ADVERTISEMENT

ಕ್ರಿಕೆಟ್; ಆರ್‌ಐಟಿ ಜಯಭೇರಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST
ಕ್ರಿಕೆಟ್; ಆರ್‌ಐಟಿ ಜಯಭೇರಿ
ಕ್ರಿಕೆಟ್; ಆರ್‌ಐಟಿ ಜಯಭೇರಿ   

ಬೆಂಗಳೂರು: ಪೃಥ್ವಿ ಸಿಂಗ್ ತೋರಿದ ಆಲ್‌ರೌಂಡ್ ಆಟದ ನೆರವಿನಿಂದ ರೇವಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಆರ್‌ಐಟಿ) ತಂಡದವರು ಜೈನ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಇಲ್ಲಿ ಆರಂಭವಾದ ಚೊಚ್ಚಲ ಕಾಲೇಜ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮಂಗಳೂರಿನ ಎಸ್‌ಡಿಎಂ ಕಾಲೇಜು ವಿರುದ್ಧದ ಪಂದ್ಯದಲ್ಲಿ  ನಾಲ್ಕು ವಿಕೆಟ್‌ಗಳ ಭರ್ಜರಿ ಗೆಲುವು ಪಡೆದರು.


ಇಲ್ಲಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಐಟಿ ತಂಡ ಎಸ್‌ಡಿಎಂ ಕಾಲೇಜು ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಈ ತಂಡ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 116 ರನ್ ಗಳಿಸಿತು. ಮನೀಶ್ (18ಕ್ಕೆ3) ಹಾಗೂ ಪೃಥ್ವಿ (16ಕ್ಕೆ2) ವಿಕೆಟ್ ಕಬಳಿಸಿ ಎದುರಾಳಿ ತಂಡವನ್ನು ಬೇಗನೆ ಕಟ್ಟಿ ಹಾಕಿದರು. ಇದಕ್ಕುತ್ತರವಾಗಿ ಆರ್‌ಐಟಿ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಆರ್‌ಐಟಿ ಆರಂಭದಿಂದ ವೇಗವಾಗಿ ರನ್ ಗಳಿಸಿತು. ಮೊದಲ 50 ರನ್ ಗಳಿದಾಗ 7 ಓವರ್‌ಗಳಾಗಿದ್ದವು. ಆಗ ಎದುರಾಳಿ ತಂಡ ಬಿಗುವಿನ ಬೌಲಿಂಗ್ ಮಾಡಿತು. ಪೃಥ್ವಿ ಹಾಗೂ ಮನೀಶ್ ಜೊತೆಯಾಟದಲ್ಲಿ 51 ರನ್ ಗಳಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು.

ಸಂಕ್ಷಿಪ್ತ ಸ್ಕೋರು: ಎಸ್‌ಡಿಎಂ ಕಾಲೇಜ್, ಮಂಗಳೂರು: 19.5 ಓವರ್‌ಗಳಲ್ಲಿ 116 (ಮನೀಶ್ 18ಕ್ಕೆ3, ಪೃಥ್ವಿ 16ಕ್ಕೆ2). ರೇವಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 117 (ಪೃಥ್ವಿ 36, ಸುಧಾನ್ಶು 26; ತಿಲಕ್ 18ಕ್ಕೆ3). ರೇವಾ ಇನ್ಸಿಟ್ಯೂಟ್‌ಗೆ 4 ವಿಕೆಟ್ ಜಯ.

ಮಾರ‌್ವಾರಿ ಕಾಲೇಜ್ ಜಾರ್ಖಂಡ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 117 (ರೋನಕ್ 32; ರಾಜಾ ರವಿ 20ಕ್ಕೆ4, ಶ್ರೀಕಾಂತ್ 18ಕ್ಕೆ2), ಎಸ್‌ಬಿಎಂಜೆಸಿಇ ಕಾಲೇಜ್: 19.1 ಓವರ್‌ಗಳಲ್ಲಿ 5 ವಿಕೆಟ್‌ಗೆ 118 (ಅಭಿಷೇಕ್ 33, ರವಿ ರಾಜ್ 26). ಎಸ್‌ಬಿಎಂಜೆಸಿಇ ತಂಡಕ್ಕೆ 5 ವಿಕೆಟ್ ಗೆಲುವು.

ಅಮೃತ ಇನ್ಸಿಟ್ಯೂಟ್, ಬೆಂಗಳೂರು: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 171. (ವರುಣ್ 41, ಸಂತೋಷ್ 37; ಗೋವಿಂದ್ 32ಕ್ಕೆ2). ಶೇಷಾದ್ರಿಪುರಂ ಕಾಲೇಜ್: 19 ಓವರ್‌ಗಳಲ್ಲಿ 149. (ಪವನ್ 31, ವಿಶ್ವಾಸ್ 29; ಅಶೋಕ್ ಕುಮಾರ್ 34ಕ್ಕೆ4). ಅಮೃತ ಇನ್ಸಿಟ್ಯೂಟ್‌ಗೆ 22 ರನ್  ವಿಜಯ.

ಜಾಧವಪುರ ವಿಶ್ವವಿದ್ಯಾಲಯ, ಕೋಲ್ಕತ್ತ: 19 ಓವರ್‌ಗಳಲ್ಲಿ 100 (ನಬ್ಯಾಂಡು 28; ಅಶ್ವಿನ್ 23ಕ್ಕೆ2, ಅವಿಕರಣ್ 11ಕ್ಕೆ2). ಲೊಯೊಲಾ ಕಾಲೇಜ್, ಚೆನ್ನೈ: 13.5 ಓವರ್‌ಗಳಲ್ಲಿ 4 ವಿಕೆಟ್‌ಗೆ 104 (ಮುರಳಿ 33). ಲೊಯಾಲಾ ಕಾಲೇಜ್‌ಗೆ ಆರು ವಿಕೆಟ್ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT