ADVERTISEMENT

ಆಟದ ತೀವ್ರತೆ ಎದ್ದು ಕಾಣಲಿ: ದೋನಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:50 IST
Last Updated 15 ಫೆಬ್ರುವರಿ 2011, 18:50 IST

ಚೆನ್ನೈ (ಪಿಟಿಐ): ‘ಕ್ರೀಡಾಂಗಣದಲ್ಲಿ ತಂಡದ ಪ್ರತಿಯೊಬ್ಬ ಆಟಗಾರನಲ್ಲೂ ಆಟದ ತೀವ್ರತೆ ಎದ್ದು ಕಾಣಬೇಕು’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಬುಧವಾರ ನಡೆ ಯಲಿರುವ ಎರಡನೇ ಹಾಗೂ ಕೊನೆಯ ಅಭ್ಯಾಸ ಪಂದ್ಯದ ಹಿನ್ನೆಲೆಯಲ್ಲಿ ಅವರು ಮಾಧ್ಯಮ ಪ್ರತಿ ನಿಧಿಗಳ ಜೊತೆ ಮಾತನಾಡಿದರು. ‘ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದಲೇ ಈ ತುಡಿತ ಗೋಚರಿಸಬೇಕು’ ಎಂದು ಅವರು ಅಭಿಲಾಷೆ ವ್ಯಕ್ತಪಡಿಸಿದರು.

‘ಫೆ. 19ರಿಂದ ಆರಂಭವಾಗಲಿರುವ ವಿಶ್ವಕಪ್ ಟೂರ್ನಿ ತಮ್ಮ ನಾಯಕತ್ವಕ್ಕೆ ಸತ್ವಪರೀಕ್ಷೆ’ ಎಂಬ ವಾದವನ್ನು ಒಪ್ಪದ ದೋನಿ, ‘ಸವಾಲುಗಳು ಯಾವಾಗಲೂ ಇರುತ್ತವೆ. ಅದು ಕೇವಲ ವಿಶ್ವಕಪ್ ಟೂರ್ನಿ ಆಗಬೇಕೆಂದೇನೂ ಇಲ್ಲ’ ಎಂದು ಹೇಳಿದರು.

‘ಹೊಸ ಟೂರ್ನಿ ಎದುರಾದಾಗ ಸವಾಲಿನ ಸ್ವರೂಪವೂ ಭಿನ್ನವಾಗಿರುತ್ತದೆ. ವಿಶ್ವಕಪ್ ಕೂಡ ಅಂತಹದ್ದೇ ಒಂದು ಟೂರ್ನಿ. ತಂಡದ ವಿಷಯಕ್ಕೆ ಬಂದಾಗ ನಾವು ಅತ್ಯಂತ ಸಮರ್ಥವಾದ ಆಟಗಾರರನ್ನು ಹೊಂದಿದ್ದೇವೆ. ಸವಾಲಿನಲ್ಲಿ ನಿಜವಾಗಿ ಗಣನೆಗೆ ಬರುವ ಸಂಗತಿಯೇ ಅದು’ ಎಂದು ದೋನಿ ವಿವರಿಸಿದರು.

‘ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಸುವುದನ್ನು ನಾನು ಇಷ್ಟ ಪಡುವುದಿಲ್ಲ. ಎಲ್ಲ ರೀತಿಯ ಆಟಗಾರರು ತಂಡದಲ್ಲಿರುವುದು ಒಳ್ಳೆಯ ಬೆಳವಣಿಗೆ. ಕಾಗದದಲ್ಲಿ ಯಾವುದೇ ಆಟಗಾರ ಎಷ್ಟೇ ಬಲಿಷ್ಠನಾಗಿರಬಹುದು. ದಿನದ ಅಂತ್ಯಕ್ಕೆ ಗಣನೆಗೆ ಬರುವುದು ಆ ಆಟಗಾರ ಹೇಗೆ ಆಡಿದ ಎಂಬುದಷ್ಟೇ’ ಎಂದು ಅವರು ವಿಶ್ಲೇಷಿಸಿದರು.
ಆಸ್ಟ್ರೇಲಿಯಾ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮಧ್ಯಮ ಕ್ರಮಾಂಕ ಕುಸಿತ ಕಂಡ ವಿಷಯವಾಗಿ ಪ್ರತಿಕ್ರಿಯಿಸಿದ ದೋನಿ, ‘ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮವಾದ ಪಾಲುದಾರಿಕೆ ಗಳು ಮೂಡಿಬರುವುದು ಅತ್ಯಗತ್ಯ.

