ಬೀದರ್: ಬೆಂಗಳೂರಿನ ಎಂಇಜಿ ತಂಡದವರು ಇಲ್ಲಿ ಆರಂಭವಾದ ಗುರುನಾನಕ್ ದೇವ್ ರಾಷ್ಟ್ರೀಯ ಹಾಕಿ ಟೂರ್ನಿಯಲ್ಲಿ 3-0 ಗೋಲುಗಳಿಂದ ಚಂಡೀಗಡದ ಅಜಾದ್ ಕ್ಲಬ್ ವಿರುದ್ಧ ಗೆಲುವು ಪಡೆದು ಶುಭಾರಂಭ ಮಾಡಿದರು.
ಜೋಗಾಸಿಂಗ್ ಮೆಮೋರಿಯಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಕಾರಿಯಪ್ಪ 54ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದು ಆರಂಭಿಕ ಮುನ್ನಡೆ ತಂದುಕೊಟ್ಟರು. ಈ ಪಂದ್ಯ ಏಕಪಕ್ಷೀಯವಾಗಿ ಅಂತ್ಯ ಕಂಡಿತು. ನಂತರ 62ನೇ ನಿಮಿಷದಲ್ಲಿ ಮುತ್ತಣ್ಣ ಹಾಗೂ 67ನೇ ನಿಮಿಷದಲ್ಲಿ ರಾಮಶಂಕರ ಗೋಲು ದಾಖಲಿಸಿ ಗೆಲುವಿನ ಅಂತರ ಹೆಚ್ಚಿಸಿದರು.
ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ಬೆಂಗಳೂರು ಮತ್ತು ಜಲಂಧರ್ ತಂಡಗಳ ನಡುವಿನ ಪಂದ್ಯವು 1-1ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಂಡಿತು. 40ನೇ ನಿಮಿಷದಲ್ಲಿ ಕೆಎಸ್‌ಪಿಯ ಪ್ರದೀಪ್ ಚೆಂಡನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾದರು. ಇದಕ್ಕೆ ತಿರುಗೇಟು ನೀಡಿದ ಬಿಎಸ್‌ಎಫ್‌ನ ಹರ್ಪಿಂದರ್‌ಸಿಂಗ್ 62ನೇ ನಿಮಿಷದಲ್ಲಿ ಗೋಲು ದಾಖಲಿಸಿ ಪಂದ್ಯ ಡ್ರಾ ಆಗುವಂತೆ ನೋಡಿಕೊಂಡರು.
ಮತ್ತೊಂದು ಲೀಗ್ ಪಂದ್ಯದಲ್ಲಿ ಬಿಇಜಿ ಪುಣೆ 4-0ರಲ್ಲಿ ಎಂಎಸ್‌ಪಿ ಮುಂಬೈ ಎದುರು ಜಯಿಸಿತು. ಪುಣೆ ತಂಡದ ಸ್ಯಾನ್ ಸುಂದರ್ 20ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಅದಾದ ಎರಡನೇ ನಿಮಿಷಗಳ ನಂತರ ಕಾಂಚನ್‌ರಾಜ್, 32ನೇ ನಿಮಿಷದಲ್ಲಿ ಸ್ಯಾನ್ ಸುಂದರ್ ಮತ್ತೊಂದು ಗೋಲು ದಾಖಲಿಸಿದರು. 57ನೇ ನಿಮಿಷದಲ್ಲಿ ಅಜಯ್ ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.
ಪಂಜಾಬ್‌ನ ಪಟಿಯಾಲದ ಪಿಎಸ್‌ಇಬಿ ತಂಡವು 2-1 ಗೋಲುಗಳಿಂದ ಬೆಂಗಳೂರಿನ ಆರ್ಮಿ ಗ್ರೀನ್ ಎದುರು ಜಯ ಪಡೆಯಿತು. 28ನೇ ನಿಮಿಷದಲ್ಲಿ ಆರ್ಮಿಗ್ರೀನ್‌ನ ಮೊಂಡು ಗೋಲು ದಾಖಲಿಸಿ ಆರಂಭಿಕ ಮುನ್ನಡೆ ತಂದು ಕೊಟ್ಟರು. ನಂತರ 56ನೇ ನಿಮಿಷದಲ್ಲಿ ಪಿಎಸ್‌ಇಬಿನ ಹರ್ಪಿಂದರ್‌ಸಿಂಗ್ ಗೋಲು ಗಳಿಸಿದರೆ, 61ನೇ ನಿಮಿಷದಲ್ಲಿ ಕುಲ್ವಿಂದರ್‌ಸಿಂಗ್ ಜ್ಯೂನಿಯರ್ ಗೋಲು ಕಲೆ ಹಾಕಿದರು. ಇದು ಪಂಜಾಬ್ ತಂಡದ ಗೆಲುವಿಗೆ ನೆರವಾಗಯಿತು. ಈ ಹಾಕಿ ಟೂರ್ನಿಯಲ್ಲಿ ಹನ್ನೆರಡು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.