ADVERTISEMENT

ಅಥ್ಲೆಟಿಕ್ ಫೆಡರೇಷನ್‌ಗೆ ನೋಟಿಸ್

ಕ್ರಮಕ್ಕೆ ಮುಂದಾದ ಕ್ರೀಡಾ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ನವದೆಹಲಿ (ಐಎಎನ್‌ಎಸ್): ಆರ್ಚರಿ ಮತ್ತು ಬಾಕ್ಸಿಂಗ್ ಫೆಡರೇಷನ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಕ್ರೀಡಾ ಸಚಿವಾಲಯ ಇದೀಗ ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್‌ಐ) ಮೇಲೂ ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ.

ಏಪ್ರಿಲ್ ತಿಂಗಳಲ್ಲಿ ನಡೆದ ಫೆಡರೇಷನ್‌ನ `ಚುನಾವಣಾ ಪ್ರಕ್ರಿಯೆ'ಯ ಪೂರ್ಣ ವಿವರಗಳನ್ನು ನೀಡುವಂತೆ ಕೋರಿ ಕ್ರೀಡಾ ಸಚಿವಾಲಯ ಎಎಫ್‌ಐಗೆ ನೋಟಿಸ್ ಜಾರಿಗೊಳಿಸಿದೆ. ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಎಎಫ್‌ಐನಿಂದ ಕೆಲವೊಂದು ಸ್ಪಷ್ಟೀಕರಣಗಳನ್ನು ಕೋರಿದೆ ಎಂದು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ದೇವ್ ಹೇಳಿದ್ದಾರೆ.

`ಯಾವುದೇ ಸೂಕ್ತ ಕಾರಣವಿಲ್ಲದೆ ನಾವು ಕ್ರೀಡಾ ಫೆಡರೇಷನ್‌ಗಳ ಮಾನ್ಯತೆಯನ್ನು ರದ್ದು ಮಾಡುವುದಿಲ್ಲ. ಎಎಫ್‌ಐಗೆ ನಾವು ಷೋಕಾಸ್ ನೋಟಿಸ್ ಕಳುಹಿಸಿದ್ದೇವೆ. ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವೊಂದು ವಿಷಯಗಳ ಬಗ್ಗೆ ವಿವರಗಳನ್ನು ನೀಡುವಂತೆ ಸೂಚಿಸಿದ್ದೇವೆ' ಎಂದು ಅವರು ತಿಳಿಸಿದರು.

ಸರ್ಕಾರವು ದೇಶದ ಎಲ್ಲ ಕ್ರೀಡಾ ಫೆಡರೇಷನ್‌ಗಳ ಕಾರ್ಯವೈಖರಿಯ ಮರುಪರಿಶೀಲನೆ ನಡೆಸಲು ಮುಂದಾಗಿದೆ ಎಂದು ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ನುಡಿದಿದ್ದಾರೆ. `ನಾವು ಎಎಫ್‌ಐನ ಮಾನ್ಯತೆ ರದ್ದುಗೊಳಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆಗಿಂದಾಗ್ಗೆ ಎಲ್ಲ ಕ್ರೀಡಾ ಫೆಡರೇಷನ್‌ಗಳ ಕಾರ್ಯವೈಖರಿಯ ಪರಿಶೀಲನೆ ನಡೆಸುವೆವು' ಎಂದಿದ್ದಾರೆ.

ಉತ್ತರ ನೀಡುವೆವು: ಚುನಾವಣೆಯ ಸಂದರ್ಭ ನಾವು ಸರ್ಕಾರದ ಕ್ರೀಡಾ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ಎಎಫ್‌ಐ ಅಧ್ಯಕ್ಷ ಅದಿಲ್ ಸುಮರಿವಾಲಾ ಹಾಗೂ ಕಾರ್ಯದರ್ಶಿ ಸಿ.ಕೆ. ವಲ್ಸನ್ ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲ ಕ್ರೀಡಾ ಸಚಿವಾಲಯ ಮುಂದಿಟ್ಟಿರುವ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವುದಾಗಿ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.