ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಐಟಿಐ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.
ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಐಟಿಐ ತಂಡ 5-1ಗೋಲುಗಳಿಂದ ಫ್ಲೈಯಿಂಗ್ ಹಾಕಿ ಕ್ಲಬ್ ತಂಡವನ್ನು ಮಣಿಸಿತು.
ಜಗನ್ನಾಥ್ (18 ಹಾಗೂ 29), ಎಂ. ಬೇಂಗ್ರಾ (24), ರಾಜನ್ (46) ಹಾಗೂ ಎ.ಎನ್. ಸೋಮಯ್ಯ (58) ಗೋಲು ಕಲೆ ಹಾಕಿ ಐಟಿಐ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ದಿನದ ಇನ್ನೊಂದು ಪಂದ್ಯದಲ್ಲಿ ರೈಲ್ವೆ ಗಾಲಿ ಕಾರ್ಖಾನೆ (ಆರ್‌ಡಬ್ಲ್ಯುಎಫ್) ತಂಡ 3-1ಗೋಲುಗಳಿಂದ ಕೂರ್ಗ್ ಬ್ಲೂಸ್ ತಂಡವನ್ನು ಮಣಿಸಿ ಪೂರ್ಣ ಪಾಯಿಂಟ್ಸ್ ಸಂಗ್ರಹಿಸಿದರು. ವಿಜಯಿ ತಂಡದ ಜಯರಾಜ್ 31 ಹಾಗೂ 51ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿದರೆ, ಇನ್ನೊಂದು ಗೋಲನ್ನು ಖಾಲಿದ್ ಅಜಿಯಾ 48ನೇ ನಿಮಿಷದಲ್ಲಿ ತಂದಿತ್ತರು.
ಭಾನುವಾರದ ಪಂದ್ಯಗಳಲ್ಲಿ ಗದಗನ ಎಸ್‌ಎಚ್‌ಬಿಎಚ್‌ಸಿ-ಫ್ಲೈಯಿಂಗ್ ಹಾಕಿ ಕ್ಲಬ್ (ಮಧ್ಯಾಹ್ನ 2.30) ಹಾಗೂ ಬಿಎಸ್‌ಎನ್‌ಎಲ್-ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) `ಬಿ~ (ಸಂಜೆ 4.00) ಪೈಪೋಟಿ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.