ADVERTISEMENT

ಕ್ರಿಕೆಟ್: ಅಗ್ರಪಟ್ಟ ಉಳಿಸಿಕೊಳ್ಳುವ ಸವಾಲು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2011, 19:30 IST
Last Updated 9 ಆಗಸ್ಟ್ 2011, 19:30 IST
ಕ್ರಿಕೆಟ್: ಅಗ್ರಪಟ್ಟ ಉಳಿಸಿಕೊಳ್ಳುವ ಸವಾಲು
ಕ್ರಿಕೆಟ್: ಅಗ್ರಪಟ್ಟ ಉಳಿಸಿಕೊಳ್ಳುವ ಸವಾಲು   

ಬರ್ಮಿಂಗ್‌ಹ್ಯಾಮ್: ಮುಂದುವರಿದಿರುವ ಹಿಂಸಾಚಾರ ದಿಂದ ಭಯದ ನೆರಳಲ್ಲಿದೆ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್. ಇಲ್ಲಿ ಹರಡಿರುವ ಆತಂಕದ ನಡುವೆ ಕ್ರಿಕೆಟ್ ಉತ್ಸಾಹ ಕುಗ್ಗಿ ಹೋಗುವ ಅಪಾಯವೂ ಎದುರಾಗಿದೆ.

ಬೆದರಿಕೆಯ ಬೆಂಕಿಯ ಬಿಸಿ ಇದ್ದರೂ, ಪೊಲೀಸ್ ಕಾವಲಿನ ಕೋಟೆಯ ನಡುವೆ ಆಟಕ್ಕೆ ವೇದಿಕೆ ಸಜ್ಜಾಗಿದೆ. ಒಂದೆಡೆ ಆತಿಥೇಯರು ವಿಶ್ವ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಪಟ್ಟ ಪಡೆಯಬೇಕೆನ್ನುವ ಉತ್ಸಾಹದಲ್ಲಿದ್ದಾರೆ. ಇನ್ನೊಂದೆಡೆ ಭಾರತವು ಮೊದಲ ಸ್ಥಾನ ಕಾಯ್ದುಕೊಳ್ಳುವ ಆಶಯದೊಂದಿಗೆ ಹೋರಾಡಲು ಸಜ್ಜಾಗಿದೆ.

ಸಮಸ್ಯೆಗಳು ಕಾಡುತ್ತಿದ್ದರೂ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗುವ ಛಲದೊಂದಿಗೆ ಮಹೇಂದ್ರ ಸಿಂಗ್ ದೋನಿ ಬಳಗವು ನಾಲ್ಕು ಪಂದ್ಯಗಳ ಸರಣಿಯ ಮೂರನೇ ಹಣಾಹಣಿಯಲ್ಲಿ ಪುಟಿದೇಳುವ ಆಸೆಯ ಎಳೆ ಹಿಡಿದು ನಿಂತಿದೆ. ಪ್ರವಾಸಿಗಳು ಇಂಗ್ಲೆಂಡ್‌ಗೆ ತಿರುಗೇಟು ನೀಡುತ್ತಾರೆನ್ನುವ ಭರವಸೆಯಂತೂ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಮೂಡಿಲ್ಲ. ಆದರೂ ಅಚ್ಚರಿ ನಡೆದರೂ ನಡೆಯಬಹುದೆಂದು ಲೆಕ್ಕಾಚಾರ ಮಾತ್ರ ಬಿಟ್ಟಿಲ್ಲ.

ಇಂಗ್ಲೆಂಡ್ ಈಗಾಗಲೇ 2-0ಯಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇದೇ ಆತಂಕಕ್ಕೆ ಕಾರಣ. ಇದೇ ಅಂತರವನ್ನು ಬಾಕಿ ಎರಡು ಪಂದ್ಯಗಳ ನಂತರ ಕಾಯ್ದುಕೊಂಡರೂ ಸಾಕು. ಆಗ ಅದಕ್ಕೆ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ. ಭಾರತದ ಪಾಲಿಗೆ ಭಾರಿ ನಿರಾಸೆ. ಇಂಥ ಪರಿಸ್ಥಿತಿ ಎದುರಾಗಬಾರದು. ಅದಕ್ಕಾಗಿ ಭಾರತ ಮೂರನೇ ಟೆಸ್ಟ್‌ನಲ್ಲಿ ವಿಜಯ ಸಾಧಿಸಲೇಬೇಕು. ಆನಂತರ ಕೊನೆಯ ಪಂದ್ಯದ ಮೇಲೆ ಹಿಡಿತ ಸಾಧಿಸುವ ಯೋಚನೆ.

