ADVERTISEMENT

ಮುಖ ನೋಡದೆ, ಶಬ್ಧ ಕೇಳದೆ ವ್ಯಕ್ತಿ ಯಾರೆಂದು ಗುರುತಿಸುತ್ತಾನೆ ಈತ! ಹೇಗೆ ಗೊತ್ತಾ?

Dinesha R
Published 5 ಫೆಬ್ರುವರಿ 2026, 15:55 IST
Last Updated 5 ಫೆಬ್ರುವರಿ 2026, 15:55 IST
<div class="paragraphs"><p>ಭುವನ್ ಎಸ್</p></div>

ಭುವನ್ ಎಸ್

   

ಸಾಧನೆ ಎನ್ನುವುದು ಯಾರ ಸ್ವತ್ತು ಅಲ್ಲ, ಅದು ಸಾಧಕರ ಸ್ವತ್ತು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದೊಂದು ವಿಶೇಷವಾದ ಸಾಮರ್ಥ್ಯ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಹೊರತರಬೇಕು ಹಾಗೂ ಗುರುತಿಸುವಂತಹ ವ್ಯಕ್ತಿಯ ಬಳಿ ಪ್ರತಿಭೆ ಹೋಗಿ ತಲುಪಬೇಕು. ಆಗ ಮಾತ್ರ ಯಾವುದೇ ವ್ಯಕ್ತಿಯಲ್ಲಿರುವ ವಿಶೇಷ ಪ್ರತಿಭೆ ಹೊರಬರಲು ಸಾಧ್ಯ.

ಮಹಾಭಾರತದಲ್ಲಿ ಏಕಲವ್ಯನಿಗೆ ವಿಶೇಷವಾದ ಬಿಲ್ಲುವಿದ್ಯೆ ಸಿದ್ಧಿಸಿತ್ತು. ಅದೂ ಕೂಡ ಕೇವಲ ಧ್ವನಿಯನ್ನು ಗ್ರಹಿಸಿ ಗುರಿ ತಪ್ಪದಂತೆ ಹೊಡೆಯುವುದು. ಅಂತಹದ್ದೇ, ಒಂದು ವಿಶೇಷವಾದ ಪ್ರತಿಭೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗೇರುಪುರದಲ್ಲಿರುವ ಇಂದಿರಾಗಾಂಧಿ ಹಿಂದುಳಿದ ವರ್ಗಗಳ ವಸತಿ ಶಾಲೆಯ ವಿದ್ಯಾರ್ಥಿಗೆ ಇದೆ.

ADVERTISEMENT

ಆತನ ಹೆಸರು ಭುವನ್ ಎಸ್. ಎಲ್ಲಾ ವಿದ್ಯಾರ್ಥಿಗಳಂತೆ ಅವನು ಕೂಡ ಸಾಮಾನ್ಯ ವಿದ್ಯಾರ್ಥಿ. ಆಟ, ಪಾಠ ಎಲ್ಲದರಲ್ಲೂ ಉತ್ತಮ ಆಸಕ್ತಿ ಹೊಂದಿದವನಾಗಿದ್ದಾನೆ. ಜೊತೆಗೆ, ಆತನಲ್ಲಿ ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ಇರುವುದಕ್ಕಿಂತಲೂ ವಿಶೇಷವಾದ ಪ್ರತಿಭೆಯೊಂದಿದೆ. ಅದೇ, ಮುಖ ನೋಡದೆ, ಧ್ವನಿ ಗ್ರಹಿಸದೆ ಕೇವಲ ಪಾದಗಳನ್ನು ನೋಡಿ ಆತ ಯಾರು ಎಂದು ಹೇಳುವುದು..!

ಅರೇ ಇದೇನಿದು ಆಶ್ಚರ್ಯ ಎಂದು ನಿಮಗೂ ಅನಿಸಬಹುದು. ಮುಖ ನೋಡದೆ, ಧ್ವನಿಯನ್ನೂ ಕೇಳದೆ, ಕೇವಲ ಪಾದವನ್ನು ನೋಡಿ ಆತ ಯಾರು ಎಂದು ಹೇಳಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ನಿಮಗೆ ಎದುರಾಗಬಹುದು. ಆರಂಭದಲ್ಲಿ ನಮಗೂ ಹಾಗೆ ಅನಿಸಿತ್ತಾದರೂ, ಪ್ರಮಾಣಿಸಿ ನೋಡಿದಾಗ ಅದು ಸತ್ಯ ಎಂಬ ಅರಿವಿಗೆ ಬಂದೆವು.

ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ ಒಟ್ಟು 250 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಪೈಕಿ 125 ಬಾಲಕರು ಹಾಗೂ 125 ಬಾಲಕಿಯರಿದ್ದಾರೆ. ಭುವನ್, ಅಲ್ಲಿರುವ ಎಲ್ಲಾ 125 ಬಾಲಕರು ಹಾಗೂ ಸುಮಾರು 20ಕ್ಕೂ ಅಧಿಕ ಸಿಬ್ಬಂದಿಯ ಹೆಸರನ್ನು ಕೇವಲ ಪಾದ ನೋಡಿಯೇ ಗುರುತಿಸುವ ವಿಶೇಷ ಸಾಮರ್ಥ್ಯ ಹೊಂದಿದ್ದಾನೆ.

ಭುವನ್ ಎಸ್. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಮಂಗರ್ಶಿಕೊಪ್ಪ ಎಂಬ ಪುಟ್ಟ ಗ್ರಾಮದ ಶೇಷಗಿರಿ ಬಿ ಮತ್ತು ಹೇಮಾವತಿ ದಂಪತಿಗಳ ಮಗ. ವಿದ್ಯಾಭ್ಯಾಸದಲ್ಲಿಯೂ ತುಂಬಾ ಚುರುಕಿನವನಾಗಿದ್ದು, ಈಗ ತನ್ನಲ್ಲಿರುವ ವಿಶೇಷ ಪ್ರತಿಭೆಯ ಮೂಲಕ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದಾನೆ.

ಪ್ರಾಂಶುಪಾಲರೇ ನನ್ನ ಸ್ಫೂರ್ತಿ

ತನ್ನ ವಿಶೇಷ ಪ್ರತಿಭೆ ಕುರಿತು ಪ್ರಜಾವಾಣಿ ಡಿಜಿಟಲ್ ಜೊತೆ ಮಾತನಾಡಿದ ಭುವನ್ ಎಸ್. ನನ್ನ ಪ್ರತಿಭೆಯನ್ನು ಗುರುತಿಸಿದ್ದು ನನ್ನ ಪ್ರಾಂಶುಪಾಲರಾದ ಯೋಗೇಶ್ ಹೆಬ್ಬಳಗೆರೆ ಸರ್. ಅವರು, ನಾನು ಮಾತ್ರವಲ್ಲ ಯಾವುದೇ ವಿದ್ಯಾರ್ಥಿಗಳಲ್ಲಿ ಇರುವ ವಿಶೇಷ ಪ್ರತಿಭೆಯನ್ನು ಹೊರತಲು ಶ್ರಮಿಸುತ್ತಾರೆ. ‘ಕಳೆದ ವರ್ಷ ಸ್ವತಃ ಅವರೇ ಮುಖ ನೋಡದೆ, ಕೇವಲ ಶಬ್ಧ ಗ್ರಹಿಸಿ ಶಾಲಾ ಎಲ್ಲಾ ವಿದ್ಯಾರ್ಥಿಗಳ ಹೆಸರು ಹೇಳಿದ್ದರು. ಅದನ್ನು ಸ್ಫೂರ್ತಿಯಾಗಿ ತೆಗೆದುಕೊಂಡ ನಾನು, ಪಾದ ನೋಡಿ ಯಾಕೆ ಪ್ರಯತ್ನಿಸಬಾರದು ಎಂದು ಯೋಚಿಸಿದೆ ಹಾಗಾಗಿ ನನ್ನಿಂದ ಇದು ಸಾಧ್ಯವಾಯಿತು’ ಎಂದರು.

ಪ್ರತಿಯೊಬ್ಬರ ಪಾದಗಳು ವಿಭಿನ್ನ

‘ನಾನು, ಯಾವುದೇ ವ್ಯಕ್ತಿಯ ಪಾದಗಳನ್ನು ಒಮ್ಮೆ ನೋಡಿದರೆ ಸಾಕು ಅದು ಇವರೇ ಎಂದು ಗುರುತಿಸಬಲ್ಲೇ. ಏಕೆಂದರೆ, ಪ್ರತಿಯೊಬ್ಬರ ಪಾದಗಳು ವಿಭಿನ್ನವಾಗಿರುತ್ತವೆ’ ಎಂದು ಭುವನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.