ADVERTISEMENT

ಐಸಿಸಿ ರ‍್ಯಾಂಕಿಂಗ್‌: ಎರಡನೇ ಸ್ಥಾನಕ್ಕೇರಿದ ಚಾಹಲ್‌

ಪಿಟಿಐ
Published 19 ಮಾರ್ಚ್ 2018, 20:16 IST
Last Updated 19 ಮಾರ್ಚ್ 2018, 20:16 IST
ಯಜುವೇಂದ್ರ ಚಾಹಲ್‌
ಯಜುವೇಂದ್ರ ಚಾಹಲ್‌   

ದುಬೈ: ಭಾರತದ ಯಜುವೇಂದ್ರ ಚಾಹಲ್‌, ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಸೋಮವಾರ ಬಿಡುಗಡೆ ಮಾಡಿರುವ ಟ್ವೆಂಟಿ–20 ಬೌಲರ್‌ಗಳ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ.

31ನೇ ಸ್ಥಾನಕ್ಕೇರಿದ ಸುಂದರ್‌

ವಾಷಿಂಗ್ಟನ್‌ ಸುಂದರ್‌ 31ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ಶ್ರೇಷ್ಠ ಸಾಧನೆಯಾಗಿದೆ.

ADVERTISEMENT

ಶ್ರೀಲಂಕಾದಲ್ಲಿ ನಡೆದಿದ್ದ ನಿದಾಸ್‌ ಕಪ್‌ ತ್ರಿಕೋನ ಟ್ವೆಂಟಿ–20 ಕ್ರಿಕೆಟ್‌ ಸರಣಿಯಲ್ಲಿ ಚಾಹಲ್‌ ಅಮೋಘ ಸಾಮರ್ಥ್ಯ ತೋರಿದ್ದರು. ಹೀಗಾಗಿ 12 ಸ್ಥಾನಗಳಲ್ಲಿ ಪ್ರಗತಿ ಕಂಡಿದ್ದಾರೆ. ಅವರ ಖಾತೆಯಲ್ಲಿ 706 ಪಾಯಿಂಟ್ಸ್‌ ಇದೆ. ಇದು ಚಾಹಲ್‌ ವೃತ್ತಿಬದುಕಿನ ಶ್ರೇಷ್ಠ ಸಾಧನೆಯೂ ಆಗಿದೆ.

ಆಫ್‌ಸ್ಪಿನ್ನರ್‌ ಸುಂದರ್‌, ನಿದಾಸ್‌ ಕಪ್‌ ಸರಣಿಯಲ್ಲಿ ಐದು ಪಂದ್ಯಗಳಿಂದ ಎಂಟು ವಿಕೆಟ್‌ ಉರುಳಿಸಿದ್ದರು. ಹೀಗಾಗಿ ಅವರಿಗೆ ಸರಣಿ ಶ್ರೇಷ್ಠ ಗೌರವ ಲಭಿಸಿತ್ತು. ಅವರು ಒಟ್ಟು 151ಸ್ಥಾನ ಮೇಲಕ್ಕೇರಿದ್ದು 496 ಪಾಯಿಂಟ್ಸ್‌ ಹೊಂದಿದ್ದಾರೆ.

ವೇಗದ ಬೌಲರ್‌ ಜಯದೇವ್‌ ಉನದ್ಕತ್‌ ಮತ್ತು ಶಾರ್ದೂಲ್‌ ಠಾಕೂರ್‌ ಅವರು ಕ್ರಮವಾಗಿ 53 ಮತ್ತು 76ನೇ ಸ್ಥಾನಗಳಿಗೆ ಬಡ್ತಿ ಹೊಂದಿದ್ದಾರೆ.

ಅಫ್ಗಾನಿಸ್ತಾನದ ರಶೀದ್‌ ಖಾನ್‌ (759 ಪಾಯಿಂಟ್ಸ್‌) ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

95ನೇ ಸ್ಥಾನಕ್ಕೇರಿಸ ಕಾರ್ತಿಕ್‌: ಬಾಂಗ್ಲಾದೇಶ ಎದುರಿನ ಫೈನಲ್‌ನಲ್ಲಿ ಅಮೋಘ ಆಟ ಆಡಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದ ದಿನೇಶ್‌ ಕಾರ್ತಿಕ್‌ ಬ್ಯಾಟ್ಸ್‌ಮನ್‌ಗಳ ಕ್ರಮಾಂಕಪಟ್ಟಿಯಲ್ಲಿ 95ನೇ ಸ್ಥಾನಕ್ಕೇರಿದ್ದಾರೆ. ಅವರು ಮೊದಲು 126ನೇ ಸ್ಥಾನ ಹೊಂದಿದ್ದರು.

ವಿರಾಟ್‌ ಕೊಹ್ಲಿ ಎಂಟನೇ ಸ್ಥಾನಕ್ಕೆ ಇಳಿದಿದ್ದಾರೆ. ಕೆ.ಎಲ್‌.ರಾಹುಲ್‌ ಮತ್ತು ರೋಹಿತ್‌ ಶರ್ಮಾ ಅವರು ಕ್ರಮವಾಗಿ 12 ಮತ್ತು 13ನೇ ಸ್ಥಾನಗಳಿಗೆ ಏರಿದ್ದಾರೆ.

ಶಿಖರ್‌ ಧವನ್‌ 17ನೇ ಸ್ಥಾನದಲ್ಲಿದ್ದು, ಮನೀಷ್‌ ಪಾಂಡೆ 34ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ನ್ಯೂಜಿಲೆಂಡ್‌ನ ಕಾಲಿನ್‌ ಮನ್ರೊ (801 ಪಾಯಿಂಟ್ಸ್‌) ಮೊದಲ ಸ್ಥಾನದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.