ADVERTISEMENT

ಕ್ರಿಕೆಟ್: ಆಸ್ಟ್ರೇಲಿಯಾ ಸುಸ್ಥಿತಿ; ಭಾರತ ಸುಸ್ತು

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಅಡಿಲೇಡ್: ಆರಂಭದಲ್ಲೊಂದಿಷ್ಟು ಉತ್ಸಾಹ. ಆನಂತರ ಉಸ್ಸೆಂದು ಉಸಿರುಬಿಡುವ ಸ್ಥಿತಿ ಭಾರತದ್ದು. ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಮಾತ್ರ ಯಥಾ ಪ್ರಕಾರ ಸುಸ್ಥಿತಿ.

`ವೀರೂ~ ನಾಯಕತ್ವದಲ್ಲಿ ಅದ್ಭುತ ನಡೆಯುವುದೆನ್ನು ಉತ್ಸಾಹದ ಮೇಲೆ ಮೊದಲ ದಿನವೇ ತಣ್ಣೀರು. ಇನ್ನೇನು ಮತ್ತೊಂದು ಸೋಲಿನ ಕಣ್ಣೀರು ಎನ್ನುವ ಭಯ ಈಗಲೇ ಕಾಡತೊಡಗಿದೆ. ಅದಕ್ಕೆ ಕಾರಣ ಕಾಂಗರೂಗಳ ನಾಡಿನವರು `ಬಾರ್ಡರ್-ಗಾವಸ್ಕರ್ ಟ್ರೋಫಿ~ಯ ನಾಲ್ಕನೇ ಟೆಸ್ಟ್‌ನಲ್ಲಿ ಆರಂಭದ ಆಘಾತದಿಂದ ಹೊರಬಂದು ದೊಡ್ಡ ಇನಿಂಗ್ಸ್ ಕಟ್ಟುವ ಛಲ ತೋರಿದ್ದು. ಮಂಗಳವಾರದ ಆಟಕ್ಕೆ ತೆರೆ ಬೀಳುವ ಹೊತ್ತಿಗಾಗಲೇ ಆಸ್ಟ್ರೇಲಿಯಾದ ಒಟ್ಟು ಮೊತ್ತ 3 ವಿಕೆಟ್ ನಷ್ಟಕ್ಕೆ 335 ರನ್.

ಕೊನೆಯೊಂದು ಪಂದ್ಯದಲ್ಲಿಯಾದರೂ ಗೆಲ್ಲಬೇಕೆನ್ನುವ ಕನಸು ಕಂಡಿರುವ ವೀರೇಂದ್ರ ಸೆಹ್ವಾಗ್ ನೇತೃತ್ವದ ತಂಡದ ಬೌಲರ್‌ಗಳು ಈಗಾಗಲೇ ಸುಸ್ತಾಗಿದ್ದಾರೆ. ಮೂರು ವಿಕೆಟ್‌ಗಳನ್ನು ಬೇಗ ಕಬಳಿಸಿದ ಸಂತಸವೂ ಕರಗಿ ಹೋಗಿದೆ. ನಾಲ್ಕನೇ ವಿಕೆಟ್ ಜೊತೆಯಾಟ ಮುರಿಯುವ ಕಸರತ್ತು ಇಪ್ಪತ್ತಾರನೇ ಓವರ್‌ನಿಂದ ಆರಂಭವಾಗಿದ್ದು; ತೊಂಬತ್ತನೇ ಓವರ್ ಮುಗಿದರೂ ಕೊನೆಗೊಳ್ಳಲಿಲ್ಲ.

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ (137; 254 ಎಸೆತ, 13 ಬೌಂಡರಿ) ಹಾಗೂ ಹಾಲಿ ನಾಯಕ ಮೈಕಲ್ ಕ್ಲಾರ್ಕ್ (140; 188 ಎ., 19 ಬೌಂಡರಿ, 1 ಸಿಕ್ಸರ್) ಅವರು ಕ್ರೀಸ್‌ನಲ್ಲಿ ಗಟ್ಟಿ. ಜೊತೆಯಾಗಿ ಈಗಾಗಲೇ 251 (385 ಎ.) ರನ್ ಕಲೆಹಾಕಿದ್ದಾರೆ. ಲಯ ತಪ್ಪದ ಆಟವಾಡಿದ ಈ ಬ್ಯಾಟ್ಸ್‌ಮನ್‌ಗಳು ಸ್ವಲ್ಪ ಗೌರವ ತೋರಿದ್ದು ಇಶಾಂತ್ ಶರ್ಮ ಹಾಗೂ ರವಿಚಂದ್ರನ್ ಅಶ್ವಿನ್‌ಗೆ.

