ADVERTISEMENT

ಏಷ್ಯನ್ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ಗೆ ಭಾರತ ಮಹಿಳೆಯರ ತಂಡ ಪ್ರಕಟ: ಮೇರಿಕೋಮ್‌, ಸರಿತಾಗೆ ಸ್ಥಾನ

ಪಿಟಿಐ
Published 2 ಅಕ್ಟೋಬರ್ 2017, 19:50 IST
Last Updated 2 ಅಕ್ಟೋಬರ್ 2017, 19:50 IST
ಮೇರಿ ಕೋಮ್‌, ಸರಿತಾ ದೇವಿ
ಮೇರಿ ಕೋಮ್‌, ಸರಿತಾ ದೇವಿ   

ನವದೆಹಲಿ: ಭಾರತದ ಭರವಸೆಯ ಬಾಕ್ಸರ್ ಎಮ್‌.ಸಿ ಮೇರಿ ಕೋಮ್‌ ವಿಯೆಟ್ನಾಂನಲ್ಲಿ ನಡೆಯುವ ಏಷ್ಯನ್ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಗೆ ಸೋಮವಾರ ಪ್ರಕಟಗೊಂಡ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮೂರು ದಿನಗಳಿಂದ ಇಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಮೇರಿ ಕೋಮ್ ಉತ್ತಮ ಸಾಮರ್ಥ್ಯ ತೋರುವ ಮೂಲಕ ಯುವ ಸ್ಪರ್ಧಿಗಳನ್ನು ಹಿಂದಿಕ್ಕಿ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. 48ಕೆ.ಜಿ ವಿಭಾಗಕ್ಕೆ ಮರಳಿದ ಬಳಿಕ ಅವರು ಭಾರತಕ್ಕೆ ಪದಕ ತಂದುಕೊಡುವ ಭರವಸೆ ಮೂಡಿಸಿದ್ದಾರೆ. 64ಕೆ.ಜಿ ವಿಭಾಗದಲ್ಲಿ ಎಲ್‌.ಸರಿತಾ ದೇವಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಸಜ್ಜಾಗಿದ್ದಾರೆ. ಹೊಸ ವಿಭಾಗದಲ್ಲಿ ಅವರಿಗೂ ಇದು ಮೊದಲ ಹಾಗೂ ಪ್ರಮುಖ ಟೂರ್ನಿ ಎನಿಸಿದೆ.

ನವೆಂಬರ್‌ 2ರಿಂದ 11ರವರೆಗೆ ಚಿ ಮಿನ್‌ ಸಿಟಿಯಲ್ಲಿ ಬಾಕ್ಸಿಂಗ್ ಚಾಂಪಿಯನ್‌ಷಿಪ್ ನಡೆಯಲಿದೆ.

ADVERTISEMENT

ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್‌ 2010ರ ವರೆಗೂ 51ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. 48ಕೆ.ಜಿ ವಿಭಾಗದ ಸ್ಪರ್ಧೆ ಏಷ್ಯನ್ ಹಾಗೂ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಂಡ ಬಳಿಕ ಅವರು ವಿಭಾಗವನ್ನು ಬದಲಾಯಿಸಿದ್ದಾರೆ.

ಆರನೇ ಬಾರಿ ಅವರು ಏಷ್ಯನ್ ಚಾಂಪಿಯನ್‌ಷಿಪ್‌ ಆಡಲಿದ್ದಾರೆ. ಆಯ್ಕೆ ಟ್ರಯಲ್ಸ್‌ನಲ್ಲಿ ಮೇರಿ ಆರು ಬೌಟ್‌ಗಳಲ್ಲಿ ಸ್ಪರ್ಧೆ ಒಡ್ಡಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದ ಸರ್ಜುಬಾಲಾ ದೇವಿ ಸೇರಿದಂತೆ ಯುವ ಆಟಗಾರ್ತಿಯರ ವಿರುದ್ಧದ ಎಲ್ಲಾ ಬೌಟ್‌ಗಳನ್ನು ಅವರು ಗೆದ್ದುಕೊಂಡರು.

