ADVERTISEMENT

ಉದಯಲಕ್ಷ್ಮಿಗೆ ಹೊರನಡೆಯಲು ಸೂಚನೆ

ಪುಣೆಯ ಚಳಿಯಲ್ಲೂ ಬಿಸಿ ಏರಿಸಿದ ಉದ್ದೀಪನಾ ಮದ್ದು ವಿವಾದ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 19:59 IST
Last Updated 3 ಜುಲೈ 2013, 19:59 IST

ಪುಣೆ: ಶಾಟ್‌ಪಟ್ ಸ್ಪರ್ಧಿ ಉದಯಲಕ್ಷ್ಮಿ `ಉದ್ದೀಪನಾ ಮದ್ದು ಸೇವನೆ' ವಿವಾದ ಹೊಸ ಆಯಾಮ ಪಡೆದುಕೊಂಡಿದೆ. ಭಾರತ ಅಥ್ಲೆಟಿಕ್ಸ್ ಸಂಸ್ಥೆಯ ಅಧಿಕಾರಿಗಳು ಅವರಿಗೆ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಿಂದ ಹೊರನಡೆಯುವಂತೆ ಸೂಚನೆ ನೀಡಿದ್ದಾರೆ.

ಇಲ್ಲಿ ನಡೆಯುತ್ತಿರುವ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಬುಧವಾರ ವಿವಿಧ ಸ್ಪರ್ಧೆಗಳ ಫಲಿತಾಂಶಕ್ಕಿಂತ ಹೆಚ್ಚಾಗಿ ಉದ್ದೀಪನಾ ಮದ್ದು ಸೇವನೆ ತಡೆ ಘಟಕದ ಚಟುವಟಿಕೆ ಬಗ್ಗೆಯೇ ಗುಸುಗುಸು ವ್ಯಾಪಕವಾಗಿತ್ತು.

ಕಳೆದ ತಿಂಗಳು ಚೆನ್ನೈನಲ್ಲಿ ನಡೆದಿದ್ದ ಅಂತರ ರಾಜ್ಯ ಅಥ್ಲೆಟಿಕ್ಸ್ ವೇಳೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ 135 ಸ್ಪರ್ಧಿಗಳ ಮೂತ್ರದ ಸ್ಯಾಂಪಲ್ ಪರೀಕ್ಷೆ ನಡೆಸಿತ್ತು. ಇವುಗಳಲ್ಲಿ ಮಹಿಳಾ ವಿಭಾಗದ ಶಾಟ್‌ಪಟ್‌ನಲ್ಲಿ ಪದಕ ಗೆದ್ದ ಮಹಿಳೆಯೊಬ್ಬರ ಸ್ಯಾಂಪಲ್ ನಕಾರಾತ್ಮಕವಾಗಿದೆ ಎಂಬ ಸಂಗತಿ ಮಂಗಳವಾರ ರಾತ್ರಿ ಬಹಿರಂಗಗೊಂಡಿತ್ತು.

ಅಲ್ಲಿ ಉದಯಲಕ್ಷ್ಮಿ, ನೇಹಾಸಿಂಗ್, ನವಜಿತ್ ಕೌರ್ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಗಳಿಸಿದ್ದರು. ಉದಯಲಕ್ಷ್ಮಿ ಎರಡು ವರ್ಷಗಳ ಹಿಂದೆ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾಗ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಲುಕಿದ್ದರು. ಆ ನಂತರ ಉದಯಲಕ್ಷ್ಮಿ ಶಾಟ್‌ಪಟ್‌ನಲ್ಲಿ ಸ್ಪರ್ಧಿಸತೊಡಗಿದರು. ಉದಯಲಕ್ಷ್ಮಿ ಇಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದರು.

ಈ ಬಗ್ಗೆ ಬುಧವಾರ ರಾಷ್ಟ್ರೀಯ ಅಥ್ಲೆಟಿಕ್ಸ್ ತಂಡದ ಮುಖ್ಯ ಕೋಚ್ ಬಹದ್ದೂರ್ ಸಿಂಗ್ ಅವರು `ಪ್ರಜಾವಾಣಿ' ಜತೆಗೆ ಮಾತನಾಡಿ `ಇಂತಹದ್ದೊಂದು ಘಟನೆ ಬಗ್ಗೆ ಈವರೆಗೆ ಯಾರೂ ನನ್ನ ಗಮನಕ್ಕೆ ತಂದಿಲ್ಲ' ಎಂದರು.

ಆದರೆ ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭಾರತ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ವಲ್ಸನ್ `ನನಗೆ ಮಂಗಳವಾರ ತಡರಾತ್ರಿ ಈ ಬಗ್ಗೆ ಗೊತ್ತಾಯಿತು. ಮೂರು ದಿನ ಮೊದಲೇ ಈ     ಬಗ್ಗೆ ನನ್ನ ಗಮನಕ್ಕೆ ತಂದಿದ್ದರೆ ಇಂತಹದ್ದೊಂದು ಮುಜುಗರದಿಂದ ಪಾರಾಗಬಹುದಿತ್ತು. ಆಕೆಯನ್ನು ಆಗಲೇ ತಂಡದಿಂದ ಹೊರಗಿಡಬಹುದಿತ್ತು' ಎಂದರು.

`ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ನೀಡಿಲ್ಲ. ಆದರೂ ಏಕಾಏಕಿ ನನ್ನ ಮೇಲೆ ಈ ರೀತಿ ಕ್ರಮ ಕೈಗೊಂಡಿರುವ ಅಥ್ಲೆಟಿಕ್ಸ್ ಸಂಸ್ಥೆಯ ವಿರುದ್ಧ ನಾನು ಕೋರ್ಟ್‌ಗೆ ಹೋಗುತ್ತೇನೆ' ಎಂದು ಉದಯಲಕ್ಷ್ಮಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.