ಸೆಹ್ವಾಗ್ ನಾಲ್ಕನೇ ಓವರ್‌ನಲ್ಲಿಯೇ ವೇಗಿ ಉಮೇಶ್ ಯಾದವ್ ಅವರನ್ನು ಬದಲಿಸಿ ಅಶ್ವಿನ್ ಕೈಗೆ ಚೆಂಡನ್ನು ಇತ್ತಾಗ ಆಸ್ಟ್ರೇಲಿಯಾಕ್ಕೆ ಬಿಸಿ ತಟ್ಟಿತ್ತು. ಶಾನ್ ಮಾರ್ಷ್ ಬೌಲ್ಡ್ ಆದರೆ, ಎಡ್ ಕೋವನ್ ಬ್ಯಾಟ್‌ನಿಂದ ಸಿಡಿದ ಚೆಂಡನ್ನು ವಿ.ವಿ.ಎಸ್.ಲಕ್ಷ್ಮಣ್ ಹಿಡಿತಕ್ಕೆ ಪಡೆದಿದ್ದರು.
 
ಅದಕ್ಕೂ ಮೊದಲೇ ಮುಂಚೂಣಿಯ ವೇಗಿ ಜಹೀರ್ ಖಾನ್ ದಾಳಿಯಲ್ಲಿ ಡೇವಿಡ್ ವಾರ್ನರ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಸ್ಪಿನ್ ಹಾಗೂ ವೇಗದ ಹೊಂದಾಣಿಕೆಯು ಮುಂದೆಯೂ ಪ್ರಯೋಜನಕಾರಿ ಆಗುವುದೆನ್ನುವ ನಿರೀಕ್ಷೆ ಮಾತ್ರ ಬೇಗ ಹುಸಿ.

ಅಶ್ವಿನ್ ಸ್ಪಿನ್ ಮೋಡಿಯ ಪ್ರವಾಹದಲ್ಲಿ ಪಾಂಟಿಂಗ್ ಹಾಗೂ ಕ್ಲಾರ್ಕ್ ಕೊಚ್ಚಿಹೋಗಲಿಲ್ಲ. ತಮ್ಮ ನಾಡಿನ ಜನರು ಮೆಚ್ಚುವಂಥ ಆಟವಾಡಿದ `ಪಂಟರ್~ ಅಂತೂ ಭಾರತದ ಯುವ ಸ್ಪಿನ್ನರ್ ಅಟ್ಟಹಾಸವನ್ನು ಮೆಟ್ಟುವಂಥ ಹೊಡೆತಗಳನ್ನು ಪ್ರಯೋಗಿಸಿದರು. ಅವರು ಸ್ವಲ್ಪ ಎಚ್ಚರಿಕೆಯಿಂದ ಆಡಿದ್ದು ಮಾತ್ರ ಇಶಾಂತ್ ಎದುರು. ಚೆಂಡನ್ನು ಸಿಕ್ಸರ್‌ಗೆ ಎತ್ತಬೇಕು ಎನ್ನುವ ಆತುರ ತೋರದ ಅವರು ಮೊಣಕಾಲೂರಿ ಬ್ಯಾಟ್ ಮುಖವನ್ನು ಆಫ್‌ಸೈಡ್‌ಗೆ ತಿರುವಿ ಚೆಂಡನ್ನು ಎದುರಿಸಿದ್ದೇ ಹೆಚ್ಚು.
 
41ನೇ ಟೆಸ್ಟ್ ಶತಕ ಗಳಿಸಿದ ಪಾಂಟಿಂಗ್ ಸಹನೆಯ ಪ್ರತಿರೂಪವಾಗಿ ನಿಂತರು. ಆದರೆ ಕ್ಲಾರ್ಕ್ ಸ್ವಲ್ಪ ವೇಗವಾಗಿ ರನ್ ಗಳಿಸುವ ಪ್ರಯತ್ನ ಮಾಡಿದರು. ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲಬೇಕು; ರನ್‌ಗಳು ತಾವಾಗಿಯೇ ಬರುತ್ತವೆ ಎನ್ನುವ ತತ್ವವನ್ನು ಪಾಲಿಸಿದ ಇವರಿಬ್ಬರೂ ನಿರಾಸೆಗೊಳ್ಳಲಿಲ್ಲ. ನೂರರ ಗಡಿದಾಟಿಯೂ ನಿರಾತಂಕವಾಗಿ ಮುನ್ನುಗ್ಗಿದರು.

