ADVERTISEMENT

`ಆಯ್ಕೆ ಸಮಿತಿ ನಿರ್ಧಾರ ತಡೆದ ಶ್ರೀನಿವಾಸನ್'

`ಆಯ್ಕೆ ಸಮಿತಿ ನಿರ್ಧಾರ ತಡೆದ ಶ್ರೀನಿವಾಸನ್'

ಏಜೆನ್ಸೀಸ್
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಆಯ್ಕೆಯ ವೇಳೆ ಕೆಲವು `ಆಂತರಿಕ ಶಕ್ತಿ'ಗಳು ಪ್ರಭಾವ ಬೀರುತ್ತವೆ ಎನ್ನುವ ಮೂಲಕ ವಿವಾದದ ಬಿರುಗಾಗಿ ಎಬ್ಬಿಸಿದ್ದ ಮಾಜಿ ಆಟಗಾರ ಮೊಹಿಂದರ್ ಅಮರ್‌ನಾಥ್ ಬುಧವಾರ ಮತ್ತೊಂದು `ಬಾಂಬ್' ಸಿಡಿಸಿದ್ದಾರೆ.

`ಮಹೇಂದ್ರ ಸಿಂಗ್ ದೋನಿ ಅವರನ್ನು ಬದಲಿಸಲು ರಾಷ್ಟ್ರೀಯ ಆಯ್ಕೆ ಸಮಿತಿ ನಿರ್ಧರಿಸಿದರೂ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಎನ್. ಶ್ರೀನಿವಾಸನ್ ಅದಕ್ಕೆ ಅವಕಾಶ ನೀಡಲಿಲ್ಲ' ಎಂದು ಅಮರ್‌ನಾಥ್ ಹೇಳಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಆದರೆ ಅಮರ್‌ನಾಥ್ ಮಾಡಿರುವ ಆರೋಪವನ್ನು ಬಿಸಿಸಿಐ ಸಾರಾಸಗಟಾಗಿ ತಳ್ಳಿಹಾಕಿದೆ.

`ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡ ಸತತ ನಾಲ್ಕು ಟೆಸ್ಟ್‌ಗಳಲ್ಲಿ ಸೋಲು ಅನುಭವಿದ ಬಳಿಕ ದೋನಿ ಅವರನ್ನು ಬದಲಿಸಬೇಕೆಂಬ ಚರ್ಚೆ ನಡೆದಿತ್ತು. ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಐವರು ಸದಸ್ಯರ ಆಯ್ಕೆ ಸಮಿತಿ ಒಮ್ಮತದ ನಿರ್ಧಾರ ಕೈಗೊಂಡಿತ್ತು. ಆದರೆ ಮಂಡಳಿಯ ಅಧ್ಯಕ್ಷರು ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ' ಎಂದು ಅಮರ್‌ನಾಥ್ ಬುಧವಾರ ಖಾಸಗಿ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ.

`ಒಬ್ಬ ವ್ಯಕ್ತಿ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವುದಾದರೆ, ಆಯ್ಕೆ ಸಮಿತಿಯ ಅಗತ್ಯವಾದರೂ ಏನು. ಬಿಸಿಸಿಐನ ಸಂವಿಧಾನ ಯಾರಿಗೆ ತಿಳಿದಿದೆ. ಈಗಿನ ಆಯ್ಕೆ ಸಮಿತಿಗೆ ಇದರ ಅರಿವಿದೆಯೇ. ನನಗೆ ಬಿಸಿಸಿಐನ ಸಂವಿಧಾನದ ಬಗ್ಗೆ ಅರಿವು ಇರಲಿಲ್ಲ' ಎಂದು ಅಮರ್‌ನಾಥ್ ಹೇಳಿದ್ದಾರೆ.

`ಆಯ್ಮೆ ಸಮಿತಿಯಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ ನಮ್ಮ ಕೆಲಸ ನಿರ್ವಹಿಸುತ್ತಿದ್ದವು. ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯ ಬಳಿಕ ದೋನಿ ಬದಲು ಬೇರೊಬ್ಬರನ್ನು ತಂಡದ ನಾಯಕನಾಗಿ ನೇಮಿಸಬೇಕೆಂಬುದು ನಮ್ಮೆಲ್ಲರ ಒಮ್ಮತದ ನಿರ್ಧಾರವಾಗಿತ್ತು' ಎಂಬುದನ್ನು ಬಹಿರಂಗಪಡಿಸಿದರು.

