ADVERTISEMENT

ಆಸೀಸ್‌ಗೆ ಸರಣಿ ಗೆಲುವು

ಕ್ರಿಕೆಟ್‌: ಮಿಂಚಿದ ಮಿಷೆಲ್‌ ಸ್ಟಾರ್ಕ್‌, ಫಿಂಚ್‌

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಸೆಂಚೂರಿಯನ್‌ (ಎಎಫ್‌ಪಿ): ಮಿಷೆಲ್‌ ಸ್ಟಾರ್ಕ್‌ ಒಳಗೊಂಡಂತೆ ಬೌಲರ್‌ಗಳ ಸಮರ್ಥ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-–20 ಪಂದ್ಯದಲ್ಲಿ ಆರು ವಿಕೆಟ್‌ ಗಳ ಜಯ ಸಾಧಿಸಿತು. ಈ ಮೂಲಕ ಸರಣಿಯನ್ನು 2-–0 ರಲ್ಲಿ ತನ್ನದಾಗಿಸಿ ಕೊಂಡಿದೆ.

ಸೂಪರ್ ಸ್ಪೋರ್ಟ್ಸ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 128 ರನ್‌ ಪೇರಿಸಿದರೆ, ಜಾರ್ಜ್‌ ಬೇಲಿ ಬಳಗ 15 ಓವರ್‌ ಗಳಲ್ಲಿ 4 ವಿಕೆಟ್‌ಗೆ 129 ರನ್‌ ಗಳಿಸಿ ಜಯ ಸಾಧಿಸಿತು.

ಸರಣಿಯ ಮೊದಲ ಪಂದ್ಯ ಮಳೆ ಯಿಂದ ರದ್ದುಗೊಂಡಿದ್ದರೆ, ಡರ್ಬನ್‌ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆಸೀಸ್‌ ಐದು ವಿಕೆಟ್‌ಗಳ ಗೆಲುವು ಪಡೆದಿತ್ತು. 

ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದ ಆಸೀಸ್‌ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿತು. ಕ್ವಿಂಟನ್‌ ಡಿ ಕಾಕ್‌ (41, 40 ಎಸೆತ) ಅವರನ್ನು ಹೊರತುಪಡಿಸಿ ದ. ಆಫ್ರಿಕಾ ತಂಡದ ಎಲ್ಲ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಮಿಷೆಲ್‌ ಸ್ಟಾರ್ಕ್‌ ನಾಲ್ಕು ಓವರ್‌ಗಳಲ್ಲಿ ಕೇವಲ 16 ರನ್‌ ನೀಡಿ ಎರಡು ವಿಕೆಟ್‌ ಪಡೆದರು. ಗ್ಲೆನ್‌ ಮ್ಯಾಕ್ಸ್‌ವೆಲ್‌ (19ಕ್ಕೆ 2) ಮತ್ತು ಬ್ರಾಡ್ ಹಾಗ್‌ (21ಕ್ಕೆ 2) ಅವರಿಗೆ ಉತ್ತಮ ಬೆಂಬಲ ನೀಡಿದರು.

ಸಾಧಾರಣ ಗುರಿ ಬೆನ್ನಟ್ಟಿದ ಆಸೀಸ್‌ ಯಾವುದೇ ಒತ್ತಡವಿಲ್ಲದೆ ಗೆಲುವಿನ ಗುರಿ ತಲುಪಿತು. ಆ್ಯರನ್‌ ಫಿಂಚ್‌ (39, 27 ಎಸೆತ, 6 ಬೌಂ) ಮತ್ತು ಶೇನ್‌ ವಾಟ್ಸನ್‌ (35, 28 ಎಸೆತ) ಉತ್ತಮ ಆಟ ತೋರಿದರು. 

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 128 (ಕ್ವಿಂಟನ್‌ ಡಿ ಕಾಕ್‌ 41, ಜೆ.ಪಿ. ಡುಮಿನಿ 13, ಅಲ್ಬಿ ಮಾರ್ಕೆಲ್‌ 18, ವೇಯ್ನ್‌ ಪಾರ್ನೆಲ್‌ 17, ಮಿಷೆಲ್‌ ಸ್ಟಾರ್ಕ್‌ 16ಕ್ಕೆ 2, ಗ್ಲೆನ್‌ ಮ್ಯಾಕ್ಸ್‌ವೆಲ್‌ 19ಕ್ಕೆ 2, ಬ್ರಾಡ್‌ ಹಾಗ್‌ 31ಕ್ಕೆ 2) ಆಸ್ಟ್ರೇಲಿಯಾ: 15 ಓವರ್‌ಗಳಲ್ಲಿ 4 ವಿಕೆಟ್‌ಗೆ 129 (ಆ್ಯರನ್‌ ಫಿಂಚ್‌ 39, ಶೇನ್‌ ವಾಟ್ಸನ್‌ 35, ಜಾರ್ಜ್ ಬೇಲಿ ಔಟಾಗದೆ 12, ಬ್ರಾಡ್‌ ಹಾಗ್‌ ಔಟಾಗದೆ 11, ಇಮ್ರಾನ್ ತಾಹಿರ್‌ 21ಕ್ಕೆ 2)

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 6 ವಿಕೆಟ್‌ ಗೆಲುವು; ಮೂರು ಪಂದ್ಯಗಳ ಸರಣಿಯಲ್ಲಿ 2-0 ಜಯ.
ಪಂದ್ಯಶ್ರೇಷ್ಠ: ಮಿಷೆಲ್‌ ಸ್ಟಾರ್ಕ್‌,
ಸರಣಿ ಶ್ರೇಷ್ಠ: ಕ್ವಿಂಟನ್‌ ಡಿ ಕಾಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.