ADVERTISEMENT

ಆಗಸದಿಂದ ಪಾತಾಳಕ್ಕೆ ಬಿದ್ದ ಭಾರತ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2011, 19:30 IST
Last Updated 22 ಆಗಸ್ಟ್ 2011, 19:30 IST
ಆಗಸದಿಂದ ಪಾತಾಳಕ್ಕೆ ಬಿದ್ದ ಭಾರತ
ಆಗಸದಿಂದ ಪಾತಾಳಕ್ಕೆ ಬಿದ್ದ ಭಾರತ   

ಲಂಡನ್: ಭಾರತಕ್ಕೆ ಇಂತಹ ನಿರಾಸೆ ಎದುರಾಗಬಹುದು ಎಂದು ಯಾರೂ ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲಿ. ಒಂದು ರೀತಿಯಲ್ಲಿ ಇದು ಹೀನಾಯ ಸೋಲು. ಈ ಕಹಿಯನ್ನು ಮಹೇಂದ್ರ ಸಿಂಗ್ ದೋನಿ ಬಳಗ ಸುಲಭದಲ್ಲಿ ಮರೆಯಲು ಸಾಧ್ಯವಿಲ್ಲ.

ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಇನಿಂಗ್ಸ್ ಹಾಗೂ ಎಂಟು ರನ್‌ಗಳಿಂದ ಮುಗ್ಗರಿಸಿದ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ `ಕ್ಲೀನ್‌ಸ್ವೀಪ್~ ಮುಖಭಂಗ ಅನುಭವಿಸಿತು. ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತಕ್ಕೆ ಎದುರಾದ ಅತಿದೊಡ್ಡ ಸೋಲು ಇದು. ಯಶಸ್ವಿ ನಾಯಕ ಮಹೇಂದ್ರ ಸಿಂಗ್ ದೋನಿ ಮೊದಲ ಬಾರಿಗೆ ಇಂತಹ ಮುಖಭಂಗ ಎದುರಿಸಿದ್ದಾರೆ.

ಮತ್ತೊಂದೆಡೆ ಬ್ಯಾಟಿಂಗ್, ಬೌಲಿಂಗ್ ಒಳಗೊಂಡಂತೆ ಆಟದ ಎಲ್ಲ ವಿಭಾಗಗಳಲ್ಲಿ ಪೂರ್ಣ ಪ್ರಭುತ್ವ ಮೆರೆದ ಇಂಗ್ಲೆಂಡ್ 4-0 ಅಂತರದ ಗೆಲುವಿನೊಂದಿಗೆ ಬೀಗಿತು. ಸರಣಿಗೆ ಮುನ್ನ ಐಸಿಸಿ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಲ್ಲಿದ್ದ ಭಾರತ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಓವಲ್ ಕ್ರೀಡಾಂಗಣದಲ್ಲಿ ಅಂತಿಮ ದಿನವಾದ ಸೋಮವಾರ ಪ್ರಭಾವಿ ಬೌಲಿಂಗ್ ಮೂಲಕ ಗ್ರೇಮ್ ಸ್ವಾನ್ (106ಕ್ಕೆ 6) ಇಂಗ್ಲೆಂಡ್‌ನ ಹೀರೋ ಆಗಿ ಮೆರೆದರು. ಸಚಿನ್ ತೆಂಡೂಲ್ಕರ್ (91) ಮತ್ತು ಅಮಿತ್ ಮಿಶ್ರಾ (84, 141 ಎಸೆತ, 10 ಬೌಂ) ನಡೆಸಿದ ಹೋರಾಟದ ಹೊರತಾಗಿಯೂ ಭಾರತ ಎರಡನೇ ಇನಿಂಗ್ಸ್‌ನಲ್ಲಿ 283 ರನ್‌ಗಳಿಗೆ ಆಲೌಟಾಯಿತು. ಕಡಿಮೆಪಕ್ಷ ಇನಿಂಗ್ಸ್ ಸೋಲಿನಿಂದ ಪಾರಾಗಲೂ ಪ್ರವಾಸಿ ತಂಡಕ್ಕೆ ಸಾಧ್ಯವಾಗಲಿಲ್ಲ.

