ADVERTISEMENT

ಐಟಿಎಫ್: ಎಂಟರ ಘಟ್ಟಕ್ಕೆ ರಂಜಿತ್

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ಧಾರವಾಡ: ಅಗ್ರ ಶ್ರೇಯಾಂಕಿತರಾದ ಶ್ರೀರಾಮ್ ಬಾಲಾಜಿ, ಸನಮ್ ಸಿಂಗ್ ಹಾಗೂ ವಿ.ಎಂ. ರಂಜಿತ್ ಇಲ್ಲಿನ ರಾಜಾಧ್ಯಕ್ಷ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಧಾರವಾಡ ಓಪನ್ ಪುರುಷರ ಐಟಿಎಫ್ ಟೂರ್ನಿಯಲ್ಲಿ ಜಯ ಗಳಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು.

ಬುಧವಾರ ಮಧ್ಯಾಹ್ನ ಸುಡುಬಿಸಿಲಿನಲ್ಲಿ ನಡೆದ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಬಾಲಾಜಿ ಶ್ರೀರಾಮ್ 6-4, 2-0 ರಿಂದ ಪಂದ್ಯ ಗೆದ್ದರು. ಅವರ ಎದುರಾಳಿ ಸಿದ್ಧಾರ್ಥ್ ರಾವತ್ ಸ್ನಾಯು ಸೆಳೆತದಿಂದಾಗಿ ಅರ್ಧದಲ್ಲೇ ಪಂದ್ಯದಿಂದ ಹೊರನಡೆದರು.

ಮೊದಲ ಸೆಟ್‌ನ ಆರಂಭದಲ್ಲಿ ಉತ್ತಮ ಪೈಪೋಟಿ ಏರ್ಪಟ್ಟಿತ್ತು. ಶ್ರೀರಾಮ್‌ರ ಹೊಡೆತಗಳಿಗೆ ಅಷ್ಟೇ ಸಮರ್ಪಕವಾಗಿ ಉತ್ತರ ನೀಡುತ್ತಿದ್ದ ಸಿದ್ಧಾರ್ಥ್ ಒಂದು ಹಂತದಲ್ಲಿ 4-3ರಿಂದ ಮುಂದಿದ್ದರು. ಆದರೆ ನಂತರ ಒತ್ತಡಕ್ಕೆ ಒಳಗಾದರು. ಪರಿಣಾಮ ಸರ್ವ್‌ಗಳು ಕೈತಪ್ಪಿದವು.

ಮುಂಗೈ ಹೊಡೆತಗಳು ನೆಟ್‌ನ ಒಳಗೇ ಉಳಿದುಕೊಂಡವು. ಪರಿಸ್ಥಿತಿಯ ಲಾಭ ಪಡೆದ ಶ್ರೀರಾಮ್ ಎಂಟನೇ ಗೇಮ್‌ನಲ್ಲಿ ಸ್ಕೋರ್ ಸಮನಾಗಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡರು. ಹತ್ತನೇ ಗೇಮ್‌ನಲ್ಲಿ 6-4ರಿಂದ ಮೊದಲ ಸೆಟ್ ಗೆದ್ದರು.

ಮೊದಲ ಸೆಟ್ ಸೋಲಿನ ತರುವಾಯ ಮುಂಗೈನ ಸ್ನಾಯು ಸೆಳೆತಕ್ಕೆ ಒಳಗಾದ ಸಿದ್ಧಾರ್ಥ್ ಫಿಸಿಯೋರಿಂದ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಪಂದ್ಯದಿಂದ ಹೊರನಡೆದರು.

ಮಲಿಕ್ ಗಾಯಾಳು: ನಾಲ್ಕನೇ ಶ್ರೇಯಾಂಕಿತ ವಿಜಯಂತ್ ಮಲಿಕ್ ಸಹ ಪ್ರಿ-ಕ್ವಾರ್ಟರ್‌ನಲ್ಲಿ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರು.

ಅವರು 17ರ ಹರೆಯದ ರಾಮ್‌ಕುಮಾರ್ ರಾಮನಾಥನ್ ವಿರುದ್ಧ 5-7, 1-3ಯಿಂದ ಹಿನ್ನಡೆ ಅನುಭವಿಸಿದ್ದ ಸಂದರ್ಭ ಗಾಯಗೊಂಡರು. ಮಂಗಳವಾರ ಅಮೆರಿಕಾದ ಆಟಗಾರ ವಿಲಿಯಂ ಕೆಂಡಾಲ್‌ರನ್ನು ಮಣಿಸಿ ಗಮನ ಸೆಳೆದಿದ್ದ ರಾಮ್‌ಕುಮಾರ್ ಈ ಪಂದ್ಯದಲ್ಲೂ ಅಚ್ಚರಿಯ ಪ್ರದರ್ಶನ ನೀಡಿದರು.

