ನಿಮ್ಮ ಮಗುವನ್ನು ಸಂತೈಸಿರಿ...
– ಗೆಟ್ಟಿ ಚಿತ್ರ
ಬ್ಯಾಂಕೊಂದರಲ್ಲಿ ಮ್ಯಾನೇಜರ್ ಆಗಿರುವ ನನ್ನ ಗಂಡನಿಗೆ ವಿಪರೀತ ಕೋಪ. ನಮ್ಮ ಮೊದಲ ಮಗ ಚೆನ್ನೈನಲ್ಲಿ ಎಂಜಿನಿಯರಿಂಗ್ ಕಲಿಯುತ್ತಿದ್ದಾನೆ. ಎರಡನೆಯವನು ಮೊದಲ ವರ್ಷದ ಪಿಯು ಓದುತ್ತಿದ್ದಾನೆ. ಮಕ್ಕಳನ್ನು ಶಿಸ್ತಿನಿಂದ ಬೆಳೆಸಿ, ಜಾಣರಾಗಿಸಬೇಕು ಎನ್ನುವುದು ನಮ್ಮ ಆಸೆ. ಹಾಗಾಗಿ, ಮಕ್ಕಳಿಂದ ಸಣ್ಣ ತಪ್ಪಾದರೂ ನನ್ನ ಗಂಡ ಸಿಡಿಮಿಡಿಗೊಳ್ಳುತ್ತಾರೆ, ಶಿಕ್ಷಿಸುತ್ತಾರೆ. ನನಗಂತೂ ಅದು ರೂಢಿಯಾಗಿದೆ. ಮಕ್ಕಳು ಇದನ್ನು ಪ್ರತಿಭಟಿಸುತ್ತಾರೆ. ಎರಡನೆಯವನು ಸರಿಯಾಗಿ ಓದುತ್ತಿಲ್ಲ. ಕಾಲೇಜಿನಲ್ಲಿ ಗಲಾಟೆ ಮಾಡುತ್ತಾನೆ. ಧೂಮಪಾನದ ಚಟವೂ ಇದೆ ಎಂದು ಗೊತ್ತಾಗಿದೆ. ಈ ವಿಷಯದಲ್ಲಿ ಅಪ್ಪ– ಮಗ ಜಗಳಕ್ಕೆ ನಿಂತರು. ಅಪ್ಪ ಮಗನಿಗೆ ಹೊಡೆದರು. ಮಗನೂ ಸಿಟ್ಟಿನಲ್ಲಿ ತಂದೆಗೆ ಹೊಡೆದ. ಆಘಾತಗೊಂಡ ನನ್ನ ಗಂಡ ಅತ್ತು, ಎಚ್ಚರ ತಪ್ಪಿ ಬಿದ್ದರು. ಮರುದಿನದಿಂದ ಮಗ ಯಾರ ಬಳಿಯೂ ಮಾತನಾಡುತ್ತಿಲ್ಲ. ಅವನ ದಿನಚರಿ ಅಸ್ತವ್ಯಸ್ತವಾಗಿದೆ, ಇವರೂ ಖಿನ್ನತೆಗೆ ಜಾರಿದ್ದಾರೆ. ಹೆತ್ತ ಮಗನೇ ಹೊಡೆದದ್ದನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಯಾರಿಗೆ ಏನು ಹೇಳಬೇಕು ತಿಳಿಯುತ್ತಿಲ್ಲ. ದಾರಿ ತೋರಿಸಿ.
ಸಾಧನಾ ರವಿಚಂದ್ರ, ಬೆಂಗಳೂರು
ತುಂಬಾ ಗಂಭೀರ ಮತ್ತು ನೋವಿನ ಪರಿಸ್ಥಿತಿಯಲ್ಲಿ ಇದ್ದೀರಿ. ಈಗ ನಿಮ್ಮ ಇಡೀ ಕುಟುಂಬದಲ್ಲಿ ಭಾವನೆಗಳ ಸ್ಪೋಟವಾಗಿದೆ. ಈ ಪರಿಸ್ಥಿತಿಯಲ್ಲಿ ಎಲ್ಲರೂ ಒತ್ತಡದಲ್ಲಿ, ನೋವಿನಲ್ಲಿ, ಚಿಂತೆಯಲ್ಲಿ ಕೊರಗುತ್ತಿದ್ದೀರಿ. ಎಲ್ಲರೂ ಸಮಾಧಾನದಿಂದ ಸರಿಯಾದ ಮಾರ್ಗದಲ್ಲಿ ಮುಂದುವರಿದರೆ ಪರಿಸ್ಥಿತಿಯನ್ನು ಹತೋಟಿಗೆ ತಂದುಕೊಳ್ಳಬಹುದು.