ಸಿಡ್ನಿ ಟೆಸ್ಟ್‌ನಲ್ಲಿ ಅಜೇಯ 329 ರನ್ ಗಳಿಸಿದ್ದ ಮೈಕಲ್ ಇಲ್ಲಿಯೂ ತಮ್ಮ ತಂಡಕ್ಕೆ ದೊಡ್ಡ ಮೊತ್ತದ ಕೊಡುಗೆ ನೀಡುವ ಹುಮ್ಮಸ್ಸು ತೋರಿದ್ದಾರೆ. ಇಲ್ಲಿ ಗಳಿಸಿದ್ದು ಅವರ 19ನೇ ಟೆಸ್ಟ್ ಶತಕ. ನಾಯಕತ್ವ ವಹಿಸಿಕೊಂಡ ನಂತರ ಆಡಿದ ಹನ್ನೆರಡು ಟೆಸ್ಟ್‌ಗಳಲ್ಲಿ ಖಾತೆಗೆ ಸೇರಿಸಿಕೊಂಡ ನಾಲ್ಕನೇ ಶತಕ ಇದೆನ್ನುವುದೂ ವಿಶೇಷ.

ಆರಂಭದ ಮೂವರು ಬ್ಯಾಟ್ಸ್‌ಮನ್‌ಗಳು ಬೇಗ ನಿರ್ಗಮಿಸಿದರೂ ಆಸ್ಟ್ರೇಲಿಯಾ ಚೇತರಿಸಿಕೊಂಡ ರೀತಿ ಮೆಚ್ಚುವಂಥದು. ಈ ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿರುವ ಶಾನ್ ಮಾರ್ಷ್ ತಮಗೆ ಹನ್ನೊಂದರ ಪಟ್ಟಿಯಲ್ಲಿ ಸ್ಥಾನ ಕೊಟ್ಟಿದ್ದನ್ನು ಸಮರ್ಥಿಸಿಕೊಳ್ಳಲಿಲ್ಲ. ಕೋವನ್ ಮತ್ತು ವಾರ್ನರ್ ಕೂಡ ಭದ್ರ ಬುನಾದಿ ಹಾಕಲಿಲ್ಲ.
 
ಇಂಥ ಪರಿಸ್ಥಿತಿಯಲ್ಲಿ ಆತಿಥೇಯ ತಂಡವು ಬೇಗ ಕುಸಿಯಬಹುದು ಎನ್ನುವ ಅನುಮಾನ ಕಾಡಿದ್ದು ಸಹಜ. ಇದೇ ಸಂದರ್ಭದಲ್ಲಿ ಸ್ಪಿನ್ ದಾಳಿಯಿಂದ ಒತ್ತಡ ಹೆಚ್ಚಿಸಬೇಕು ಎನ್ನುವ ಉದ್ದೇಶದಿಂದ ಪ್ರವಾಸಿ ತಂಡದ ನಾಯಕ ಸೆಹ್ವಾಗ್ ತಾವೇ ಬೌಲಿಂಗ್ ಮಾಡಿದರು. ಆದರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಂಥ ಸತ್ವಯುತ ಆಟವಾಡಿದರು ಕ್ಲಾರ್ಕ್ ಮತ್ತು ಪಾಂಟಿಂಗ್.

ಸ್ಕೋರ್ ವಿವರ:
ಆಸ್ಟ್ರೇಲಿಯಾ: 90 ಓವರುಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 335
ಎಡ್ ಕೋವನ್ ಸಿ ವಿ.ವಿ.ಎಸ್.ಲಕ್ಷ್ಮಣ್ ಬಿ ರವಿಚಂದ್ರನ್ ಅಶ್ವಿನ್  30
ಡೇವಿಡ್ ವಾರ್ನರ್ ಎಲ್‌ಬಿಡಬ್ಲ್ಯು ಬಿ ಜಹೀರ್ ಖಾನ್  08
ಶಾನ್ ಮಾರ್ಷ್ ಬಿ ರವಿಚಂದ್ರನ್ ಅಶ್ವಿನ್  03
ರಿಕಿ ಪಾಂಟಿಂಗ್ ಬ್ಯಾಟಿಂಗ್  137
ಮೈಕಲ್ ಕ್ಲಾರ್ಕ್ ಬ್ಯಾಟಿಂಗ್  140
ಇತರೆ: (ಲೆಗ್‌ಬೈ-11, ವೈಡ್-6) 17
ವಿಕೆಟ್ ಪತನ: 1-26 (ಡೇವಿಡ್ ವಾರ್ನರ್; 6.5), 2-31 (ಶಾನ್ ಮಾರ್ಷ್; 9.6), 3-84 (ಎಡ್ ಕೋವನ್; 25.5).
ಬೌಲಿಂಗ್: ಜಹೀರ್ ಖಾನ್ 18-2-52-1 (ವೈಡ್-1), ಉಮೇಶ್ ಯಾದವ್ 12-0-87-0 (ವೈಡ್-1), ರವಿಚಂದ್ರನ್ ಅಶ್ವಿನ್ 26-4-81-2, ಇಶಾಂತ್ ಶರ್ಮ 20-5-52-0, ವೀರೇಂದ್ರ ಸೆಹ್ವಾಗ್ 13-0-49-0, ವಿರಾಟ್ ಕೊಹ್ಲಿ 1-0-3-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.