ಆದರೆ ಕಾಗದದ ಮೇಲೆ ಲೆಕ್ಕಾಚಾರ ಮಾಡಿದಷ್ಟು ಎಲ್ಲವೂ ಸುಲಭವಲ್ಲ. `ಮಹಿ~ ಪಡೆಯ ಸುತ್ತ ಸಾಕಷ್ಟು ಸಮಸ್ಯೆಗಳು ಸುತ್ತಿಕೊಂಡಿವೆ. ಮೊದಲ ಎರಡು ಪಂದ್ಯಗಳಲ್ಲಿನ ನಿರಾಸೆಯಿಂದ ಒತ್ತಡವೂ ಹೆಚ್ಚಿದೆ. ಈಗ ಅದ್ಭುತವಾದ ಆಟವೊಂದೇ ಪುಟಿದೇಳಲು ಇರುವ ಪರಿಹಾರ ಮಾರ್ಗ. ಎಜ್‌ಬಾಸ್ಟನ್ ಅಂಗಳದಲ್ಲಿ ಬುಧವಾರ ಆರಂಭವಾಗಲಿರುವ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗವು ಚೇತರಿಕೆ ಕಾಣಬೇಕು. ಇಲ್ಲದಿದ್ದರೆ ಮತ್ತೊಂದು ಸೋಲಿನ ತೂಗುಗತ್ತಿ ನೆತ್ತಿಯ ಮೇಲೆ ಪ್ರತ್ಯಕ್ಷವಾಗುತ್ತದೆ.

ಆ್ಯಂಡ್ರ್ಯೂ ಸ್ಟ್ರಾಸ್ ನೇತೃತ್ವದ ತಂಡವು ಮಾತ್ರ ನಿರಾತಂಕವಾಗಿದೆ. ಅದು ಸರಣಿಯ ಬಾಕಿ ಎರಡರಲ್ಲಿ ಒಂದನ್ನು ಗೆಲ್ಲಬೇಕು ಇಲ್ಲವೆ ಎರಡನ್ನೂ ಡ್ರಾ ಮಾಡಿಕೊಳ್ಳಬೇಕು. ಅಷ್ಟು ಮಾಡಿದರೆ ಸಾಕು ಅದು ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರುತ್ತದೆ. ಆದ್ದರಿಂದಲೇ ಭಾರತಕ್ಕೆ ಭಯ ಕಾಡುತ್ತಿದೆ.

ದೋನಿ ನಾಯಕತ್ವದ ತಂಡಕ್ಕೆ `ಡ್ರಾ~ ಪರಿಹಾರವೇ ಅಲ್ಲ. ಅದು ಕೊನೆಯ ಎರಡು ಪಂದ್ಯಗಳನ್ನು ಗೆಲ್ಲುವುದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ. ಇಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿರುವಾಗಲೇ ಗಾಯಾಳುಗಳ ಸಮಸ್ಯೆಯೂ ಭಯಾನಕವಾಗಿ ಬೆಳೆದು ನಿಂತಿದೆ.

ಸ್ನಾಯು ಸೆಳೆತದ ತೊಂದರೆಯಿಂದ ವೇಗಿ ಜಹೀರ್ ಖಾನ್ ಸಂಪೂರ್ಣ ಸರಣಿಗೆ ಲಭ್ಯವಿಲ್ಲ. ಆದ್ದರಿಂದ ಬೌಲಿಂಗ್ ವಿಭಾಗದ ಬಲವೇ ಕುಗ್ಗಿದಂತಾಗಿದೆ. ಈಗ ಲಭ್ಯವಿರುವ ಬೌಲಿಂಗ್ ಶಕ್ತಿಯನ್ನು ಇಂಗ್ಲೆಂಡ್ ವಿರುದ್ಧ ಪ್ರಯೋಗಿಸಿ ಯಶಸ್ಸು ಪಡೆಯಬೇಕು. ಹಾಗೆ ಮಾಡುವುದು ಸುಲಭ ಸಾಧ್ಯವಂತೂ ಅಲ್ಲ. ಇನ್ನೊಂದೆಡೆ ಇಂಗ್ಲೆಂಡ್ ವೇಗಿಗಳ ವಿರುದ್ಧ ಬ್ಯಾಟಿಂಗ್ ಕ್ರಮಾಂಕವು ಬಲವಾಗಿ ಉಳಿಯುವಂತೆ ಮಾಡಬೇಕು. ಅದು ಇನ್ನೊಂದು ಸವಾಲು.

