ADVERTISEMENT

ಆನಂದ್‌ಗೆ ಜಂಟಿ ಮೂರನೇ ಸ್ಥಾನ

ಚೆಸ್: ಕಾರ್ಲ್ಸನ್‌ಗೆ ಚಾಂಪಿಯನ್ ಪಟ್ಟ, ಮಿಂಚಿದ ಹರಿಕೃಷ್ಣ

​ಪ್ರಜಾವಾಣಿ ವಾರ್ತೆ
Published 28 ಜನವರಿ 2013, 19:59 IST
Last Updated 28 ಜನವರಿ 2013, 19:59 IST
ಚಾಂಪಿಯನ್ ಆದ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್
ಚಾಂಪಿಯನ್ ಆದ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್   

ವಿಕ್ ಆ್ಯನ್ ಜೀ, ಹಾಲೆಂಡ್ (ಪಿಟಿಐ): ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಸೋಮವಾರ ಇಲ್ಲಿ ಕೊನೆಗೊಂಡ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಆಘಾತ ಅನುಭವಿಸಿದ್ದಾರೆ. ಏಕೆಂದರೆ ಅವರು ಕೊನೆಯ ಸುತ್ತಿನಲ್ಲಿ ಚೀನಾದ ವಾಂಗ್ ಹವೊ ಎದುರು ಸೋಲು ಕಂಡಿದ್ದಾರೆ.

ಹಾಗಾಗಿ ಈ ಟೂರ್ನಿಯಲ್ಲಿ ಆನಂದ್‌ಗೆ ಲಭಿಸಿದ್ದು ಜಂಟಿ ಮೂರನೇ ಸ್ಥಾನ. ಇದು ಇತ್ತೀಚಿನ ದಿನಗಳಲ್ಲಿ ಆನಂದ್ ಅವರ ಕಳಪೆ ಪ್ರದರ್ಶನವಾಗಿದೆ. 22 ವರ್ಷ ವಯಸ್ಸಿನ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಚಾಂಪಿಯನ್ ಆಗಿದ್ದಾರೆ.

13ನೇ ಸುತ್ತಿನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಜಯಿಸಿದ್ದರೆ ಎರಡನೇ ಸ್ಥಾನ ಲಭಿಸುತಿತ್ತು. ಆದರೆ ಅಷ್ಟೇನು ಪ್ರಸಿದ್ಧರಲ್ಲದ ಆಟಗಾರನ ಎದುರು ಸೋಲು ಕಂಡಿದ್ದು ವಿಶ್ವನಾಥನ್ ಪಾಲಿಗೆ ಮುಳುವಾಯಿತು. ಅವರು ಈ ಟೂರ್ನಿಯಲ್ಲಿ ಒಟ್ಟು 8 ಪಾಯಿಂಟ್ ಗಳಿಸಿದರು.

ಕಾರ್ಲ್ಸನ್ ಒಟ್ಟು 10 ಪಾಯಿಂಟ್ ಗಳಿಸಿ ಟ್ರೋಫಿ ಎತ್ತಿ ಹಿಡಿದರು. ಈ ಮೂಲಕ ಚೆಸ್ ದಂತಕತೆ ರಷ್ಯಾದ ಗ್ಯಾರಿ ಕಾಸ್ಪರೋವ್ ಅವರ ದಾಖಲೆ ಸರಿಗಟ್ಟಿದರು. ಈ ಟೂರ್ನಿಯಲ್ಲಿ ಕಾಸ್ಪರೋವ್ ಒಮ್ಮೆ 13 ಪಂದ್ಯಗಳಿಂದ 10 ಪಾಯಿಂಟ್ ಗಳಿಸಿದ್ದರು.