ಸಚಿನ್ ಐತಿಹಾಸಿಕ ಶತಕದ ಹೊಸ್ತಿಲಲ್ಲಿ ಮುಗ್ಗರಿಸಿದರು. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ನೇ ಶತಕ ಗಳಿಸಿದ್ದರೆ, ಭಾರತದ ಕ್ರಿಕೆಟ್ ಪ್ರಿಯರು ಅಲ್ಪ ಸಂತಸಪಡುತ್ತಿದ್ದರು. ಆದರೆ ಇಂಗ್ಲೆಂಡ್ ಅದಕ್ಕೂ ಅವಕಾಶ ನೀಡಲಿಲ್ಲ.

ಸಚಿನ್, ಮಿಶ್ರಾ ಹೋರಾಟ: ಸಚಿನ್ ಮತ್ತು `ನೈಟ್ ವಾಚ್‌ಮನ್~ ಅಮಿತ್ ಮಿಶ್ರಾ ದಿನದ ಮೊದಲ ಅವಧಿಯಲ್ಲಿ ಇಂಗ್ಲೆಂಡ್‌ಗೆ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಭೋಜನ ವಿರಾಮದ ಬಳಿಕ 40 ನಿಮಿಷಗಳವರೆಗೆ ಇಂಗ್ಲೆಂಡ್‌ಗೆ ಯಶಸ್ಸು ಲಭಿಸಿರಲಿಲ್ಲ.

ಮೂರು ವಿಕೆಟ್‌ಗೆ 129 ರನ್‌ಗಳಿಂದ ಭಾರತ ದಿನದಾಟ ಆರಂಭಿಸಿತ್ತು. ಸಚಿನ್ ಮತ್ತು ಮಿಶ್ರಾ ನಾಲ್ಕನೇ ವಿಕೆಟ್‌ಗೆ 144 ರನ್‌ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಪಂದ್ಯ ಡ್ರಾ ಆಗಬಹುದು ಎಂದು ಹೆಚ್ಚಿನವರು ಲೆಕ್ಕಾಚಾರ ಹಾಕಿದ್ದರು. ಆದರೆ ಮಿಶ್ರಾ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಗ್ರೇಮ್ ಸ್ವಾನ್ ಇಂಗ್ಲೆಂಡ್‌ಗೆ `ಬ್ರೇಕ್~ ನೀಡಿದರು.

ಸಚಿನ್‌ಗೆ ಉತ್ತಮ ಸಾಥ್ ನೀಡಿದ ಮಿಶ್ರಾ ಔಟಾಗಾದ ತಂಡದ ಮೊತ್ತ 262. ಆ ಬಳಿಕ ಭಾರತದ ಆಟಗಾರರ `ಪೆವಿಲಿಯನ್ ಪೆರೇಡ್~ಗೆ ಓವಲ್ ಕ್ರೀಡಾಂಗಣ ಸಾಕ್ಷಿಯಾಯಿತು. ಕೋಟ್ಯಂತರ ಅಭಿಮಾನಿಗಳನ್ನು ನಿರಾಸೆಯ ಕಡಲಲ್ಲಿ ಮುಳುಗಿಸಿದ ಸಚಿನ್ ತಂಡದ ಅದೇ ಮೊತ್ತಕ್ಕೆ ಮರಳಿದರು. ಟಿಮ್ ಬ್ರೆಸ್ನನ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ಅಂಪೈರ್ ತೀರ್ಪು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.

172 ಎಸೆತಗಳನ್ನು ಎದುರಿಸಿದ ಸಚಿನ್ 11 ಬೌಂಡರಿ ಗಳಿಸಿದರು. ಆ ಬಳಿಕ ಬ್ರಾಡ್ (44ಕ್ಕೆ 2) ಮತ್ತು ಸ್ವಾನ್ ಭಾರತದ ಯಾವುದೇ ಬ್ಯಾಟ್ಸ್‌ಮನ್‌ನ್ನು ಕ್ರೀಸ್ ಬಳಿಕ ನೆಲೆನಿಲ್ಲಲು ಅವಕಾಶ ನೀಡಲಿಲ್ಲ. ರೈನಾ ಅಂಪೈರ್ ನೀಡಿದ ಕೆಟ್ಟ ತೀರ್ಪಿಗೆ ಔಟಾದರು. ಚಹಾ ವಿರಾಮಕ್ಕೆ ಮುನ್ನವೇ ಇಂಗ್ಲೆಂಡ್ ಸಂಭ್ರಮಿಸಿತು.

ಸ್ಕೋರ್ ವಿವರ
ಇಂಗ್ಲೆಂಡ್: ಮೊದಲ ಇನಿಂಗ್ಸ್ 153 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 591 ಡಿಕ್ಲೇರ್ಡ್‌
ಭಾರತ: ಮೊದಲ ಇನಿಂಗ್ಸ್
94 ಓವರ್‌ಗಳಲ್ಲಿ 300
ಎರಡನೇ ಇನಿಂಗ್ಸ್ 91 ಓವರ್‌ಗಳಲ್ಲಿ 283

ವೀರೇಂದ್ರ ಸೆಹ್ವಾಗ್ ಬಿ ಗ್ರೇಮ್ ಸ್ವಾನ್  33
ರಾಹುಲ್ ದ್ರಾವಿಡ್ ಸಿ ಕುಕ್ ಬಿ ಗ್ರೇಮ್ ಸ್ವಾನ್  13
ವಿವಿಎಸ್ ಲಕ್ಷ್ಮಣ್ ಬಿ ಜೇಮ್ಸ    ಆ್ಯಂಡರ್ಸನ್  24
ಸಚಿನ್ ತೆಂಡೂಲ್ಕರ್ ಎಲ್‌ಬಿಡಬ್ಲ್ಯು ಬಿ ಟಿಮ್ ಬ್ರೆಸ್ನನ್  91
ಅಮಿತ್ ಮಿಶ್ರಾ ಬಿ ಗ್ರೇಮ್ ಸ್ವಾನ್  84
ಸುರೇಶ್ ರೈನಾ ಎಲ್‌ಬಿಡಬ್ಲ್ಯು ಬಿ        ಗ್ರೇಮ್ ಸ್ವಾನ್  00
ಮಹೇಂದ್ರ ಸಿಂಗ್ ದೋನಿ ಸಿ ಸ್ವಾನ್ ಬಿ ಸ್ಟುವರ್ಟ್ ಬ್ರಾಡ್  03
ಗೌತಮ್ ಗಂಭೀರ್ ಸಿ ಮಾರ್ಗನ್ ಬಿ    ಗ್ರೇಮ್ ಸ್ವಾನ್  03
ಆರ್‌ಪಿ ಸಿಂಗ್ ಸಿ ಪ್ರಯರ್ ಬಿ           ಸ್ಟುವರ್ಟ್ ಬ್ರಾಡ್  00
ಇಶಾಂತ್ ಶರ್ಮ ಔಟಾಗದೆ  07
ಎಸ್. ಶ್ರೀಶಾಂತ್ ಬಿ ಗ್ರೇಮ್ ಸ್ವಾನ್  06
ಇತರೆ: (ಬೈ-12, ಲೆಗ್‌ಬೈ-7)  19
ವಿಕೆಟ್ ಪತನ: 1-49 (ದ್ರಾವಿಡ್; 12.6), 2-64 (ಸೆಹ್ವಾಗ್; 18.1); 3-118 (ಲಕ್ಷ್ಮಣ್; 29.2), 4-262 (ಮಿಶ್ರಾ; 75.3), 5-262 (ಸಚಿನ್; 76.1), 6-266 (ರೈನಾ; 79.2), 7-269 (ದೋನಿ; 83.2), 8-269 (ಆರ್‌ಪಿ ಸಿಂಗ್; 83.5), 9-275 (ಗಂಭೀರ್; 88.3), 10-283 (ಶ್ರೀಶಾಂತ್; 90.6)
ಬೌಲಿಂಗ್: ಜೇಮ್ಸ ಆ್ಯಂಡರ್‌ಸನ್ 17-4-54-1, ಸ್ಟುವರ್ಟ್ ಬ್ರಾಡ್ 20-6-44-2, ಗ್ರೇಮ್ ಸ್ವಾನ್ 38-6-106-6, ಟಿಮ್ ಬ್ರೆಸ್ನನ್ 11-2-30-1, ರವಿ ಬೋಪಾರ 3-0-13-0, ಕೆವಿನ್ ಪೀಟರ್‌ಸನ್ 2-0-17-0

ಫಲಿತಾಂಶ: ಇಂಗ್ಲೆಂಡ್‌ಗೆ ಇನಿಂಗ್ಸ್ ಹಾಗೂ 8 ರನ್ ಜಯ; 4-0 ರಲ್ಲಿ ಸರಣಿ ಗೆಲುವು
ಪಂದ್ಯಶ್ರೇಷ್ಠ: ಇಯಾನ್ ಬೆಲ್
ಸರಣಿ ಶ್ರೇಷ್ಠ: ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್),
ರಾಹುಲ್ ದ್ರಾವಿಡ್ (ಭಾರತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT