ADVERTISEMENT

ಕುಸ್ತಿ: ಚಿನ್ನಕ್ಕೆ ಮುತ್ತಿಕ್ಕಿದ ಬಜರಂಗ್‌, ಬೆಳ್ಳಿ ಗೆದ್ದ ಪೂಜಾ

ಪಿಟಿಐ
Published 13 ಏಪ್ರಿಲ್ 2018, 20:17 IST
Last Updated 13 ಏಪ್ರಿಲ್ 2018, 20:17 IST
ಕ್ವಾರ್ಟರ್‌ ಫೈನಲ್‌ನಲ್ಲಿ ನೈಜೀರಿಯಾದ ಅಮಾಸ್‌ ಡೇನಿಯಲ್‌ ಅವರನ್ನು ಭಾರತದ ಬಜರಂಗ್ ಪೂನಿಯಾ ಕೆಳಕ್ಕೆ ಎತ್ತಿಹಾಕಿದರು ಪಿಟಿಐ ಚಿತ್ರ
ಕ್ವಾರ್ಟರ್‌ ಫೈನಲ್‌ನಲ್ಲಿ ನೈಜೀರಿಯಾದ ಅಮಾಸ್‌ ಡೇನಿಯಲ್‌ ಅವರನ್ನು ಭಾರತದ ಬಜರಂಗ್ ಪೂನಿಯಾ ಕೆಳಕ್ಕೆ ಎತ್ತಿಹಾಕಿದರು ಪಿಟಿಐ ಚಿತ್ರ   

ಗೋಲ್ಡ್‌ ಕೋಸ್ಟ್‌: ಭಾರತದ ಬಜರಂಗ್‌ ಪೂನಿಯಾ, ಕಾಮನ್‌ವೆಲ್ತ್‌ ಕ್ರೀಡಾಕೂಟದ ಕುಸ್ತಿಯಲ್ಲಿ ಚಿನ್ನಕ್ಕೆ ಮುತ್ತಿಕ್ಕಿದರು.

ಪುರುಷರ 65 ಕೆ.ಜಿ. ಫ್ರೀಸ್ಟೈಲ್‌ ವಿಭಾಗದ ಫೈನಲ್‌ನಲ್ಲಿ ಬಜರಂಗ್‌ 10–0ರಿಂದ ವೇಲ್ಸ್‌ನ ಕೇನ್‌ ಚಾರಿಗ್‌ ಅವರನ್ನು ಪರಾಭವಗೊಳಿಸಿದರು.

ಬಜರಂಗ್‌ ಅವರು ಟೆಕ್ನಿಕಲ್‌ ಪಾಯಿಂಟ್ಸ್‌ಗಳ ಮೂಲಕ ಎದುರಾಳಿಯ ಸವಾಲು ಮೀರಿದರು. ಈ ಮೂಲಕ ಕಾಮನ್‌ವೆಲ್ತ್‌ನಲ್ಲಿ ಚೊಚ್ಚಲ ಚಿನ್ನ ಗೆದ್ದ ಸಾಧನೆ ಮಾಡಿದರು.

ADVERTISEMENT

ಮೊದಲ ಸುತ್ತಿನಲ್ಲಿ ಬಜರಂಗ್‌ 10–0ರಿಂದ ನ್ಯೂಜಿಲೆಂಡ್‌ನ ಬ್ರಹಾಮ್‌ ರಿಚರ್ಡ್ಸ್‌ ಅವರನ್ನು ಸೋಲಿಸಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ 10–0ರಿಂದ ನೈಜೀರಿಯಾದ ಅಮಾಸ್‌ ಡೇನಿಯಲ್ ವಿರುದ್ಧ ಗೆದ್ದಿದ್ದ ಭಾರತದ ‍ಪೈಲ್ವಾನ, ನಾಲ್ಕರ ಘಟ್ಟದ ಹೋರಾಟದಲ್ಲಿ ಕೆನಡಾದ ವಿನ್ಸೆಂಟ್‌ ಡಿ ಮರಿನಿಸ್‌ ಅವರನ್ನು ಪರಾಭವಗೊಳಿಸಿದ್ದರು.

ಪೂಜಾಗೆ ಬೆಳ್ಳಿ: ಮಹಿಳೆಯರ 57 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಅಖಾಡಕ್ಕಿಳಿದಿದ್ದ ಪೂಜಾ ಧಂಡ ಬೆಳ್ಳಿಯ ಸಾಧನೆ ಮಾಡಿದರು.

ಫೈನಲ್‌ ಹೋರಾಟದಲ್ಲಿ ಪೂಜಾ 5–7ರಿಂದ ನೈಜೀರಿಯಾದ ಒಡುನಾಯೊ ಅಡೆಕುವೊರೆಯೆ ವಿರುದ್ಧ ಸೋತರು.

ಮೊದಲ ಸುತ್ತಿನಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಲು ವಿಫಲವಾದ ಪೂಜಾ, ಎರಡನೆ ಸುತ್ತಿನಲ್ಲಿ ಮೋಡಿ ಮಾಡಿ ನಾಲ್ಕು ಪಾಯಿಂಟ್ಸ್‌ ಸಂಗ್ರಹಿಸಿದರು. ಹೀಗಿದ್ದರೂ ಅವರಿಗೆ ಎದುರಾಳಿಯ ಸವಾಲು ಮೀರಿ ನಿಲ್ಲಲು ಸಾಧ್ಯವಾಗಲಿಲ್ಲ.

ಪುರುಷರ 97 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ನಲ್ಲಿ ಸ್ಪರ್ಧಿಸಿದ್ದ ಮೌಸಮ್‌ ಖತ್ರಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು.

ಫೈನಲ್‌ನಲ್ಲಿ ಮೌಸಮ್‌ 2–12‍ಪಾಯಿಂಟ್ಸ್‌ನಿಂದ ದಕ್ಷಿಣ ಆಫ್ರಿಕಾದ ಮಾರ್ಟಿನ್‌ ಎರಾಸ್ಮಸ್‌ ವಿರುದ್ಧ ಪರಾಭವಗೊಂಡರು.

ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಸಾಧನೆ ಮಾಡಿದ್ದ ಮೌಸಮ್‌, ಮೊದಲ ಬಾರಿಗೆ ಕಾಮನ್‌ವೆಲ್ತ್‌ನಲ್ಲಿ ಅಖಾಡಕ್ಕಿಳಿದಿದ್ದರು.

ಮಹಿಳೆಯರ 68 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ನಲ್ಲಿ ಭಾರತದ ದಿವ್ಯಾ ಕಕ್ರಾನ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಕಂಚಿನ ಪದಕದ ಹೋರಾಟದಲ್ಲಿ ದಿವ್ಯಾ 4–0ರಲ್ಲಿ ಬಾಂಗ್ಲಾದೇಶದ ಶೆರಿನ್‌ ಸುಲ್ತಾನ ಅವರನ್ನು ಸೋಲಿಸಿದ್ದರು.

ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ದಿವ್ಯಾ, ನೈಜೀರಿಯಾದ ಬ್ಲೆಸ್ಸಿಂಗ್‌ ಒಬೊರುಡುಡು ಎದುರು ಮಣಿದಿದ್ದರು.

(ಭಾರತದ ಪೂಜಾ ಧಂಡ (ನೀಲಿ ಪೋಷಾಕು) ಮತ್ತು ಒಡುನಾಯೊ ಅಡೆಕುವೊರೆಯೆ ನಡುವಣ ಪೈಪೋಟಿ ‍–ಪಿಟಿಐ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.