗೆ ವೆಚ್ಚ ಮಾಡುತ್ತೇನೆ. ಒಂದೊಂದು ಶೂಟ್‌ನಲ್ಲಿ ತೆಗೆದಾಗ ಬರುವ ಎಲ್ಲ ಒಳ್ಳೆಯ ಚಿತ್ರಗಳನ್ನು ಮಾಲೀಕರಿಗೆ ನೀಡುತ್ತೇನೆ.

ಆದರೆ ಅಸೈನ್‌ಮೆಂಟ್‌ ಒಪ್ಪಿಕೊಳ್ಳುವಾಗ ಕೇವಲ 15 ಫೋಟೊಗಳನ್ನು ನೀಡುವುದಾಗಿ ಹೇಳಿರುತ್ತೇನೆ. ಮುದ್ದಾದ ನಾಯಿ, ಬೆಕ್ಕುಗಳನ್ನು ಒಂದೆಡೆ ಕೂರಿಸಿ ಮತ್ತಷ್ಟು ಮುದ್ದಾಗಿ ಕಾಣುವಂತೆ ಫೋಟೊ ತೆಗೆಯುವುದು ಸುಲಭ ಸಾಧ್ಯವಲ್ಲ. ಒಂದು ಸಾಕು ಪ್ರಾಣಿಯ ಚಿತ್ರ ತೆಗೆಯುವುದರ ಹಿಂದೆ ಸಾಕಷ್ಟು ಪರಿಶ್ರಮ ಇರುತ್ತದೆ. ಅದಕ್ಕಿಂತ ‘ಪೆಟ್‌ ಫೋಟೊಗ್ರಫಿ’ ತಾಳ್ಮೆಯನ್ನು ಬೇಡುತ್ತದೆ.

ಯಾವುದೇ ನಾಯಿಗಳ ಫೋಟೊ ಶೂಟ್ ಒಪ್ಪಿಕೊಳ್ಳುವ ಮೊದಲು ನಾಯಿಗಳ ಮಾಲೀಕರಿಗೆ 20 ಪ್ರಶ್ನೆಗಳುಳ್ಳ ಒಂದು ಪ್ರಶ್ನಾವಳಿವನ್ನು ಇಮೇಲ್‌ ಮಾಡುತ್ತೇನೆ. ಅದರಲ್ಲಿ ಯಾವ ಜಾತಿಯ ನಾಯಿ, ಅದಕ್ಕೆ ಏನು ಇಷ್ಟ, ಅದು ಅಪರಿಚಿತರೊಂದಿಗೆ ಯಾವ ರೀತಿ ವರ್ತಿಸುತ್ತದೆ ಎಂದೆಲ್ಲ ಮಾಹಿತಿ ತೆಗೆದುಕೊಳ್ಳುತ್ತೇನೆ. ನಂತರ ಫೋಟೊ ತೆಗೆಯಲು ಹೋದಾಗ ಅವುಗಳೊಂದಿಗೆ ಪರಿಚಯ ಮಾಡಿಕೊಂಡು, ನಂತರ ಸ್ನೇಹ ಸಂಪಾದಿಸುತ್ತೇನೆ.

ಇದೆಲ್ಲ ಮುಗಿದ ಮೇಲೆಯೇ ಫೋಟೊ ತೆಗೆಯುವುದು. ಅದರಲ್ಲೂ ಫೋಟೊ ಶೂಟ್‌ ತುಂಬಾ ಹೊತ್ತು ಮಾಡುವುದಿಲ್ಲ. ಅರ್ಧ ದಿನ ಮಾತ್ರ. ಪ್ರತಿಯೊಂದು ನಾಯಿ ಅಥವಾ ಬೆಕ್ಕಿನ ಫೋಟೊ ತೆಗೆದಾಗಲೂ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ. ಈಗಾಗಲೇ ಮುಂಬೈ, ಪಾಂಡಿಚೆರಿ, ಬೆಂಗಳೂರು, ಊಟಿ, ಮಹಾಬಲಿಪುರಗಳಲ್ಲಿ ಫೋಟೊ ಶೂಟ್ ಮಾಡಿದ್ದೇನೆ.

ಮತ್ತೊಂದು ವಿಷಯವೆಂದರೆ, ಕೆಲವೊಮ್ಮೆ ಮಾಲೀಕರಿಗೆ ತಮ್ಮ ಮುದ್ದಿನ ಪ್ರಾಣಿಗಳೊಂದಿಗೆ ಸಮಯ ಕಳೆಯಲು ಕೆಲಸದಿಂದಾಗಿ ಅವಕಾಶವೇ ಸಿಕ್ಕಿರುವುದಿಲ್ಲ. ಆದರೆ ನಾನು ಮಾಡುವ ಫೋಟೊ ಶೂಟ್‌ನಿಂದ ಮಾಲೀಕರು ತಮ್ಮ ಸಾಕು ಪ್ರಾಣಿಗಳೊಂದಿಗೆ ಸಮಯ ಕಳೆಯುತ್ತಾರೆ. ಅವರಿಬ್ಬರ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಇದು ನನ್ನ ಕೆಲಸದ ಮತ್ತೊಂದು ಒಳ್ಳೆಯ ಭಾಗ ಎನ್ನಬಹುದು. 
– ಅಶೋಕ್‌ ಚಿಂತಲ, ಪೆಟ್‌ ಫೋಟೊಗ್ರಫರ್‌

ಮಾಹಿತಿಗೆ: 9381842030 ವೆಬ್‌ಸೈಟ್‌: www.pawsforapicture.in 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.