ADVERTISEMENT

ಇಂಗ್ಲೆಂಡ್‌ಗೆ ಭಾರಿ ಮುನ್ನಡೆ

ಆ್ಯಷಸ್: ಸ್ವಾನ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:59 IST
Last Updated 19 ಜುಲೈ 2013, 19:59 IST
ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಇಂಗ್ಲೆಂಡ್ ತಂಡದ ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್ ಸಂಭ್ರಮಿಸಿದ ಕ್ಷಣ
ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಇಂಗ್ಲೆಂಡ್ ತಂಡದ ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್ ಸಂಭ್ರಮಿಸಿದ ಕ್ಷಣ   

ಲಂಡನ್ (ಎಎಫ್‌ಪಿ): ಗ್ರೇಮ್ ಸ್ವಾನ್ ಸಮರ್ಥ ಬೌಲಿಂಗ್ ದಾಳಿಗೆ ಕುಸಿತ ಅನುಭವಿಸಿದ ಆಸ್ಟ್ರೇಲಿಯಾ ತಂಡ ಆ್ಯಷಸ್ ಕ್ರಿಕೆಟ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಕೇವಲ 128 ರನ್‌ಗಳಿಗೆ ಆಲೌಟಾಗಿದೆ.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ ಇಂಗ್ಲೆಂಡ್‌ನ ಮೊದಲ ಇನಿಂಗ್ಸ್ ಮೊತ್ತವಾದ 361 ರನ್‌ಗಳಿಗೆ ಉತ್ತರ ನೀಡತೊಡಗಿದ ಮೈಕಲ್ ಕ್ಲಾರ್ಕ್ ಬಳಗ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. 44 ರನ್‌ಗಳಿಗೆ ಐದು ವಿಕೆಟ್ ಪಡೆದ ಸ್ವಾನ್   ಪ್ರವಾಸಿ ತಂಡದ ಪತನಕ್ಕೆ ಕಾರಣರಾದರು.

ಆದರೆ 233 ರನ್‌ಗಳ ಭಾರಿ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಕುಸಿತ ಅನುಭವಿಸಿದೆ. ಅಲಸ್ಟೇರ್ ಕುಕ್ ಬಳಗ ಎರಡನೇ ದಿನದಾಟದ ಅಂತ್ಯಕ್ಕೆ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 31 ರನ್ ಗಳಿಸಿತ್ತು. ಕುಕ್ (8), ಜೊನಾಥನ್ ಟ್ರಾಟ್ (0) ಮತ್ತು ಕೆವಿನ್ ಪೀಟರ್‌ಸನ್ (5) ಬೇಗನೇ ಔಟಾದರು.

ಎಲ್ಲ ಮೂರು ವಿಕೆಟ್‌ಗಳು ಪೀಟರ್ ಸಿಡ್ಲ್ (4ಕ್ಕೆ 3) ಪಾಲಾದವು. ಇದೀಗ ಇಂಗ್ಲೆಂಡ್ ಏಳು ವಿಕೆಟ್ ಕೈಯಲ್ಲಿರುವಂತೆ ಒಟ್ಟು 264 ರನ್‌ಗಳ ಮುನ್ನಡೆಯಲ್ಲಿದೆ.

ಆಸೀಸ್ ತಂಡದ ಎಲ್ಲ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್‌ನ ಶಿಸ್ತಿನ ಬೌಲಿಂಗ್ ಮುಂದೆ ಪರದಾಡಿದರು. ಶೇನ್ ವಾಟ್ಸನ್ (30) `ಗರಿಷ್ಠ ಸ್ಕೋರರ್' ಎನಿಸಿದರೆ ನಾಯಕ ಮೈಕಲ್ ಕ್ಲಾರ್ಕ್ 28 ರನ್ ಗಳಿಸಿದರು. ಇತರ ಯಾರೂ 15 ರನ್‌ಗಳ ಗಡಿ ದಾಟಲಿಲ್ಲ.
ವಾಟ್ಸನ್ ಮತ್ತು ಕ್ರಿಸ್ ರೋಜರ್ಸ್‌ ಮೊದಲ ವಿಕೆಟ್‌ಗೆ 42 ರನ್ ಸೇರಿಸಿ ಸಕಾರಾತ್ಮಕ ಆರಂಭ ನೀಡಿದ್ದರು. ಆ ಬಳಿಕ ತಂಡ ಕುಸಿತದ ಹಾದಿ ಹಿಡಿತು.

ಹ್ಯಾರಿಸ್‌ಗೆ ಐದು ವಿಕೆಟ್: ಇದಕ್ಕೂ ಮುನ್ನ 7 ವಿಕೆಟ್‌ಗೆ 289 ರನ್‌ಗಳಿಂದ ಬೆಳಿಗ್ಗೆ ಆಟ ಆರಂಭಿಸಿದ ಆತಿಥೇಯರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ 361 ರನ್‌ಗಳಿಗೆ ಆಲೌಟಾದರು. ಸ್ಟುವರ್ಟ್ ಬ್ರಾಡ್ (33) ಮತ್ತು ಗ್ರೇಮ್ ಸ್ವಾನ್ (ಔಟಾಗದೆ 28) ಕೊನೆಯಲ್ಲಿ ತಂಡದ ಮೊತ್ತ ಹೆಚ್ಚಿಸಿದರು. ಆಸೀಸ್ ಪರ ಹ್ಯಾರಿಸ್ (72ಕ್ಕೆ 5) ಯಶಸ್ವಿ ಬೌಲರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: ಮೊದಲ ಇನಿಂಗ್ಸ್ 100.1 ಓವರ್‌ಗಳಲ್ಲಿ 361 (ಸ್ಟುವರ್ಟ್ ಬ್ರಾಡ್ 33, ಗ್ರೇಮ್ ಸ್ವಾನ್ ಔಟಾಗದೆ 28, ಹ್ಯಾರಿಸ್ 72ಕ್ಕೆ 5, ಸ್ಟೀವನ್ ಸ್ಮಿತ್ 18ಕ್ಕೆ 3) ಹಾಗೂ ಎರಡನೇ ಇನಿಂಗ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 31

ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 53.3 ಓವರ್‌ಗಳಲ್ಲಿ 128 (ಶೇನ್ ವಾಟ್ಸನ್ 30, ಕ್ರಿಸ್ ರೋಜರ್ಸ್‌ 15, ಉಸ್ಮಾನ್ ಖವಾಜಾ 14, ಮೈಕಲ್ ಕ್ಲಾರ್ಕ್ 28, ಗ್ರೇಮ್ ಸ್ವಾನ್ 44ಕ್ಕೆ 5, ಟಿಮ್ ಬ್ರೆಸ್ನನ್ 28ಕ್ಕೆ 2, ಜೇಮ್ಸ ಆ್ಯಂಡರ್‌ಸನ್ 25ಕ್ಕೆ 1, ಸ್ಟುವರ್ಟ್ ಬ್ರಾಡ್ 26ಕ್ಕೆ 1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.