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ 34 ವರ್ಷದ ಬಾಕ್ಸರ್‌ ಮೇರಿ ಕೋಮ್‌ ಅವರು ಟೂರ್ನಿಗೆ ಅನುಗುಣವಾಗಿ 51ಕೆ.ಜಿ ಹಾಗೂ 48ಕೆ.ಜಿ ವಿಭಾಗಗರೆಡರಲ್ಲೂ ಸ್ಪರ್ಧಿಸುವುದಾಗಿ ಹೇಳಿದ್ದರು.

35 ವರ್ಷದ ಸರಿತಾ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಐದು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇದರಲ್ಲಿ ನಾಲ್ಕು ಚಿನ್ನದ ಪದಕಗಳು ಸೇರಿವೆ. ಇತ್ತೀಚೆಗೆ ಅವರು ವೃತ್ತಿಪರ ಬಾಕ್ಸಿಂಗ್ ಪಂದ್ಯಗಳನ್ನೂ ಆಡಿದ್ದಾರೆ. ಅಮೆಚೂರ್ ಸ್ಪರ್ಧೆಗಳಲ್ಲಿ ಹೆಚ್ಚು ಪಂದ್ಯಗಳನ್ನು ಆಡುವುದಾಗಿ ಅವರು ಹೇಳಿದ್ದರು. 60ರಿಂದ 64ಕೆ.ಜಿ ವಿಭಾಗಕ್ಕೆ ಅವರು ಹೊರಳಿದ್ದಾರೆ.

2015ರ ಆವೃತ್ತಿಯಲ್ಲಿ ಸರಿತಾ ಹಾಗೂ ಮೇರಿ ಕಣಕ್ಕಿಳಿದಿರಲಿಲ್ಲ.  ಇದರಿಂದಾಗಿ ಇಲ್ಲಿ ಭಾರತ ಒಂದೂ ಚಿನ್ನದ ಪದಕ ಗೆದ್ದುಕೊಂಡಿರಲಿಲ್ಲ. ಒಂದು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಮಾತ್ರ ಜಯಿಸಿತ್ತು. ನ್ಯಾಷನಲ್ ಕಪ್‌ನಲ್ಲಿ ಚಿನ್ನ ಗೆದ್ದಿದ್ದ ಹರಿಯಾಣದ ಬಾಕ್ಸರ್ ನೀರಜ್‌ ಅವರಿಗೂ ತಂಡದಲ್ಲಿ ಅವಕಾಶ ಸಿಕ್ಕಿದೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದ ಸೋನಿಯಾ ಲಾಥರ್‌ ಹಾಗೂ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಜಯಿಸಿದ್ದ ಸ್ವೀಟಿ ಬೋರಾ ಕೂಡ ತಂಡದಲ್ಲಿ ಇದ್ದಾರೆ.

ತಂಡ ಇಂತಿದೆ: ಎಮ್.ಸಿ.ಮೇರಿ ಕೋಮ್‌ (48ಕೆ.ಜಿ), ನೀರಜ್‌ (51ಕೆ.ಜಿ), ಶಿಖಾ (54ಕೆ.ಜಿ), ಸೋನಿಯಾ ಲಾಥರ್‌ (57ಕೆ.ಜಿ), ಪವಿತ್ರಾ (60ಕೆ.ಜಿ), ಎಲ್‌.ಸರಿತಾ ದೇವಿ (64ಕೆ.ಜಿ), ಲೊವೆನಿಯಾ (69ಕೆ.ಜಿ), ಪೂಜಾ ರಾಣಿ (75ಕೆ.ಜಿ), ಸ್ವೀಟಿ ಬೋರಾ (81ಕೆ.ಜಿ), ಸೀಮಾ ಪೂನಿಯಾ (81ಕೆ.ಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.