ADVERTISEMENT

`ಕಾಲಿಸ್ ಅನುಪಸ್ಥಿತಿ ಕಾಡಿತು'

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ಕೋಲ್ಕತ್ತ (ಐಎಎನ್‌ಎಸ್): `ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಲು ಉತ್ತಮ ಆವಕಾಶವಿತ್ತು. ಆದರೆ, ಆಲ್‌ರೌಂಡರ್ ಜಾಕ್ ಕಾಲಿಸ್ ಅವರ ಅನುಪಸ್ಥಿತಿ ತಂಡವನ್ನು ಕಾಡಿತು' ಎಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸುನಿಲ್ ನಾರಾಯಣ ಅಭಿಪ್ರಾಯ ಪಟ್ಟರು.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಐದು ವಿಕೆಟ್‌ಗಳ ಗೆಲುವು ಸಾಧಿಸಿತ್ತು. 
`ಎದುರಾಳಿ ತಂಡ ಗೆಲ್ಲಲು 160 ರನ್‌ಗಳು ಅಗತ್ಯವಿತ್ತು. ಈ ಮೊತ್ತದೊಳಗೆ ಇಂಡಿಯನ್ಸ್ ತಂಡವನ್ನು ಕಟ್ಟಿ ಹಾಕಬಹುದಿತ್ತು. ಆದರೆ, ವಿಶ್ವದರ್ಜೆ ಬೌಲರ್ ಆಗಿರುವ ಕಾಲಿಸ್ ಗಾಯದ ಕಾರಣ ಅಲಭ್ಯರಾಗಿದ್ದರಿಂದ ನಮಗೆ ಹಿನ್ನೆಡೆ ಉಂಟಾಯಿತು' ಎಂದೂ ಅವರು ನುಡಿದರು.

`ಇಂಡಿಯನ್ಸ್ ಗೆಲುವಿನಲ್ಲಿ ಬ್ಯಾಟ್ಸ್‌ಮನ್‌ಗಳು ಪ್ರಮುಖ ಪಾತ್ರ ವಹಿಸಿದರು. ಅದರಲ್ಲೂ ಮುಖ್ಯವಾಗಿ ಸ್ಮಿತ್ ಉತ್ತಮ ಆರಂಭ ದೊರಕಿಸಿಕೊಟ್ಟರು. ಎದುರಾಳಿ ತಂಡದವರ ಯೋಜನೆಯೂ ಚೆನ್ನಾಗಿತ್ತು' ಎಂದೂ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಮೆಚ್ಚುಗೆ ವ್ಯಕ್ತಪಡಿಸಿದರು.

`ನಾಲ್ವರು ವಿದೇಶಿ ಆಟಗಾರರಿಗೆ ಮಾತ್ರ ಅಂತಿಮ ಹನ್ನೊಂದರಲ್ಲಿ ಸ್ಥಾನ ನೀಡಲು ಅವಕಾಶವಿರುವ ಕಾರಣ ಕಾಯಂ ನಾಯಕ ರಿಕಿ ಪಾಂಟಿಂಗ್ ಅವರನ್ನು ನೈಟ್ ರೈಡರ್ಸ್ ವಿರುದ್ಧದ ಪಂದ್ಯದಿಂದ ಕೈ ಬಿಡಲಾಗಿತ್ತು' ಎಂದು ಬುಧವಾರದ ಪಂದ್ಯದಲ್ಲಿ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮ ಹೇಳಿದರು. ಪಾಂಟಿಂಗ್ ಐದು ಇನಿಂಗ್ಸ್‌ಗಳಿಂದ ಒಟ್ಟು 52 ರನ್ ಮಾತ್ರ ಗಳಿಸಿದ್ದಾರೆ. ಡೇರ್‌ಡೆವಿಲ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲೂ ಅವರು ಉತ್ತಮ ಪ್ರದರ್ಶನ ನೀಡಿರಲಿಲ್ಲ.

ಮುಂದಿನ ಸುತ್ತು ಪ್ರವೇಶಿಸಲು ಈ ಗೆಲುವು ಅಗತ್ಯವಿತ್ತು. ಈ ಗೆಲುವು ತೃಪ್ತಿ ನೀಡಿದೆ ಎಂದ ಶರ್ಮ ಅವರು, ಸ್ಮಿತ್ ಬ್ಯಾಟಿಂಗ್ ಬಗ್ಗೆ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.