ADVERTISEMENT

ಅಥ್ಲೆಟಿಕ್ಸ್: ಟಿಂಟು ಲೂಕಾಗೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2011, 19:30 IST
Last Updated 14 ಆಗಸ್ಟ್ 2011, 19:30 IST
ಅಥ್ಲೆಟಿಕ್ಸ್: ಟಿಂಟು ಲೂಕಾಗೆ ಬೆಳ್ಳಿ
ಅಥ್ಲೆಟಿಕ್ಸ್: ಟಿಂಟು ಲೂಕಾಗೆ ಬೆಳ್ಳಿ   

ನವದೆಹಲಿ (ಪಿಟಿಐ): ಭಾರತದ ಮಧ್ಯಮ ದೂರದ ಓಟಗಾರ್ತಿ ಟಿಂಟು ಲೂಕಾ ಬೆಲ್ಜಿಯಂನಲ್ಲಿ ನಡೆಯುತ್ತಿರುವ ಫ್ಲೆಂಡರ್ಸ್‌ ಕಪ್ ಅಥ್ಲೆಟಿಕ್ ಕೂಟದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು. ಆದರೆ ಲಂಡನ್ ಒಲಿಂಪಿಕ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಭಾನುವಾರ ನಡೆದ 800 ಮೀ. ಓಟದ ಸ್ಪರ್ಧೆಯಲ್ಲಿ ಕೇರಳದ ಈ ಆಟಗಾರ್ತಿ 2:01.75ಸೆಕೆಂಡ್‌ಗಳಲ್ಲಿ ಗುರಿ ಮಟ್ಟಿ ಬೆಳ್ಳಿಗೆ ತೃಪ್ತಿ ಪಟ್ಟರು. ಒಲಿಂಪಿಕ್‌ಗೆ ಅರ್ಹತೆ ಪಡೆಯಬೇಕಾದರೆ 2:01.30ಸೆ. ನಲ್ಲಿ ಗುರಿ ಮುಟ್ಟಬೇಕಿತ್ತು. ಆದರೆ ಕೊಂಚದರಲ್ಲಿಯೇ ಅಮೂಲ್ಯ ಅವಕಾಶವನ್ನು ಅವರು ತಪ್ಪಿಸಿಕೊಂಡರು.ಇದೇ ಸ್ಪರ್ಧೆಯಲ್ಲಿ ಅಮೆರಿಕಾದ ಲತಾವೆಯಾ ಥಾಮಸ್ `ಚಿನ್ನ~ದ ಆಟಗಾರ್ತಿ ಎನಿಸಿದರು. ಅವರು 2:01.57ಸೆ. ನಲ್ಲಿ ಗುರಿ ಮುಟ್ಟಿ ಟಿಂಟು ಲೂಕಾ ಅವರನ್ನು ಹಿಂದಿಕ್ಕಿದರು.

ಇದೇ ದೂರವನ್ನು ಕಡಿಮೆ ಅವಧಿಯಲ್ಲಿ ಕ್ರಮಿಸಿ ಮೂರು ಬಾರಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಭಾರತದ ಆಟಗಾರ್ತಿ ಭಾನುವಾರ ಪ್ರಭಾವಿ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆದರೆ ಆಗಸ್ಟ್ 27ರಿಂದ ಸೆಪ್ಟಂಬರ್ 4ರ ವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಲೂಕಾ ಈಗಾಗಲೇ ಅರ್ಹತೆ ಪಡೆದುಕೊಂಡಿದ್ದಾರೆ.

ಗಮಾಂಡ ರಾಮ್‌ಗೆ ಬೆಳ್ಳಿ: ಪುರುಷರ ವಿಭಾಗದ 800ಮೀ. ಓಟದ ಸ್ಪರ್ಧೆಯಲ್ಲಿ ಭಾರತದ ಗಮಾಂಡ ರಾಮ್ ಬೆಳ್ಳಿ ಪದಕ ಜಯಿಸಿದರು. ಅವರು 1:47.50ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಈ ಮೊದಲು 1:48.84ಸೆ. ಕ್ರಮಿಸಿದ್ದ ಗುರಿಯೇ ಅವರ ಶ್ರೇಷ್ಠ ದಾಖಲೆಯಾಗಿತ್ತು.

ಈಗ ಅವರ ಮೊದಲಿನ ದಾಖಲೆಯನ್ನು ಉತ್ತಮಪಡಿಸಿಕೊಂಡರು.ಪುರುಷರ ವಿಭಾಗದಲ್ಲಿ ಒಲಿಂಪಿಕ್‌ಗೆ ಅರ್ಹತೆ ಪಡೆಯಬೇಕಾದರೆ 800 ಮೀ. ದೂರವನ್ನು 1:46.30ಸೆ. ಗಳಲ್ಲಿ ಗುರಿ ಮಟ್ಟಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.