ಟಾಟಾ ನ್ಯಾನೋ ಬಿಟ್ಟರೆ ಮತ್ತೊಂದು ಹಿಂಬದಿ ಎಂಜಿನ್ ಕಾರ್ ಭಾರತದಲ್ಲಿ ಸದ್ಯಕ್ಕೆ ಬೇರೊಂದು ಇಲ್ಲ. ಆದರೆ ಡಸ್ಟರ್ ಖ್ಯಾತಿಯ ರೆನೊ ಕಂಪೆನಿ ಸದ್ದಿಲ್ಲದೇ ಪುಟ್ಟ ಕಾರ್ ಒಂದನ್ನು ಭಾರತದಲ್ಲಿ ಹೊರಬಿಡುವ ಯೋಜನೆ ಹಾಕಿಕೊಂಡಿದೆ. ಅದರಲ್ಲೂ ವಿಶೇಷವೆಂದರೆ ಅದು ಹಿಂಬದಿ ಎಂಜಿನ್ ಉಳ್ಳ ಕಾರ್. ಹೆಸರೂ ಚೆನ್ನಾಗಿದೆ. ಇದು ರೆನೊ ಟ್ವಿಂಗೊ.
ಹಿಂಬದಿ ಎಂಜಿನ್ ಇರುವ ಕಾರ್‌ಗಳು ಒಂದು ರೀತಿಯಲ್ಲಿ ಹೆಚ್ಚು ಶಕ್ತಿ ಹೊಂದಿರುತ್ತವೆ ಎಂಬ ವಾದವಿದೆ. ಏಕೆಂದರೆ ಈ ಕಾರ್‌ಗಳಲ್ಲಿ ಹಿಂಬದಿ ಚಕ್ರಗಳಿಗೆ ನೇರ ಚಾಲನೆ ಸಿಗುತ್ತದೆ. ಹಾಗಾಗಿ ಈ ಹಿಂಬದಿ ಚಕ್ರವುಳ್ಳ ಕಾರ್‌ಗಳು ಕಾರನ್ನು ಮುಂದಕ್ಕೆ ತಳ್ಳುತ್ತವೆ (ಮುಂಭಾಗದ ಚಕ್ರದ ಶಕ್ತಿ ಇರುವ ಕಾರ್‌ಗಳು ಕಾರನ್ನು ಎಳೆಯುತ್ತವೆ). ಹಾಗಾಗಿ ಭಾರತದ ಟಾಟಾ ನ್ಯಾನೋ ಆರಂಭದಲ್ಲಿ ಅಚ್ಚರಿ ಮೂಡಿಸಿತ್ತು. ಆದರೆ ಟಾಟಾ ನ್ಯಾನೋದು 7೦೦ ಸಿಸಿ ಒಳಗಿನ ಪುಟ್ಟ ಎಂಜಿನ್. ಹಾಗಾಗಿ ಕೆಲವರು ಇದು ಆಟೊ ರೀತಿ ಶಬ್ದ ಮಾಡುತ್ತದೆ ಎಂಬ ಆರೋಪವನ್ನೂ ಮಾಡುತ್ತಾರೆ. ಆದರೆ ರೆನೊ ಹೊರಬಿಡುತ್ತಿರುವ ಟ್ವಿಂಗೊ, ಪುಟ್ಟ ಕಾರ್ ಏನಲ್ಲ. ಬದಲಿಗೆ ಮಾರುತಿ ಸುಜುಕಿ ಈಗಷ್ಟೇ ಹೊರಬಿಟ್ಟ ಸೆಲೆರಿಯೋನಷ್ಟಿದೆ.
ಆದರೆ ಎಂಜಿನ್ ಮಾತ್ರ ಹಿಂಬದಿಯಲ್ಲಿದೆ. ರೆನೊ ಟ್ವಿಂಗೊನಲ್ಲಿ ಎರಡು ಮಾದರಿ ಕಾರ್‌ಗಳನ್ನು ಹೊರಬಿಡಲಿದೆ. ಒಂದು, 999 ಸಿಸಿಯ ಶಕ್ತಿಶಾಲಿ ಕಾರ್. ಮತ್ತೊಂದು 898 ಸಿಸಿಯ ಎಕಾನಮಿ ಕಾರ್. ಒಂದು ಉತ್ತಮ ಸಾಮರ್ಥ್ಯ ಹೊಂದಿದ್ದರೆ, ಮತ್ತೊಂದು ಮೈಲೇಜ್ ಚೆನ್ನಾಗಿ ನೀಡುತ್ತದೆ. ಈ ಕಾರ್‌ಗಳಿಗೆ 71 ಪಿಎಸ್ ಶಕ್ತಿ ಹಾಗೂ 91 ಎನ್‌ಎಂ ಟಾರ್ಕ್ ಇದ್ದು, ರಸ್ತೆಯಲ್ಲಿ ಪುಟಿಯುತ್ತ ಸಾಗುತ್ತದೆ. ಉತ್ತಮ ಶಕ್ತಿಯಂತೂ ಇರುತ್ತದೆ. ಜತೆಗೆ ಆಧುನಿಕ ವಿನ್ಯಾಸವೂ ಇದೆ.
ಭಾರತಕ್ಕೆಂದೇ ವಿನ್ಯಾಸ: ಭಾರತೀಯ ರಸ್ತೆಗಳಿಗಾಗೇ ಇದರ ವಿನ್ಯಾಸ ಆಗಿದೆ. ಹಾಗಾಗಿ ಹೆಚ್ಚು ದೃಢವಾದ ಚಕ್ರ ಹಾಗೂ ಚಾಸಿಸ್ ಇದೆ. ಉತ್ತಮ ಮೈಲೇಜ್ ನೀಡುತ್ತದೆ. 5 ಮಂದಿ ಆರಾಮಾಗಿ ಕೂರಬಲ್ಲ ಐಷಾರಾಮಿ ಆಸನಗಳೂ ಈ ಕಾರ್‌ನಲ್ಲಿ ಇವೆ.
ಆಧುನಿಕ ಸ್ಪರ್ಶ: ಆಧುನಿಕ ತಂತ್ರಜ್ಞಾನದ ಉತ್ತಮ ಬಳಕೆಯೂ ಇದರಲ್ಲಿದೆ. ಮಲ್ಟಿಮೀಡಿಯಾ ಟಚ್‌ಸ್ಕ್ರೀನ್ ಆಡಿಯೊ ಸಿಸ್ಟಂ, ೩ಡಿ ನೇವಿಗೇಷನ್, ಡ್ರಿಪ್ ಕಂಪ್ಯೂಟರ್, ದೂರವಾಣಿ ಸೌಲಭ್ಯ ಇತ್ಯಾದಿಗಳೂ ಈ ಕಾರ್‌ನಲ್ಲಿರುವುದು ವಿಶೇಷವಾಗಿದೆ. ಸುಮಾರು 4 ರಿಂದ 5 ಲಕ್ಷ ಎಕ್ಸ್ ಶೋರೂಂ ಬೆಲೆ ಈ ಟ್ವಿಂಗೋದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.