ADVERTISEMENT

ಸ್ಪಂದನ | ಯೋನಿಯಲ್ಲಿ ವಿಪರೀತ ತುರಿಕೆ ಪರಿಹಾರವೇನು?

ಡಾ.ವೀಣಾ ಭಟ್ಟ
Published 4 ಜುಲೈ 2025, 23:25 IST
Last Updated 4 ಜುಲೈ 2025, 23:25 IST
<div class="paragraphs"><p>  vagina</p></div>

vagina

   

ಇಬ್ಬರು ಮಕ್ಕಳ ತಾಯಿ ನಾನು. ಆರು ತಿಂಗಳಿನಿಂದ ಯೋನಿಯಲ್ಲಿ ವಿಪರೀತ ಎನ್ನುವಷ್ಟು ತುರಿಕೆ ಇದೆ. ಸಂತೃಪ್ತ ಲೈಂಗಿಕ ಜೀವನ ನಡೆಸುತ್ತಿದ್ದೇನೆ. ಯಾವುದೇ ಸಮಸ್ಯೆಯಿಲ್ಲ. ವೈದ್ಯರ ಬಳಿ ಹೋಗಿದ್ದೇನೆ. ಅವರು ಕೊಟ್ಟ ಮಾತ್ರೆ ಹಾಗೂ ಕ್ರೀಮ್‌ಗಳಿಂದ ಪ್ರಯೋಜನವಾಗಿಲ್ಲ. ಏನು ಮಾಡಲಿ?

– ಮಂಗಳಾ, ತುಮಕೂರು

ADVERTISEMENT

ಎಲ್ಲ ವಯಸ್ಸಿನ ಮಹಿಳೆಯರಲ್ಲಿಯೂ ಹೊರ ಜನನಾಂಗದ ಭಾಗದಲ್ಲಿ (ಗೊಲ್ಲಿ) ಕೆರೆತ ಸಾಮಾನ್ಯ. ಫಂಗಸ್‌ ಮತ್ತು ಟ್ರೈಕೋಮೊನೋಸ್‌ನಂಥ ಸೂಕ್ಷಾಣುಜೀವಿಗಳ ಸೋಂಕಿನಿಂದ ಕೆರೆತ ಉಂಟಾಗಬಹುದು. ಅಲರ್ಜಿಗೆ ಒಳಗಾದ ಒಳಉಡುಪು ಧರಿಸುವುದರಿಂದಲೂ ಆಗಬಹುದು. ಇಂಥ ಸೋಂಕು ಉಂಟಾದಾಗ ಅಸಹಜವಾದ, ವಾಸನೆಸಹಿತ ಬಿಳಿಮುಟ್ಟು ಕಾಣಿಸಿಕೊಳ್ಳಬಹುದು.

ಹಲವು ಸಂದರ್ಭಗಳಲ್ಲಿ ಈ ಗೊಲ್ಲಿ ಕೆರೆತ ಬೇರೆ ಕಾಯಿಲೆಗಳನ್ನು ತಿಳಿಸುವ ಮುನ್ಸೂಚನೆಯೂ ಆಗಿರಬಹುದು. ಉದಾಹರಣೆಗೆ, ಮಧುಮೇಹ, ಯಕೃತ್‌ನಲ್ಲಿ ತೊಂದರೆ ಹಾಗೂ ಮೂತ್ರಪಿಂಡ ಸಮಸ್ಯೆ. ಎಕ್ಸಿಮಾ, ಸಿಬೋರಿಕ್ ಡರ್ಮಟೈಟಿಸ್, ರಕ್ತಹೀನತೆ, ಬಿ 12 ವಿಟಮಿನ್ ಕೊರತೆಯಂಥ ಸಂದರ್ಭಗಳಲ್ಲಿಯೂ ಯೋನಿಯಲ್ಲಿ ಕೆರೆತ ಉಂಟಾಗಬಹುದು.

ಮೂತ್ರನಾಳದ ಸೋಂಕು, ಫಿಸ್ತುಲಾ, ತೊಡೆಭಾಗದಲ್ಲಿ ಅತಿಯಾದ ಬೆವರು ಶೇಖರಣೆಯಿಂದ ತೇವಾಂಶ ಹೆಚ್ಚಾದಾಗ, ಮೂತ್ರದಲ್ಲಿ ಆಮ್ಲದ ಅಂಶ ಹೆಚ್ಚಿದ್ದಾಗ, ಹಾರ್ಮೋನುಗಳ ಕೊರತೆಯಿಂದ ಯೋನಿಯ ಆಮ್ಲತೆಯಲ್ಲಿ ವ್ಯತ್ಯಯ ಉಂಟಾದಾಗಲೂ ಕೆರೆತದ ಸಮಸ್ಯೆ ಕಾಡಬಹುದು.