ಆದರೆ, ನಮ್ಮ ವಿಷಯದಲ್ಲಿ ಹಾಗಾಗುತ್ತಿಲ್ಲ. ಉತ್ತಮ ಆರಂಭ ಕಂಡರೂ ದೊಡ್ಡ ಮೊತ್ತ ಪೇರಿಸಲು ಆಗದಿರಲು ಮಧ್ಯಮ ಕ್ರಮಾಂಕದ ವೈಫಲ್ಯವೇ ಮುಖ್ಯ ಕಾರಣವಾಗಿದೆ’ ಎಂದು ಹೇಳಿದರು.

‘ಮೊದಲ ಅಭ್ಯಾಸ ಪಂದ್ಯದಲ್ಲಿ ಕೆಳ ಕ್ರಮಾಂಕದ ಆಟಗಾರರು 49 ರನ್ ಕಲೆಹಾಕಿ ತಂಡದ ನೆರವಿಗೆ ಧಾವಿಸಿದರು. ಹೀಗಿದ್ದೂ ಇನಿಂಗ್ಸ್ ಅಂತ್ಯಕ್ಕೆ ತಂಡದ ಮೊತ್ತ ಕೇವಲ 214 ರನ್‌ಗಳಾಗಿತ್ತು. ಸ್ಪಿನ್ನರ್‌ಗಳು ಚೆನ್ನಾಗಿ ಬೌಲ್ ಮಾಡಿದ್ದರಿಂದ ನಾವು ಜಯ ಗಳಿಸಲು ಸಾಧ್ಯವಾಯಿತು’ ಎಂದು ತಿಳಿಸಿದರು.

‘ವಿಶ್ವಕಪ್‌ನಲ್ಲಿ ಆಡುವ ಅಂತಿಮ ಹನ್ನೊಂದು ತಂಡ ಹೆಚ್ಚು-ಕಡಿಮೆ ಸಿದ್ಧವಾಗಿದೆ. ಒಂದೆರಡು ಸ್ಥಾನಗಳ ವಿಷಯವಾಗಿ ನಿರ್ಧಾರ ಕೈಗೊಳ್ಳಬೇಕಿದೆ.
ಆ ಸ್ಥಾನಗಳಿಗೆ ಪೈಪೋಟಿಯೂ ತೀವ್ರವಾಗಿದೆ’ ಎಂದು ದೋನಿ ಹೇಳಿದರು. ‘ತಂಡದಲ್ಲಿ ನಮಗೆ ಆಯ್ಕೆಗೆ ಹಲವು ಅವಕಾಶಗಳಿವೆ. ಪ್ರತಿ ಪಂದ್ಯದ ಸ್ಥಿತಿ, ಪಿಚ್ ವಾತಾವರಣ ನೋಡಿಕೊಂಡು ಪಂದ್ಯದಿಂದ ಪಂದ್ಯಕ್ಕೆ ಅಂತಿಮ ಹನ್ನೊಂದರ ತಂಡವನ್ನು ಆಯ್ಕೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

ತೊಡೆಯ ನೋವಿನಿಂದ ಬಳಲುತ್ತಿರುವ ಜಹೀರ್ ಖಾನ್ ಅವರಿಗೆ ಬುಧವಾರದ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ ಎಂದು ದೋನಿ ಪ್ರಕಟಿಸಿದರು.
ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇಲ್ಲಿಯ ಪಿಚ್‌ಗಳ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದ ವಿಷಯವಾಗಿ ಕೇಳಿದ ಪ್ರಶ್ನೆಗೆ, ‘ನಮ್ಮ ಸ್ಪಿನ್ ಪಿಚ್‌ಗಳಲ್ಲಿ ವಿದೇಶಿ ತಂಡಗಳು ಸಣ್ಣ-ಪುಟ್ಟ ಸಮಸ್ಯೆ ಎದುರಿಸುವುದು ಸಾಮಾನ್ಯ. ವೇಗದ ಪಿಚ್‌ಗಳಿಗೆ ಹೊಂದಿಕೊಂಡ ಅವರಿಗೆ ಈ ರೀತಿ ಅನುಭವವಾಗುವುದು ಸಹಜ’ ಎಂದು ದೋನಿ ಉತ್ತರಿಸಿದರು.

‘ತಂಡದ ಬ್ಯಾಟಿಂಗ್ ಶಕ್ತಿ ದಣಿದಿದೆ ಎಂಬ ಹೇಳಿಕೆಯನ್ನು ನಾನು ನೀಡಿಲ್ಲ’ ಎಂದು ಸ್ಪಷ್ಟಪಡಿಸಿದ ದೋನಿ, ‘ಅಭ್ಯಾಸ ಪಂದ್ಯವಾದರೂ ಮಾನಸಿಕವಾಗಿ ಶೇಕಡಾ 100ರಷ್ಟು ಸಿದ್ಧವಿರಬೇಕು ಎಂಬ ಸಂದೇಶ ನೀಡುವುದಷ್ಟೇ ನನ್ನ ಉದ್ದೇಶವಾಗಿತ್ತು. ಆದರೆ ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.