ADVERTISEMENT

ಕಳ್ಳಾಟ: ಅಶ್ರಫುಲ್ ಅಮಾನತು

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 19:59 IST
Last Updated 4 ಜೂನ್ 2013, 19:59 IST
ಮೊಹಮ್ಮದ್ ಅಶ್ರಫುಲ್
ಮೊಹಮ್ಮದ್ ಅಶ್ರಫುಲ್   

ಢಾಕಾ (ಐಎಎನ್‌ಎಸ್): ರಾಷ್ಟ್ರೀಯ ತಂಡದ ಮಾಜಿ ನಾಯಕ ಮೊಹಮ್ಮದ್ ಅಶ್ರಫುಲ್ ಅವರನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮಂಗಳವಾರ ಅಮಾನತು ಮಾಡಿದೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ವೇಳೆ ಮೋಸದಾಟದಲ್ಲಿ ತಾವು ಪಾಲ್ಗೊಂಡಿರುವುದಾಗಿ ಅಶ್ರಫುಲ್ ತಪ್ಪು ಒಪ್ಪಿಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ.

28 ವರ್ಷದ ಅಶ್ರಫುಲ್, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು.

ಬಿಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಅಶ್ರಫುಲ್ ಪಾತ್ರವಿರುವ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಭ್ರಷ್ಟಾಚಾರ ವಿರೋಧಿ ಹಾಗೂ ಭದ್ರತಾ ವಿಭಾಗ (ಎಸಿಎಸ್‌ಯು) ಪತ್ತೆ ಹಚ್ಚಿತ್ತು.

`ಮೋಸದಾಟದಲ್ಲಿ ತಮ್ಮ ಪಾತ್ರದ ಬಗ್ಗೆ ಅಶ್ರಫುಲ್, ಎಸಿಎಸ್‌ಯು ತಂಡದ ಎದುರು ತಪ್ಪು ಒಪ್ಪಿಕೊಂಡರು. ಆದ್ದರಿಂದ ತನಿಖೆಯ ಸಂಪೂರ್ಣ ವರದಿ ದೊರೆಯುವ ತನಕ, ಅವರನ್ನು ಯಾವುದೇ ದರ್ಜೆಯ ಕ್ರಿಕೆಟ್‌ನಲ್ಲಿ ಆಡಲು ಅನುಮತಿ ನೀಡುವುದಿಲ್ಲ. ನಾವು ಅವರನ್ನು ಶಿಕ್ಷಿಸುತ್ತಿಲ್ಲ' ಎಂದು  ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಪಪೊನ್ ತಿಳಿಸಿದ್ದಾರೆ.

ಬಿಪಿಎಲ್‌ನ ದ್ವಿತೀಯ ಆವೃತ್ತಿಯಲ್ಲಿ ಢಾಕಾ ಗ್ಲಾಡಿಯೇಟರ್ಸ್ ಹಾಗೂ ಚಿತ್ತಗಾಂಗ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಮೋಸದಾಟ ನಡೆದಿತ್ತು. ಚಿತ್ತಗಾಂಗ್ ಕಿಂಗ್ಸ್ ವಿರುದ್ಧ ಸೋಲಲು ಅಶ್ರಫುಲ್‌ಗೆ ಸುಮಾರು ಏಳು ಲಕ್ಷ ರೂಪಾಯಿ ನೀಡಲಾಗಿತ್ತು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.