ಮೊದಲು ನಿಮ್ಮ ಯಜಮಾನರ ಬಗ್ಗೆ ಆಲೋಚಿಸಬೇಕು. ಆಫೀಸಿನಲ್ಲಿ ಎಲ್ಲರಿಂದ ಗೌರವ ಪಡೆದುಕೊಂಡು ಬದುಕುತ್ತಿರುವ ಅವರಿಗೆ ತನ್ನ ಮಗನೇ ತನಗೆ ಹೊಡೆದದ್ದರಿಂದ ಮಾನಸಿಕವಾಗಿ ತೀವ್ರ ಆಘಾತವಾಗಿದೆ, ಅವಮಾನವಾಗಿದೆ. ಭಾವನಾತ್ಮಕವಾಗಿ ಕುಸಿದಿದ್ದಾರೆ. ಈಗ ಅವರಿಗೆ ನಿಮ್ಮ ಆಸರೆ ಬೇಕಾಗಿದೆ. ನಿಮ್ಮ ಮಾನಸಿಕ ಒತ್ತಡವನ್ನು ಬದಿಗಿಟ್ಟು ನೀವು ಅವರನ್ನು ಸಂತೈಸಬೇಕಾಗಿದೆ. ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗಿದೆ. ಮನೆಗೆ ನಿಮ್ಮ ಆತ್ಮೀಯರಾಗಲೀ ಬಂಧುಗಳಾಗಲೀ ಬಂದುಹೋಗುವಂತೆ ವ್ಯವಸ್ಥೆ ಮಾಡಿ. ಮನೆಯಲ್ಲಿ ಉಸಿರುಗಟ್ಟಿದ ವಾತಾವರಣ ತಿಳಿಯಾಗಲು ಏನನ್ನು ಮಾಡಬಹುದೋ ಅವನ್ನು ಒಂದೊಂದಾಗಿ ಮಾಡಿ.
ಮಗನನ್ನೂ ಅಷ್ಟೇ ಆಸ್ಥೆಯಿಂದ ಸಂತೈಸಬೇಕಾಗಿದೆ. ಅವನಿಗೆ ಹದಿಹರೆಯ. ತುಂಬಾ ಸಂವೇದನಾಶೀಲನಾಗಿರುವ ಸಮಯ. ಹಾರ್ಮೋನಿನ ಬದಲಾವಣೆಯಿಂದಾಗಿ ಅವನ ಭಾವನೆಗಳು ಅವನ ನಿಯಂತ್ರಣದಲ್ಲಿ ಇರುವುದಿಲ್ಲ. ಮನಸ್ಸು ಸ್ವಲ್ಪ ತಿಳಿಯಾದಮೇಲೆ, ತಾನು ತಂದೆಗೆ ಹೊಡೆದದ್ದು ತಪ್ಪು ಎಂದು ಅನ್ನಿಸಿ, ಅವನೂ ಪಶ್ಚಾತ್ತಾಪದಿಂದ ಬಳಲುತ್ತಿದ್ದಾನೆ. ಮೌನವಾಗಿ ರೋದಿಸುತ್ತಿದ್ದಾನೆ. ಅವನನ್ನು ತಪ್ಪಿತಸ್ಥನನ್ನಾಗಿ ಮಾಡದೇ ಉಪದೇಶ ಮಾಡದೇ ಸಂತೈಸಬೇಕು. ಮನೆಯಲ್ಲಿ ನಿಮ್ಮ ಮೂವರ ಮಧ್ಯೆ ನಡೆದ ಘಟನೆಯ ಬಗ್ಗೆ ಯಾರಿಗೂ ಹೇಳುವ ಅಗತ್ಯವಿಲ್ಲ. ಅದು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬೇಕು ಮತ್ತು ಮೂವರೂ ಅವಮಾನ, ಆಘಾತ ಅಂತೆಲ್ಲ ಅಂದುಕೊಳ್ಳಬೇಡಿ. ಮಗನನ್ನು ಮಾತನಾಡಿಸಿ. ಅವನ ಮಾತುಗಳನ್ನು ಸಮಾಧಾನದಿಂದ ಕೇಳಿ. ಅವನ ಕಷ್ಟವನ್ನು ಅರ್ಥಮಾಡಿಕೊಳ್ಳಿ. ಹೆಂಡತಿಯಾಗಿ, ತಾಯಿಯಾಗಿ, ಮನೆಯ ಯಜಮಾನಿಯಾಗಿ ನಿಮಗಿರುವ ಒತ್ತಡದಲ್ಲಿ ನಿಮ್ಮನ್ನು ನೀವು ಸಮಾಧಾನದಿಂದ ಇಟ್ಟುಕೊಳ್ಳುವುದು ಬಹಳ ಮುಖ್ಯ.
ಮಕ್ಕಳನ್ನು ಬೈಯ್ದು, ಹೊಡೆದು, ಬಡಿದು ಶಿಸ್ತನ್ನು ಕಲಿಸಿ, ಒಳ್ಳೆಯವರನ್ನಾಗಿಯೂ ಯಶಸ್ವಿಯನ್ನಾಗಿಯೂ ಮಾಡುತ್ತೇನೆ ಎನ್ನುವುದು ಸರಿಯಲ್ಲ. ಅದು ಸಾಧುವೂ ಅಲ್ಲ, ಸಾಧ್ಯವೂ ಇಲ್ಲ. ಇದನ್ನು ಎಲ್ಲ ಪಾಲಕರೂ ಅರ್ಥಮಾಡಿಕೊಳ್ಳಬೇಕು. ನಮ್ಮ ಮನೆಯಲ್ಲಿ ಯಾವ ವಾತಾವರಣವನ್ನು ಇಟ್ಟುಕೊಳ್ಳಬೇಕು ಎನ್ನುವುದನ್ನು ಅರ್ಥಮಾಡಿಕೊಂಡು, ಅಂಥದ್ದೇ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು.
ನೀವು ಬೇರೆ ಬೇರೆಯಾಗಿ ನಿಮ್ಮ ಯಜಮಾನರನ್ನು ಹಾಗೂ ಮಗನನ್ನು ತಜ್ಞ ವೈದ್ಯರ ಬಳಿ ಕರೆದುಕೊಂಡು ಹೋಗಬಹುದು. ವೈದ್ಯರ ಆಣತಿಯಂತೆ ಕೆಲವು ಸಲ ಎಲ್ಲರೂ ಒಟ್ಟಾಗಿ ಕೆಲವು ಸೆಶನ್ಸ್‌ಗಳನ್ನು ಪಡೆದುಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.