ಬೆಳಿಗ್ಗೆ ನಡೆದ ರೋಚಕ ಹಣಾಹಣಿಯಲ್ಲಿ ನೆದರ್‌ಲ್ಯಾಂಡ್‌ನ ಕೊಲಿನ್ ವ್ಯಾನ್‌ಬೀಮ್ 6-3, 6-7 (5), 6-2 ಅಂತರದಲ್ಲಿ ಆರನೇ ಶ್ರೇಯಾಂಕದ ರಷ್ಯಾದ ಸೆರ್ಜೈ ಕ್ರೊಟಿಯೊಕ್‌ರಿಗೆ ಆಘಾತ ನೀಡಿದರು. ಎರಡನೇ ಶ್ರೇಯಾಂಕದ ಸನಮ್ ಸಿಂಗ್ 6-3, 6-2ರಿಂದ ಕಾಜಾ ವಿನಾಯಕ್ ಶರ್ಮಾ ವಿರುದ್ಧ ಅನಾಯಾಸ ಗೆಲುವು ದಾಖಲಿಸಿದರು. ಮೂರನೇ ಶ್ರೇಯಾಂಕದ ವಿ.ಎಂ. ರಂಜಿತ್ 6-3, 6-4ರಿಂದ ಲಕ್ಷಿತ್ ಸೂದ್ ವಿರುದ್ಧ ಗೆಲುವು ಪಡೆದು ಮುನ್ನಡೆದರು.

ಅರ್ಜುನ್ ಖಾಡೆ 6-2, 7-5 6-2ರಿಂದ ಲುಕಾ ಮಾರ್ಗರೋಲಿ ವಿರುದ್ಧ: ಟಾರ್ಸ್ಟನ್ ವಿಯೊಸ್ಕಾ 6-2, 6-0ಯಿಂದ ಜೊರೊನ್ ಬರ್ನಾಡ್ ವಿರುದ್ಧ ಗೆಲುವು ಪಡೆದರು.

ಡಬಲ್ಸ್-ಭಾರತದ ಜೋಡಿಗೆ ಆಘಾತ:
ಮಧ್ಯಾಹ್ನ ನಡೆದ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕಾದ ಅಮೃತ್ ನರಸಿಂಹನ್ ಹಾಗೂ ಮೈಕಲ್ ಶಬಾಜ್ ಜೋಡಿ 7-6 (5), 6-4ರಲ್ಲಿ ಅಗ್ರ ಶ್ರೇಯಾಂಕದ ವಿಜಯ್ ಸುಂದರ್ ಪ್ರಶಾಂತ್ ಹಾಗೂ ಅರುಣ್‌ಪ್ರಕಾಶ್ ರಾಜಗೋಪಾಲನ್‌ಗೆ ಆಘಾತ ನೀಡಿತು. ಈ ಮೂಲಕ ಸೆಮಿಫೈನಲ್ ಪ್ರವೇಶ ಖಾತ್ರಿ ಪಡಿಸಿಕೊಂಡಿತು.

ಕ್ವಾರ್ಟರ್ ಫೈನಲ್‌ನ ಉಳಿದ ಪಂದ್ಯಗಳಲ್ಲಿ ಅಶ್ವಿನ್ ವಿಜಯರಾಜನ್-ಅಜಯ್ ಸೆಲ್ವರಾಜ್ ಜೋಡಿ 6-3, 6-4ರಿಂದ ಕುನಾಲ್ ಆನಂದ್-ರೋನಾಕ್ ಮಂಜುಳಾ ವಿರುದ್ಧ; ಸೆರ್ಜೈ ಕ್ರೊಟಿಯೊಕ್-ಲುಕಾ ಮಾರ್ಗರೋಲಿ ಜೋಡಿ 7-6 (1), 6-3 ಅಂತರದಿಂದ ವಿಲಿಯಂ ಕೆಂಡಾಲ್ ಮತ್ತು ಸಾಗರ್ ಮಂಜಣ್ಣ ವಿರುದ್ಧ; ಫರೀಜ್ ಮಹಮ್ಮದ್-ಪಿ. ವಿಘ್ನೇಶ್ ಜೋಡಿ 6-3, 1-0 ರಿಂದ ಅರ್ಜುನ್ ಖಾಡೆ ಮತ್ತು ಕಾಜಾ ವಿನಾಯಕ್ ಶರ್ಮಾ ವಿರುದ್ಧ (ಗಾಯಾಳು) ಗೆಲುವು ಪಡೆದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.