‌ಇಷ್ಟೇ ಅಲ್ಲದೆ ರಾಸಾಯನಿಕಯುಕ್ತ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವುದರಿಂದ, ಕಠಿಣ ರಾಸಾಯನಿಕದಿಂದ ಕೂಡಿದ ಸೋಪು ಹಾಗೂ ಆ್ಯಂಟಿಸೆಪ್ಟಿಕ್‌ ದ್ರಾವಣ ಬಳಸಿ ತೊಳೆದ ಒಳಉಡುಪುಗಳನ್ನು ಧರಿಸುವುದರಿಂದ, ಬಿಸಿಲಿನಲ್ಲಿ ಸರಿಯಾಗಿ ಒಣಗದೇ ಇರುವ ಒಳಉಡುಪುಗಳನ್ನು ಧರಿಸುವುದರಿಂದ, ನಿರೋಧ್‌ ರಬ್ಬರ್‌ ಮತ್ತು ಮೆನ್‌ಸ್ಟ್ರುಯಲ್‌ ಕಪ್‌ನ ಲೇಟೆಕ್ಸ್‌ ರಬ್ಬರ್‌ಗಳ ಬಳಕೆಯಿಂದಲೂ ಅಲರ್ಜಿ ಉಂಟಾಗಬಹುದು.

ಹೆಚ್ಚಿನವರು ಸಂಕೋಚದಿಂದ ಸೂಕ್ತ ಚಿಕಿತ್ಸೆ ಪಡೆಯದೆ ಯಾತನೆ ಅನುಭವಿಸುತ್ತಾರೆ. ಕೆರೆತಕ್ಕೆ ಚಿಕಿತ್ಸೆ ನೀಡುವ ಮೊದಲು ಕಾರಣವನ್ನು ಕಂಡುಹಿಡಿಯಬೇಕು. ಹೆಚ್ಚಿನ ಮಹಿಳೆಯರಿಗೆ ಇಂಥ ಕೆರೆತದ ಸಂದರ್ಭದಲ್ಲಿಯೇ ಮಧುಮೇಹ ಇರುವುದು ಪತ್ತೆಯಾಗುತ್ತದೆ. ಹಾಗಾಗಿ, ನೀವೊಮ್ಮೆ ಮೂತ್ರ ಮತ್ತು ರಕ್ತದ ತಪಾಸಣೆ ಮಾಡಿಸಿ, ಮಧುಮೇಹ ಇಲ್ಲವೆಂಬುದನ್ನು ಖಾತರಿಪಡಿಸಿಕೊಳ್ಳಿ. ಚರ್ಮದ ಕಾಯಿಲೆಯಿದ್ದರೆ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳಿ. ಬಿಗಿಯಾದ ಒಳಉಡುಪು ಧರಿಸಬೇಡಿ. ಮೂತ್ರ ಹಾಗೂ ಮಲವಿಸರ್ಜನೆಯ ನಂತರ ಸ್ವಚ್ಛವಾಗಿ ತೊಳೆದುಕೊಳ್ಳಿ. ಸೋಪು ಅಥವಾ ಆ್ಯಂಟಿಸೆಪ್ಟಿಕ್‌ ಬಳಸಬೇಡಿ. ತೀವ್ರವಾದ ಸೋಂಕು ಇದ್ದಾಗ ಮಾತ್ರ ವೈದ್ಯರ ಶಿಫಾರಸಿನ ಮೇರೆಗೆ ಆ್ಯಂಟಿಫಂಗಲ್‌ ಮತ್ತು ಆ್ಯಂಟಿಬಯಾಟಿಕ್‌, ಆ್ಯಂಟಿಹಿಸ್ಟಮಿನ್‌ ಮಾತ್ರೆಗಳನ್ನು ಸೇವಿಸಿ. ಯೋನಿಯ ಕೆರೆತ ಹಲವು ರೋಗಗಳ ಲಕ್ಷಣವೂ ಆಗಿರುವುದರಿಂದ ತಡ ಮಾಡದೆ ಚಿಕಿತ್ಸೆ ಪಡೆಯಿರಿ. 

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು
bhoomika@prajavani.co.inಗೆ ಕಳುಹಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.