ADVERTISEMENT

ಅಂತಿಮ ಹಣಾಹಣಿ ಇಂದು

​ಪ್ರಜಾವಾಣಿ ವಾರ್ತೆ
Published 12 ಮೇ 2012, 19:30 IST
Last Updated 12 ಮೇ 2012, 19:30 IST
ಅಂತಿಮ ಹಣಾಹಣಿ ಇಂದು
ಅಂತಿಮ ಹಣಾಹಣಿ ಇಂದು   

ಸಿದ್ದಾಪುರ: ಕೊಡವ ಕುಟುಂಬಗಳ ಹಾಕಿ ಉತ್ಸವದ ಮೊದಲ ವರ್ಷದ ಪ್ರಶಸ್ತಿ ಗೆದ್ದ ಕಲಿಯಂಡ ತಂಡ ಮತ್ತು ಇಲ್ಲಿಯವರೆಗೆ ಮೂರು ಸಲ ಪ್ರಶಸ್ತಿ ಗೆದ್ದ ಪಳಂಗಂಡ ತಂಡಗಳು ಭಾನುವಾರ ಐಚೆಟ್ಟಿರ ಕಪ್ ಅನ್ನು ಎತ್ತಿಕೊಳ್ಳಲು ಹೋರಾಟ ನಡೆಸಲಿವೆ. 

ಏಪ್ರಿಲ್ 21ರಂದು ಆರಂಭವಾದ ಈ ಉತ್ಸವದ ಅಂತಿಮ `ಸಮರ~ವನ್ನು ವೀಕ್ಷಿಸಲು ಕೊಡಗಿನ ಮೂಲೆ ಮೂಲೆಗಳಿಂದ ನೂರಾರು ಹಾಕಿ ಪ್ರೇಮಿಗಳು ಭಾನುವಾರ ಅಮ್ಮತ್ತಿಗೆ ಬರಲಿದ್ದಾರೆ.

ಪಳಂಗಂಡ ತಂಡವು 2006, 2010 ಹಾಗೂ 2011ರಲ್ಲಿ ಪ್ರಶಸ್ತಿ ಗೆದ್ದಿದೆ. ಕಲಿಯಂಡ ತಂಡ ಇದೀಗ ಮೂರನೇಯ ಬಾರಿ ಫೈನಲ್‌ನಲ್ಲಿ ಆಡುತ್ತಿರುವುದಾಗಿದೆ. ಕಳೆದ ವರ್ಷ ಅಂತಿಮ ಘಟ್ಟದಲ್ಲಿ ಕೈತಪ್ಪಿದ್ದ ಟ್ರೋಫಿಯನ್ನು ಈ ಸಲ ಎತ್ತಿಕೊಳ್ಳಲು ತುದಿಗಾಲಲ್ಲಿ ನಿಂತಿದೆ.  ಕಲಿಯಂಡ ತಂಡ 1997ರಲ್ಲಿ ಕರಡ ಎಂಬಲ್ಲಿ ನಡೆದಿದ್ದ ಮೊದಲ `ಉತ್ಸವ~ದಲ್ಲಿ ವಿಜೃಂಭಿಸಿ ಪಾಂಡಂಡ ಕಪ್ ಗೆದ್ದಿತ್ತು. 

ಬೋಪಣ್ಣ ಅವರಿಂದ ತರಬೇತು ಪಡೆದಿರುವ ಕಲಿಯಂಡ ತಂಡದ ಗೋಲ್ ಕೀಪರ್ ಸಂದೇಶ್, ಸೌತ್ ಸೆಂಟ್ರಲ್ ರೈಲ್ವೆಯ ಆಟಗಾರ ಭರತ್, ಬಿ.ಇ.ಎಂ.ಎಲ್.ನ ಕಿರಣ್, ಚೆನೈ ಇಂಡಿಯನ್ ಓವರಸೀಸ್ ಬ್ಯಾಂಕಿನ ಅತಿಥಿ ಆಟಗಾರ ಕಾರ್ಯಪ್ಪ ಫೈನಲ್‌ನಲ್ಲಿ ಗಮನ ಸೆಳೆಯಲಿದ್ದಾರೆ.

ಪಳಂಗಂಡ ತಂಡ ಬಹುತೇಕ ಯುವ ಆಟಗಾರರನ್ನೆ ಒಳಗೊಂಡಿದ್ದು ಕಲಿಯಂಡ ಕುಟುಂಬಕ್ಕೆ ಉತ್ತಮ ಪೈಪೋಟಿ ನೀಡಲು ಸಜ್ಜಾಗಿದೆ.  ಕಾವೇರಪ್ಪ ಹಾಗೂ ಸುರೇಶ್ ಪಳಂಗಂಡ ತಂಡಕ್ಕೆ ತರಬೇತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.