ಮುಂಬೈ (ಪಿಟಿಐ): ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಕುಸಿತದ ಕಾರಣ ಅಪಾಯಕ್ಕೆ ಸಿಲುಕಿದ್ದ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದು ಜಾನಿ ಬೈಸ್ಟೋವ್. ಅವರ ಸಕಾಲಿಕ ಶತಕದ ಕಾರಣ ಪ್ರವಾಸಿ ತಂಡದವರು ಇಲ್ಲಿ ನಡೆಯುತ್ತಿರುವ ಅಭ್ಯಾಸ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ `ಎ~ ತಂಡದ ಎದುರು ಚೇತರಿಕೆ ಕಂಡಿದ್ದಾರೆ.
ನವಿ ಮುಂಬೈನ ಡಾ.ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಈ ಪಂದ್ಯದಲ್ಲಿ ಮೊದಲ ದಿನದ ಆಟದ ಅಂತ್ಯಕ್ಕೆ ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 86 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಈ ತಂಡದವರು ಕೇವಲ 66 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿದ್ದರು. ಕ್ಷೇಮಲ್ ವೇಂಗಾಂಕರ್, ಜಾವೇದ್ ಖಾನ್ ಪ್ರಭಾವಿ ಬೌಲಿಂಗ್ ದಾಳಿ ಇದಕ್ಕೆ ಕಾರಣ.
ಭಾರತ ವಿರುದ್ಧದ ಮುಂಬರುವ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಪದಾರ್ಪಣೆ ಮಾಡುವ ವಿಶ್ವಾಸದಲ್ಲಿರುವ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜೋ ರೂಟ್ ಹಾಗೂ ನಿಕ್ ಕಾಂಪ್ಟನ್ ಈ ಪಂದ್ಯದಲ್ಲಿ ವಿಫಲರಾದರು. ಇಯಾನ್ ಬೆಲ್ ಹಾಗೂ ಜೊನಾಥನ್ ಟ್ರಾಟ್ ಕೂಡ ಎಡವಿದರು.
ಆದರೆ ಐದನೇ ವಿಕೆಟ್‌ಗೆ ಜೊತೆಯಾದ ಎಯೋನ್ ಮಾರ್ಗನ್ ಹಾಗೂ ಬೈಸ್ಟೋವ್ 156 ರನ್ ಸೇರಿಸಿದರು. 177 ಎಸೆತಗಳನ್ನು ಎದುರಿಸಿದ ವಿಕೆಟ್ ಕೀಪರ್ ಬೈಸ್ಟೋವ್ (118) ಅವರು 14 ಬೌಂಡರಿ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಮಾರ್ಗನ್ 76 ರನ್ ಗಳಿಸಿದರು.
ಬಳಿಕ ಬೈಸ್ಟೋವ್ ಆರನೇ ವಿಕೆಟ್‌ಗೆ ಸಮಿತ್ ಪಟೇಲ್ ಜೊತೆಗೂಡಿ 107 ರನ್ ಸೇರಿಸಿದರು. ಸಮಿತ್ 59 ರನ್‌ಗಳೊಂದಿಗೆ ಅಜೇಯರಾಗುಳಿದಿದ್ದಾರೆ. ಅವರು ಭಾರತ `ಎ~ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶತಕ ಗಳಿಸಿದ್ದರು. ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ಮುಂಬೈ `ಎ~ ತಂಡದ ಬೌಲರ್‌ಗಳು ಕೊನೆಯಲ್ಲಿ ಮಂಕಾದರು.
ಈ ಪಂದ್ಯದಲ್ಲಿ ಪ್ರವಾಸಿ ತಂಡದ ಪ್ರಮುಖ ಆಟಗಾರರು ಕಣಕ್ಕಿಳಿಯಲಿಲ್ಲ. ನಾಯಕ ಅಲಸ್ಟೇರ್ ಕುಕ್, ಕೇವಿನ್ ಪೀಟರ್ಸನ್, ವೇಗಿ ಸ್ಟೀವನ್ ಫಿನ್, ಸ್ಪಿನ್ನರ್ ಗ್ರೇಮ್ ಸ್ವಾನ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
`ನಾಲ್ಕನೇ ವೇಗಿಯ ಕೊರತೆ ನಮಗೆ ಎದುರಾಯಿತು. ನಾಲ್ಕು ಬೌಲರ್‌ಗಳೊಂದಿಗೆ ಕಣಕ್ಕಿಳಿಯಬೇಕು ಎಂದು ಯೋಜನೆ ರೂಪಿಸಿದ್ದೆವು.
ಆದರೆ ವೇಗಿ ಬಲ್ವಿಂದರ್ ಸಿಂಗ್ ಸಂಧು ಜೂನಿಯರ್ ಅವರು ಈ ಪಂದ್ಯಕ್ಕೆ ಲಭ್ಯರಾಗಲಿಲ್ಲ. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ~ ಎಂದು ಮುಂಬೈ `ಎ~ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.