ಅನುಭವಿ ಸ್ಪಿನ್ ಬೌಲರ್ ಹರಭಜನ್ ಸಿಂಗ್ ಅನುಪಸ್ಥಿತಿಯಲ್ಲಿ ಬೌಲಿಂಗ್ ದಾಳಿಯನ್ನು ಹೊಂದಿಸುವ ಕಸರತ್ತು ನಡೆದಿದೆ. ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದಂತೂ ಖಚಿತ. ವೇಗದ ದಾಳಿಯ ಹೊಣೆಯನ್ನು ಇಶಾಂತ್ ಶರ್ಮ, ಪ್ರವೀಣ್ ಕುಮಾರ್ ಹಾಗೂ ಮುನಾಫ್ ಪಟೇಲ್‌ಗೆ ಒಪ್ಪಿಸುವುದರಲ್ಲಿಯೂ ಅನುಮಾನವಿಲ್ಲ.

ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಇನಿಂಗ್ಸ್ ಶುರುವಿನಲ್ಲಿಯೇ ತಂಡಕ್ಕೆ ಬಲ ನೀಡಲು ಸಜ್ಜಾಗಿದ್ದಾರೆ. ಆರಂಭಿಕ ಜೋಡಿಯಾಗಿ ಗೌತಮ್ ಮತ್ತು ವೀರೂ 59.18ರ ಸರಾಸರಿಯಲ್ಲಿ 3551 ರನ್ ಗಳಿಸಿದ ಉತ್ತಮ ಹಿನ್ನೆಲೆ ಹೊಂದಿದ್ದಾರೆ. ಆದ್ದರಿಂದ ಇಂಗ್ಲೆಂಡ್ ವಿರುದ್ಧದ ಸರಣಿಯ ಮಹತ್ವದ ಈ ಘಟ್ಟದಲ್ಲಿ ಇವರಿಬ್ಬರ ಪಾತ್ರ ಮಹತ್ವದ್ದಾಗಿದೆ. ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಮೇಲಿನ ನಿರೀಕ್ಷೆಯ ಭಾರವನ್ನು ನಿಭಾಯಿಸಿದರೆ ಭಾರತದ ಕಷ್ಟ ಕರಗಿ ಹೋಗಬಹುದು.

ತಂಡಗಳು
ಭಾರತ:
ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ಅಭಿನವ್ ಮುಕುಂದ್, ಅಭಿನವ್ ಮುಕುಂದ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿ.ವಿ.ಎಸ್.ಲಕ್ಷ್ಮಣ್, ಸುರೇಶ್ ರೈನಾ, ಪ್ರಗ್ಯಾನ್ ಓಜಾ, ಪ್ರವೀಣ್ ಕುಮಾರ್, ಆರ್.ಪಿ.ಸಿಂಗ್, ಇಶಾಂತ್ ಶರ್ಮ, ಅಮಿತ್ ಮಿಶ್ರಾ, ಮುನಾಫ್ ಪಟೇಲ್, ವೃದ್ಧಿಮಾನ್ ಸಹಾ ಮತ್ತು ಎಸ್.ಶ್ರೀಶಾಂತ್.

ಇಂಗ್ಲೆಂಡ್: ಆ್ಯಂಡ್ರ್ಯೂ ಸ್ಟ್ರಾಸ್ (ನಾಯಕ), ಆಲಿಸ್ಟರ್ ಕುಕ್, ಜೋನಾಥನ್ ಟ್ರಾಟ್, ಕೆವಿನ್ ಪೀಟರ್ಸನ್, ಇಯಾನ್ ಬೆಲ್, ಎಯೊನ್ ಮಾರ್ಗನ್, ಮ್ಯಾಟ್ ಪ್ರಿಯೊರ್,   ಸ್ಟುವರ್ಟ್ ಬ್ರಾಡ್, ಗ್ರೇಮ್ ಸ್ವಾನ್, ಜೇಮ್ಸ ಆ್ಯಂಡರ್ಸನ್, ಕ್ರಿಸ್ ಟ್ರೆಮ್ಲೆಟ್ ಮತ್ತು ಟಿಮ್ ಬ್ರೆಸ್ನನ್.

ಮೊದಲ ದಿನದಾಟ ಆರಂಭ (ಭಾರತೀಯ ಕಾಲಮಾನ): ಮಧ್ಯಾಹ್ನ 3.30ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.