ಆದರೆ ವಿಶ್ವ  ರ್‍ಯಾಂಕಿಂಗ್‌ನಲ್ಲಿ ಆನಂದ್ ಆರನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಇಲ್ಲಿ ಮೂರನೇ ಸ್ಥಾನ ಪಡೆದ ಕಾರಣ ಅವರ ಖಾತೆಗೆ ಮತ್ತಷ್ಟು ಪಾಯಿಂಟ್‌ಗಳು ಸೇರಲಿವೆ. ಕಾರ್ಲ್ಸನ್ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ಅರ್ಮೇನಿಯಾದ ಲೆವೋನ್ ಅರೋನಿಯ್ (8.5 ಪಾಯಿಂಟ್) ಎರಡನೇ ಸ್ಥಾನ ಪಡೆದರು. ಅವರು ಕೊನೆಯ ಸುತ್ತಿನ ಪಂದ್ಯದಲ್ಲಿ ಇಟಲಿಯ ಫ್ಯಾಬಿಯಾನೊ ಕರುವಾನಾ ಎದುರು ಡ್ರಾ ಮಾಡಿಕೊಂಡರು. ರಷ್ಯಾದ ಸರ್ಜಿ ಕರ್ಜಾಕಿನ್ ಕೂಡ ಎಂಟು ಪಾಯಿಂಟ್ ಪಡೆದು ಆನಂದ್ ಜೊತೆ ಮೂರನೇ ಸ್ಥಾನ ಹಂಚಿಕೊಂಡರು.

ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಭಾರತದ ಮತ್ತೊಬ್ಬ ಗ್ರ್ಯಾಂಡ್‌ಮಾಸ್ಟರ್ ಪಿ.ಹರಿಕೃಷ್ಣ ಒಟ್ಟು 6.5 ಪಾಯಿಂಟ್ ಗಳಿಸಿದರು. ಈ ಮೂಲಕ ಏಳನೇ ಸ್ಥಾನ ಪಡೆದರು. ವಿಶೇಷವೆಂದರೆ ಅವರು ಆನಂದ್ ಎದುರಿನ ಪಂದ್ಯವನ್ನು ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

ಈ ಮೂಲಕ ಅವರು 2700 ರೇಟಿಂಗ್ ಗಳಿಸಿದ ಭಾರತದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಸಾಧನೆಯನ್ನು ಆನಂದ್ ಹಾಗೂ ಕೆ.ಶಶಿಕಿರಣ್ ಮಾತ್ರ ಮಾಡಿದ್ದಾರೆ. ಹರಿಕೃಷ್ಣ ತಮ್ಮ ಕೊನೆಯ ಪಂದ್ಯವನ್ನು ಡ್ರಾ ಮಾಡಿಕೊಂಡರು. ಈ ಟೂರ್ನಿಯಲ್ಲಿ ಒಟ್ಟು 14 ಆಟಗಾರರು ಪಾಲ್ಗೊಂಡಿದ್ದರು.

ಆಟಗಾರರ ಸ್ಥಾನ ಇಂತಿದೆ: ಮ್ಯಾಗ್ನಸ್ ಕಾರ್ಲ್ಸನ್ (ನಾರ್ವೆ; 10 ಪಾಯಿಂಟ್)-1, ಲೆವೋನ್ ಅರೋನಿಯನ್ (ಅರ್ಮೇನಿಯಾ; 8.5)-2, ವಿಶ್ವನಾಥನ್ ಆನಂದ್ (ಭಾರತ; 8) ಹಾಗೂ ಸರ್ಜಿ ಕರ್ಜಾಕಿನ್ (ರಷ್ಯಾ; 8)-3, ಪೀಟರ್ ಲೆಕೊ (ಹಂಗೇರಿ; 7.5)-5, ಹಿಕಾರು ನಕುಮುರಾ (ಅಮೆರಿಕ; 7)-6, ಪಿ.ಹರಿಕೃಷ್ಣ (ಭಾರತ; 6.5)-7, ಅನಿಷ್ ಗಿರಿ (ಹಾಲೆಂಡ್; 6), ವಾಂಗ್ ಹವೊ (ಚೀನಾ; 6), ಲೊಯೆಕ್ ವಾನ್ ವೆಲಿ (ಹಾಲೆಂಡ್; 6)-8, ಯಿಫಾನ್ ಹೊಯು (ಚೀನಾ; 5.5)-11, ಫ್ಯಾಬಿಯೊ ಕರುವಾನಾ (ಇಟಲಿ; 5)-12. ಎರ್ವಿನ್ ಎಲ್ ಅಮಿ (ಹಾಲೆಂಡ್; 4)-13, ಇವಾನ್ ಸೊಕೊಲೊವ್ (ಹಾಲೆಂಡ್; 3)-14.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.