ADVERTISEMENT

ಐಸಿಸಿ ಕಾರ್ಯಕ್ರಮಕ್ಕೆ ಭಾರತ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:55 IST
Last Updated 12 ಸೆಪ್ಟೆಂಬರ್ 2011, 19:55 IST

ಲಂಡನ್: ಮಹೇಂದ್ರ ಸಿಂಗ್ ದೋನಿ `ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್~ (ಕ್ರೀಡಾ ಮನೋಭಾವ) ಪ್ರಶಸ್ತಿಗೆ ಆಯ್ಕೆ ಆಗಿದ್ದರು. ಆದರೆ ಆಹ್ವಾನ ಪತ್ರ ಸಿಗದ ಕಾರಣ ಭಾರತ ಕ್ರಿಕೆಟ್ ತಂಡದ ಆಟಗಾರರು ಸೋಮವಾರ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನೇ ಬಹಿಷ್ಕರಿಸಿದರು.

ಭಾರತದ ಆಟಗಾರರಿಗೆ ವಾರ್ಷಿಕ ಸಮಾರಂಭದಲ್ಲಿ ಈ ಬಾರಿ ಹೆಚ್ಚು ಪ್ರಶಸ್ತಿಗಳು ಸಿಗಲಿಲ್ಲ. ಆದರೆ ಏಕದಿನ ಚಾಂಪಿಯನ್ ಆಟಗಾರರ ಅನುಪಸ್ಥಿತಿ ಎದ್ದು ಕಾಣುತಿತ್ತು.

`ಸೋಮವಾರ ಮಧ್ಯಾಹ್ನದವರೆಗೆ ನಮಗೆ ಆಹ್ವಾನ ಪತ್ರ ಲಭಿಸಿರಲಿಲ್ಲ. ಸಂಜೆ ಯಾರೋ ದೂರವಾಣಿ ಕರೆ ಮಾಡಿ ಆಹ್ವಾನಿಸಿದರು. ಆದರೆ ತಂಡದ ಅಲಭ್ಯತೆ ಬಗ್ಗೆ ಅವರು ಹೇಳಿದೆ. ಏಕೆಂದರೆ ನಾವು ಮತ್ತೊಂದು ಕಾರ್ಯಕ್ರಮಕ್ಕೆ ಅಷ್ಟರಲ್ಲಿ ಯೋಜನೆ ರೂಪಿಸಿದ್ದೆವು~ ಎಂದು ಭಾರತ ತಂಡದ ಮ್ಯಾನೇಜರ್ ಶಿವಲಾಲ್ ಯಾದವ್ ತಿಳಿಸಿದರು.

ಆದರೆ `ಈ ಮೊದಲೇ ನಾವು ಬಿಸಿಸಿಐಗೆ ಆಹ್ವಾನ ಕಳುಹಿಸಿದ್ದೆವು~ ಎಂದು ಐಸಿಸಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ನಾಯಕ ದೋನಿ ಟ್ರೆಂಟ್‌ಬ್ರಿಜ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ರನ್‌ಔಟ್ ಆಗಿದ್ದ ಇಂಗ್ಲೆಂಡ್ ತಂಡದ ಇಯಾನ್ ಬೆಲ್ ಅವರನ್ನು ಮತ್ತೆ ಕರೆಸಿ ಕ್ರೀಡಾ ಮನೋಭಾವ ಮೆರೆದಿದ್ದರು. ದೋನಿ ಸಮಾರಂಭದಲ್ಲಿ ಹಾಜರಿರದ ಕಾರಣ ಅವರ ಪರವಾಗಿ ಬೆಲ್‌ಗೆ ನಿರೂಪಕ ರವಿಶಾಸ್ತ್ರಿ ಆ ಟ್ರೋಫಿ ನೀಡಿದರು!

ಐಸಿಸಿ ವಾರ್ಷಿಕ ಪ್ರಶಸ್ತಿ ಪಡೆದವರು: ವರ್ಷದ ಅತ್ಯುತ್ತಮ ಕ್ರಿಕೆಟಿಗ: ಜೊನಾಥನ್ ಟ್ರಾಟ್ (ಇಂಗ್ಲೆಂಡ್), ಅತ್ಯುತ್ತಮ ಏಕದಿನ ಕ್ರಿಕೆಟಿಗ ಹಾಗೂ ಜನರ ಆಯ್ಕೆಯ ಆಟಗಾರ: ಕುಮಾರ ಸಂಗಕ್ಕಾರ (ಶ್ರೀಲಂಕಾ), ಟೆಸ್ಟ್ ಕ್ರಿಕೆಟಿಗ: ಅಲಸ್ಟರ್ ಕುಕ್ (ಇಂಗ್ಲೆಂಡ್), ಉದಯೋನ್ಮುಖ ಆಟಗಾರ: ದೇವೇಂದ್ರ ಬಿಶೂ (ವೆಸ್ಟ್‌ಇಂಡೀಸ್),  ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್: ಮಹೇಂದ್ರ ಸಿಂಗ್ ದೋನಿ (ಭಾರತ), ಅತ್ಯುತ್ತಮ ಅಂಪೈರ್: ಅಲೀಮ್      ದಾರ್ (ಪಾಕಿಸ್ತಾನ). 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.