`ಟೆಸ್ಟ್ ಸರಣಿ ಬಳಿಕ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಒಳಗೊಂಡಂತೆ ನಡೆದ ಮೂರು ರಾಷ್ಟ್ರಗಳ ಏಕದಿನ ಸರಣಿಗೆ ನಾವು 17 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಿದ್ದೆವು. ಆದರೆ ನಾಯಕ ಯಾರು ಎಂಬುದನ್ನು ನಿರ್ಧರಿಸಿರಲಿಲ್ಲ. ನಾಯಕನನ್ನು ಇನ್ನೊಬ್ಬರು ಆಯ್ಕೆ ಮಾಡಿದ್ದರು' ಎಂದು 1983 ರಲ್ಲಿ ವಿಶ್ವಕಪ್ ಗೆದ್ದ ಭಾರತದ ಸದಸರಾಗಿದ್ದ ಅಮರ್‌ನಾಥ್ ಹೇಳಿದ್ದಾರೆ.

`ಭಾರತ ಕ್ರಿಕೆಟ್ ತಂಡದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯ್ಕೆ ಸಮಿತಿ ತನ್ನ ಕೆಲಸ ನಿರ್ವಹಿಸುತ್ತದೆ. ಆದರೆ ಅಂತಹ ಸಮಿತಿಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಏಕೆ ಅವಕಾಶ ನೀಡುವುದಿಲ್ಲ' ಎಂದು ಪ್ರಶ್ನಿಸಿದ್ದಾರೆ.

ಧೈರ್ಯದ ಹೇಳಿಕೆ (ಐಎಎನ್‌ಎಸ್ ವರದಿ): ಅಮರ್‌ನಾಥ್ ಇಟ್ಟಿರುವ ಹೆಜ್ಜೆಯನ್ನು `ಧೈರ್ಯದ ನಿರ್ಧಾರ' ಎಂದು ಮಾಜಿ ಆಟಗಾರ ಸುನಿಲ್ ಗಾವಸ್ಕರ್ ಹೇಳಿದ್ದಾರೆ. `ಮುಂದೆ ಉಂಟಾಗುವ ಪರಿಣಾಮಗಳನ್ನು ಎದುರಿಸಲು ಅವರು ಸಜ್ಜಾಗಿದ್ದಾರೆ. ಅವರ ಧೈರ್ಯವನ್ನು ಮೆಚ್ಚಬೇಕು. ಮಾತ್ರವಲ್ಲ ಇದರಿಂದ ಪಾಠ ಕಲಿಯಬೇಕಿದೆ' ಎಂದಿದ್ದಾರೆ.

`ಆಯ್ಕೆಗಾರರು ಸ್ವತಂತ್ರರು'
ನವದೆಹಲಿ (ಪಿಟಿಐ): ಅಮರ್‌ನಾಥ್ ಮಾಡಿರುವ ಆರೋಪಗಳನ್ನು ತಳ್ಳಿಹಾಕಿರುವ ಬಿಸಿಸಿಐ, `ಆಯ್ಕೆ ಸಮಿತಿಯ ಸದಸ್ಯರು ಯಾವುದೇ ನಿರ್ಧಾರ ಕೈಗೊಳ್ಳಲು ಸ್ವತಂತ್ರರಾಗಿರುವರು' ಎಂದು ತಿಳಿಸಿದೆ.

`ಅವರು (ಅಮರ್‌ನಾಥ್) ಏನು ಹೇಳಿದ್ದಾರೆ ಎಂಬುದನ್ನು ವಿವರಿಸಲು ಬಯಸುವುದಿಲ್ಲ. ಅಂತಹ ಘಟನೆ ನಡೆದಿತ್ತು ಎಂದು ನಾನು ಭಾವಿಸುವುದಿಲ್ಲ. ಆ ರೀತಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ' ಎಂದು ಬಿಸಿಸಿಐ ಉಪಾಧ್ಯಕ್ಷ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಖ್ಯಸ್ಥರೂ ಆಗಿರುವ ರಾಜೀವ್ ಶುಕ್ಲಾ ಹೇಳಿದ್ದಾರೆ.

`ಆಯ್ಕೆ ಸಮಿತಿ ಸಭೆಯಲ್ಲಿ ಸದಸ್ಯರಿಗೆ ಏನು ಬೇಕಾದರೂ ಹೇಳಬಹುದು. ಆದರೆ ಅಲ್ಲಿ ಚರ್ಚೆಗೆ ಬಂದ ವಿಷಯಗಳನ್ನು ಬಹಿರಂಗಪಡಿಸುವುದು ಸರಿಯಲ್ಲ. ಏಕೆಂದರೆ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಅದು ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ' ಎಂದು ಪ್ರತಿಕ್ರಿಯಿಸಿದ್ದಾರೆ. `ಆಯ್ಕೆಗಾರರು ಸ್ವತಂತ್ರರಾಗಿರುವರು. ಅವರು ಯಾರದೇ ಒತ್ತಡಕ್ಕೆ ಒಳಗಾಗಿರುವುದಿಲ್ಲ' ಎಂದು ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT