ಬೆಂಗಳೂರು: ಕಳೆದ ಋತುವಿನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಗಾಲ್ಫ್ ಸ್ಪರ್ಧಿ ಅನಿರ್ಬನ್ ಲಾಹಿರಿ, ಈ ವರ್ಷ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಬ್ರಿಟಿಷ್ ಓಪನ್ ಗಾಲ್ಫ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿರುವ ಅವರು ಬಾಲ್ಯಕಾಲದ ಕನಸು ನನಸಾದ ಸಂಭ್ರಮದಲ್ಲಿದ್ದಾರೆ.
ಕೆಲ ದಿನಗಳ ಹಿಂದೆ ಥಾಯ್ಲೆಂಡ್‌ನಲ್ಲಿ ನಡೆದ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಲಾಹಿರಿ ಬ್ರಿಟಿಷ್ ಓಪನ್‌ನಲ್ಲಿ ಆಡುವ ಅವಕಾಶ ಪಡೆದಿದ್ದರು. ಈ ಯಶಸ್ಸಿಗೆ `ಧ್ಯಾನ~ ಕಾರಣ ಎಂದು ಅವರು ಹೇಳಿದ್ದಾರೆ.
ಲೂಯಿಸ್ ಫಿಲಿಪ್ ಕಪ್ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಲಾಹಿರಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡುತ್ತಾ, `ಫೆಬ್ರುವರಿಯ ಆರಂಭದಲ್ಲಿ ಹೈದರಾಬಾದ್‌ನ ವಿಪಾಸನಾ ಧ್ಯಾನ ಕೇಂದ್ರದಲ್ಲಿ 10 ದಿನಗಳ ಶಿಬಿರದಲ್ಲಿ ಪಾಲ್ಗೊಂಡಿದ್ದೆ. ಅದೊಂದು ಶಿಸ್ತಿನಿಂದ ಕೂಡಿದ್ದ ಶಿಬಿರ. ಇದು ಸಾಕಷ್ಟು ನೆರವು ನೀಡಿದೆ~ ಎಂದು ಹೇಳಿದರು.
`ಕಳೆದ ವರ್ಷ ಉತ್ತಮ ಆರಂಭದ ಬಳಿಕ ನಿರಾಸೆ ಅನುಭವಿಸಿದ್ದೆ. ಆದರೆ ಈ ಬಾರಿ ಎಲ್ಲ ಸವಾಲುಗಳನ್ನು ಮೆಟ್ಟಿನಿಲ್ಲುವ ವಿಶ್ವಾಸ ಹೊಂದಿದ್ದೇನೆ~ ಎಂದರು.
ಮಂಗಳವಾರ ಆರಂಭವಾಗಲಿರುವ ಲೂಯಿ ಫಿಲಿಪ್ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಲಾಹಿರಿ ಅಲ್ಲದೆ ದೇಶದ ಪ್ರಮಖ ಸ್ಪರ್ಧಿಗಳಾದ ಜೀವ್ ಮಿಲ್ಖಾ ಸಿಂಗ್, ಜ್ಯೋತಿ ರಾಂಧವ, ಗಗನ್‌ಜೀತ್ ಭುಲ್ಲರ್, ಎಸ್‌ಎಸ್‌ಪಿ ಚೌರಾಸಿಯಾ, ಗೌರವ್ ಘಾಯ್ ಮತ್ತು ಶಿವ್ ಕಪೂರ್ ಪಾಲ್ಗೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.