ADVERTISEMENT

ಕುತೂಹಲ ಮೂಡಿಸಿದ ವಿಶ್ವ ಚೆಸ್ ಚಾಂಪಿಯನ್‌ಷಿಪ್:ಒತ್ತಡದಲ್ಲಿ ಸಿಲುಕಿರುವ ಆನಂದ್-ಗೆಲ್ಫಾಂಡ್

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST

ಮಾಸ್ಕೊ (ಪಿಟಿಐ): ಭಾರತದ ವಿಶ್ವನಾಥನ್ ಆನಂದ್ ಹಾಗೂ ಇಸ್ರೇಲ್‌ನ ಬೋರಿಸ್ ಗೆಲ್ಫಾಂಡ್ ನಡುವೆ ಇಲ್ಲಿ ನಡೆಯುತ್ತಿರುವ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಕೇವಲ ಎರಡು ಸುತ್ತುಗಳ ಆಟ ಬಾಕಿ ಉಳಿದಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಟ್ರೆತ್ಯಾಕೋವ್ ಗ್ಯಾಲರಿಯಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಈಗಾಗಲೇ ಹತ್ತು ಸುತ್ತುಗಳ ಆಟ ಕೊನೆಗೊಂಡಿದೆ. ಉಭಯ ಆಟಗಾರರು ಈಗ 5-5ರಲ್ಲಿ ಸಮಬಲ ಹೊಂದಿದ್ದಾರೆ. ಎಂಟು ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದೆ. ಉಭಯ ಆಟಗಾರರು ತಲಾ ಒಂದು ಪಂದ್ಯ ಗೆದ್ದಿದ್ದಾರೆ.

ಶನಿವಾರ ನಡೆಯಲಿರುವ 11ನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆನಂದ್ ಕಪ್ಪು ಕಾಯಿಗಳಿಂದ ಆಡಲಿದ್ದಾರೆ. 12ನೇ ಹಾಗೂ ಕೊನೆಯ ಪಂದ್ಯವನ್ನು ತಮ್ಮ ಫೇವರಿಟ್ ಬಿಳಿ ಕಾಯಿಗಳಿಂದ ಸೆಣಸಲಿದ್ದಾರೆ. ಹಾಗಾಗಿ 11ನೇ ಪಂದ್ಯ ಡ್ರಾ ಮಾಡಿಕೊಂಡರೆ ಆನಂದ್‌ಗೆ ಅವಕಾಶವಿದೆ. ಆದರೆ ಉಭಯ ಆಟಗಾರರು ಒತ್ತಡದಲ್ಲಿರುವುದು ನಿಜ. ಏಕೆಂದರೆ ಒಂದು ಕೆಟ್ಟ ನಡೆ ಚಾಂಪಿಯನ್ ಪಟ್ಟಕ್ಕೆ ಕುತ್ತು ತರಲಿದೆ.

ಅಕಸ್ಮಾತ್ 12 ಪಂದ್ಯಗಳ ಅಂತ್ಯಕ್ಕೆ ಸಮಬಲ ಸಾಧಿಸಿದರೆ ಟೈಬ್ರೇಕರ್ ಮೊರೆ ಹೋಗಲಾಗುವುದು. ಇದು 13.5 ಕೋಟಿ ರೂ. ಮೊತ್ತದ ಬಹುಮಾನದ ಚಾಂಪಿಯನ್‌ಷಿಪ್ ಆಗಿದೆ. ಚಾಂಪಿಯನ್ ಆದವರು ಶೇ.60ರಷ್ಟು ಹಣ ಪಡೆಯಲಿದ್ದಾರೆ. ಆದರೆ ಚಾಂಪಿಯನ್‌ಷಿಪ್ ಟೈಬ್ರೇಕರ್ ಹಂತ ತಲುಪಿದರೆ ಬಹುಮಾನ ಹಣದಲ್ಲಿ ಕಡಿತವಾಗಲಿದೆ.

2006ರಲ್ಲಿ ನಡೆದ ರಷ್ಯಾದ ವ್ಲಾಡಿಮಿರ್ ಕ್ರಾಮ್ನಿಕ್ ಹಾಗೂ ಬಲ್ಗೇರಿಯಾದ ವೆಸೆಲಿನ್ ಟೊಪಲೊವ್ ನಡುವಿನ ವಿಶ್ವ ಚಾಂಪಿಯನ್‌ಷಿಪ್ ಟೈಬ್ರೇಕರ್ ಹಂತ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.