ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್: ನಡಾಲ್ ಶುಭಾರಂಭ, ಸಾನಿಯಾ ಮಿರ್ಜಾಗೆ ಸೋಲು

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

 ಮೆಲ್ಬರ್ನ್ (ಪಿಟಿಐ): ಆತಿಥೇಯ ಆಸ್ಟ್ರೇಲಿಯಾದ ಬೆರ್ನಾರ್ಡ್ ಟಾಮಿಕ್ ಇಲ್ಲಿ ಆರಂಭವಾದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದರು.

ಮೆಲ್ಬರ್ನ್ ಪಾರ್ಕ್‌ನಲ್ಲಿ ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಟಾಮಿಕ್ 4-6, 6-7, 6-4, 6-2, 7-5ರಲ್ಲಿ ಸ್ಪೇನ್‌ನ ಫೆರ್ನಾಂಡೊ ವೆರ್ಡೊಸ್ಕೊ ಅವರನ್ನು ಸೋಲಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು.
19 ವರ್ಷದ ಯುವ ಆಟಗಾರ ಟಾಮಿಕ್ 4 ಗಂಟೆ 11 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಎದುರಾಳಿ ಆಟಗಾರನಿಂದ ಭಾರಿ ಪ್ರತಿರೋಧ ಎದುರಿಸಿದರು. 22ನೇ ಶ್ರೇಯಾಂಕ ಹೊಂದಿರುವ ಸ್ಪೇನ್‌ನ ಆಟಗಾರನನ್ನು ಶ್ರೇಯಾಂಕ ರಹಿತ ಟಾಮಿಕ್ ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆದರು.

ಕಳೆದ ವರ್ಷದ ವಿಂಬಲ್ಡನ್ ಟೂರ್ನಿಯಲ್ಲಿ ಟಾಮಿಕ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದರು. ಅಗ್ರ ಶ್ರೇಯಾಂಕದ ಆಟಗಾರ ನೊವಾಕ್ ಜೊಕೊವಿಚ್ ಎದುರು ಅಲ್ಲಿ ಸೋಲು ಕಂಡಿದ್ದರು.

ಸಾನಿಯಾ ಮಿರ್ಜಾಗೆ ಸೋಲು: ಭಾರತದ ಸಾನಿಯಾ ಮಿರ್ಜಾ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡರು. ಈ ಮೂಲಕ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯ ಕಂಡಿತು. ಬಲ್ಗೇರಿಯಾದ ಸ್ವೆಟಾನಾ ಪಿರೊಂಕೋವಾ 6-4, 6-2ನೇರ ಸೆಟ್‌ಗಳಿಂದ ಸಾನಿಯಾ ಎದುರು ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

ನಾ ಲೀ ಶುಭಾರಂಭ: ಕಳೆದ ವರ್ಷದ ಫ್ರೆಂಚ್ ಓಪನ್ ಟೂರ್ನಿಯ ಚಾಂಪಿಯನ್ ಚೀನಾದ ನಾ ಲೀ ಸಿಂಗಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿದರು. ಮೊದಲ ಸುತ್ತಿನ ಪಂದ್ಯದಲ್ಲಿ ಈ ಆಟಗಾರ್ತಿ 6-3, 6-1ರ ನೇರ ಸೆಟ್‌ಗಳಿಂದ ಕಜಕಸ್ತಾನದ ಸೆನಿಯಾ ಪರ್ವಿಕ್ ಎದುರು ಗೆಲುವು ಪಡೆದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ 7-5, 6-1ರಲ್ಲಿ ಪೋರ್ಚುಗಲ್‌ನ ಮಾರಿಯೊ ಜಾವೊ ಮೇಲೂ, ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ 6-1, 6-0ರಲ್ಲಿ ಇಂಗ್ಲೆಂಡ್‌ನ ಹೀತರ್ ವ್ಯಾಟ್ಸನ್ ವಿರುದ್ಧವೂ, ಸ್ಲೊವಾಕಿಯಾದ ಡೇನಿಯಲ್ ಹಂಟುಚೋವಾ 4-6, 6-2, 6-2ರಲ್ಲಿ ಅಮೆರಿಕದ ವಾವ್ರಿರಾ ವಿರುದ್ಧವೂ, ಚೀನಾದ ಶುಯ್ ಪೆಂಗ್ 6-3, 6-4ರಲ್ಲಿ ಫ್ರಾನ್ಸ್‌ನ ಅರ್ವಾನ್ ರೆಜಾಯ್ ಎದುರು ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

ಎರಡನೇ ಸುತ್ತಿಗೆ ನಡಾಲ್, ಫೆಡರರ್: ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

ಟೂರ್ನಿಯ ಆರಂಭದ ದಿನ ನಡಾಲ್ 6-4, 6-1, 6-1ರಲ್ಲಿ ಅಮೆರಿಕದ ಅಲೆಕ್ಸ್ ಕುಜ್ನೆತ್ಸೋವ್ ಮೇಲೂ, ಫೆಡರರ್ 7-5, 6-2, 6-2ರಲ್ಲಿ ರಷ್ಯಾದ ಅಲೆಕ್ಸಾಂಡ್ರಿಯಾ ಕುದ್ರೆತ್ಸೋವ್ ವಿರುದ್ಧವೂ ಗೆಲುವು ಸಾಧಿಸಿದರು.
ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ 7-5, 4-6, 6-2, 6-3ರಲ್ಲಿ ಸ್ಪೇನ್‌ನ ಅಲ್ಬರ್ಟ್ ರಾಮೊಸ್ ಮೇಲೂ, ಅಮೆರಿಕದ ಮಾರ್ಡಿ ಫಿಷ್ 6-4, 6-4, 6-2ರಲ್ಲಿ ಲಕ್ಸೆಂಬರ್ಗ್‌ನ ಗಿಲ್ಲಿಸ್ ಮುಲ್ಲರ್ ವಿರುದ್ಧವೂ, ಸ್ಲೊವಾಕಿಯಾದ ಬ್ಲಾಜ್ ಕೆವಸಿಕ್ 6-4, 6-3, 6-4ರಲ್ಲಿ ಇಂಗ್ಲೆಂಡ್‌ನ ಜೇಮ್ಸ ವರ್ಲ್ಡ್ ಮೇಲೂ ಗೆಲುವು ಸಾಧಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.