ADVERTISEMENT

ಕ್ರಿಕೆಟ್: ಮಾನ ಕಾಪಾಡಿಕೊಳ್ಳಲು ಹೋರಾಟ!

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST
ಕ್ರಿಕೆಟ್: ಮಾನ ಕಾಪಾಡಿಕೊಳ್ಳಲು ಹೋರಾಟ!
ಕ್ರಿಕೆಟ್: ಮಾನ ಕಾಪಾಡಿಕೊಳ್ಳಲು ಹೋರಾಟ!   

ಅಡಿಲೇಡ್: ಕಷ್ಟಕೋಟಲೆಗಳನ್ನು ಒಡಲೊಳಗೆ ಕಟ್ಟಿಕೊಂಡಿರುವ ಭಾರತ ತಂಡದ ಈಗಿನ ಗುರಿ ಮಾನ ಕಾಪಾಡಿಕೊಳ್ಳುವುದು. ಸರಣಿ ಸೋತಾಗಿದೆ. ಆದರೂ ಸಮಾಧಾನ ಪಡುವುದಕ್ಕೊಂದು ಗೆಲುವು ಬೇಕು.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಕೊನೆಯ ಟೆಸ್ಟ್‌ನಲ್ಲಿ ಜಯದ ಕನಸಿನೊಂದಿಗೆ ಹೋರಾಟಕ್ಕೆ ಸಜ್ಜಾಗಿದೆ ಭಾರತ. ಮಹೇಂದ್ರ ಸಿಂಗ್ ದೋನಿ ಇಲ್ಲ. ವೀರೇಂದ್ರ ಸೆಹ್ವಾಗ್ ನಾಯಕ. ಇದೊಂದು ಮಹತ್ವದ ಘಟ್ಟ. `ವೀರೂ~ ಮುಂದಾಳುವಾಗಿ ನಿಲ್ಲಬೇಕೆಂದು ಬಯಸಿದ ಮನಸ್ಸುಗಳಿಗೆ ಕಾಲವೇ ಅವಕಾಶವೊಂದನ್ನು ತಂದುಕೊಟ್ಟಿದೆ. ಸಂಕಷ್ಟಗಳ ಪರಿಹಾರದ ಮಾರ್ಗದಲ್ಲಿ ಚೈತನ್ಯ ನೀಡುವ ಶಕ್ತಿಯಾಗಿ ನಿಲ್ಲುವರೆ ಸೆಹ್ವಾಗ್? ಉತ್ತರವೂ ಬಹುಬೇಗ ಸಿಗಲಿದೆ.

ಮಂಗಳವಾರ ಆರಂಭವಾಗುವ ಟೆಸ್ಟ್ ಒಂದೆಡೆ ಭಾರತದ ಬ್ಯಾಟಿಂಗ್ ಸತ್ವಪರೀಕ್ಷೆಯ ವೇದಿಕೆ. ಇನ್ನೊಂದೆಡೆ ವೀರೂ ನಾಯಕತ್ವವನ್ನು ಒರೆಗೆ ಹಚ್ಚಲಿರುವ ಪಂದ್ಯ. ದೋನಿ ಬೇಡ ಸೆಹ್ವಾಗ್ ಬೇಕೆಂದು ಡ್ರೆಸಿಂಗ್ ಕೋಣೆಯಲ್ಲಿ ಧ್ವನಿ ಎದ್ದಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ಕೆಲವು ದಿನಗಳ ಹಿಂದಷ್ಟೇ ಸದ್ದು ಮಾಡಿದ್ದವು. ಈಗ ದೋನಿ ತಂಡದಿಂದ ಹೊರಗೆ ಉಳಿಯುವಂಥ ಅನಿವಾರ್ಯ ಪರಿಸ್ಥಿತಿ. ಕಳೆದ ಟೆಸ್ಟ್‌ನಲ್ಲಿನ ಓವರ್ ಮಂದಗತಿಗಾಗಿ `ಮಹಿ~ ಒಂದು ಪಂದ್ಯದ ಮಟ್ಟಿಗೆ ನಿಷೇಧ ಶಿಕ್ಷೆ ಅನುಭವಿಸಿದ್ದಾರೆ.

ತಂಡದ ನೇತೃತ್ವದ ಹೊಣೆ ಹೊತ್ತು ನಿಂತಿರುವ ಸೆಹ್ವಾಗ್ ಮೇಲೆ ಎಲ್ಲರ ಗಮನ ಕೇಂದ್ರಿತವಾಗಿದೆ. ನಾಯಕತ್ವ ಬದಲಾದರೆ ಎಲ್ಲವೂ ಒಳಿತಾಗುತ್ತದೆ ಎನ್ನುವ ಭಾವನೆಯೇ ನಿಜ ಎನ್ನುವುದಾದರೆ; ಈ ಪಂದ್ಯದಲ್ಲಿ ಭಾರತದವರ ಪ್ರದರ್ಶನದಲ್ಲಿ ಭಾರಿ ಪ್ರಗತಿ ಸಾಧ್ಯವಾಗಬೇಕು. ಹಾಗೇ ಆದಲ್ಲಿ ಆಸೀಸ್ ವಿರುದ್ಧದ ನಾಲ್ಕನೇ      ಟೆಸ್ಟ್‌ನೊಂದಿಗೆಯೇ ಭಾರತ ತಂಡದಲ್ಲಿ ಭಾರಿ ಬದಲಾವಣೆಯ ಗಾಳಿ ಬೀಸುತ್ತದೆ. ಇಲ್ಲದಿದ್ದರೆ ಮತ್ತೆ ಯಥಾ ಪ್ರಕಾರ ಕಾಂಗರೂಗಳ ನಾಡಿನ ವೇಗದ ಅಂಗಳವನ್ನು ದೂರುವ ಕಾಯಕ!

ಆಸ್ಟ್ರೇಲಿಯಾಕ್ಕೆ ಬಂದಾಗಿನಿಂದ ಇಲ್ಲಿನ ಪಿಚ್‌ಗಳಲ್ಲಿ ಕೆಚ್ಚಿನಿಂದ ಬ್ಯಾಟಿಂಗ್ ಮಾಡುವಲ್ಲಿ ಭಾರತದವರು ವಿಫಲರಾಗಿದ್ದಾರೆ. ಹೊಸಬರು ಮಾತ್ರವಲ್ಲ ಅನುಭವಿಗಳೂ ಮುಗ್ಗರಿಸಿದ್ದಾರೆ. ಮತ್ತೊಮ್ಮೆ ಹಾಗೇ ಆಗಬಾರದು ಎನ್ನುವುದೇ ಭಾರತ ತಂಡದ ಬೆಂಬಲಿಗರ ಚಡಪಡಿಕೆ. ಪರ್ತ್‌ನ `ಡಬ್ಲ್ಯುಎಸಿಎ~ನಲ್ಲಿ ಇನಿಂಗ್ಸ್ ಹಾಗೂ 37 ರನ್‌ಗಳ ಹೀನಾಯ ಸೋಲಿನ ನಂತರ ಮನೋಬಲ ಕುಸಿದು ಹೋಗಿದೆ. ಮೇಲು ನೋಟಕ್ಕೆ ಆಟಗಾರರು ಇದನ್ನು ಒಪ್ಪಿಕೊಳ್ಳದಿದ್ದರೂ ಸಹನೀಯವಲ್ಲದ ಮೂರು ಟೆಸ್ಟ್ ಪರಾಭವದ ಕೆಂಡ ಉಡಿಯೊಳಗೇ ಇದೆ. ಒಂದಿಷ್ಟು ತಣ್ಣನೆಯ ಅನುಭವ ಆಗಬೇಕು. ಅದಕ್ಕೆ ಜಯದ ತಣ್ಣೀರು ಅಗತ್ಯ.

ಗೆಲುವಿನ ಕನಸು ಕಾಣುವುದಾದರೆ ಮೊದಲು ಬ್ಯಾಟಿಂಗ್‌ನಲ್ಲಿ ಸಹನೆ ತೋರುವುದು ಅಗತ್ಯ. ಮುಖ್ಯವಾಗಿ ಆರಂಭದ ಕ್ರಮಾಂಕದಲ್ಲಿ ಆಡುವ ಗೌತಮ್ ಗಂಭೀರ್ ಹಾಗೂ ಸೆಹ್ವಾಗ್ ಮೇಲೆ ಭಾರಿ ಜವಾಬ್ದಾರಿ. ಮೂರೂ ಟೆಸ್ಟ್‌ಗಳಲ್ಲಿ ಮೊದಲ ಕ್ರಮಾಂಕದಲ್ಲಿ ಭಾರತವು ಸತ್ವಯುತವಾಗಿ ಕಾಣಿಸಿಲ್ಲ. ಇನಿಂಗ್ಸ್ ಬುನಾದಿಯೇ ಭದ್ರವಾಗಿಲ್ಲದಾಗ ಅದರ ಮೇಲೆ ದೊಡ್ಡ ರನ್ ಮೊತ್ತದ ಗೋಪುರ ಕಟ್ಟುವುದು ಕಷ್ಟ. ಈ ಕೊರತೆಯನ್ನು ನೀಗಿಸಿಕೊಳ್ಳುವುದರೊಂದಿಗೆ ಚೇತರಿಕೆಯ ಮೊದಲ ಹೆಜ್ಜೆ ಇಟ್ಟರೆ ಮುಂದೆ ಎಲ್ಲವೂ ಸುಗಮ.

ಸಾಕಷ್ಟು ಟೀಕೆಗಳನ್ನು ಎದುರಿಸಿರುವ ಅನುಭವಿಗಳಾದ      ವಿ.ವಿ.ಎಸ್.ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ತಮ್ಮ ವಿರುದ್ಧ ಮಾತಾಡಿದವರಿಗೆ ಅಂಗಳದಲ್ಲಿಯೇ ಉತ್ತರ ನೀಡಿದರೆ         ಅದಕ್ಕಿಂತ ಸಂತಸ ಬೇರೊಂದಿಲ್ಲ. ಹಿಂದೆ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಆಟವಾಡಿರುವ ಈ ಬ್ಯಾಟ್ಸ್‌ಮನ್‌ಗಳು ಕೊನೆಯ         ಟೆಸ್ಟ್‌ನಲ್ಲಿಯಾದರೂ ಹಾಗೆ ರನ್‌ಗಳ ಹೊಳೆ ಹರಿಸಿದರೆ ಇಲ್ಲಿಯವರೆಗೆ ಅನುಭವಿಸಿದ ಅವಮಾನದ ಕೊಳೆಯನ್ನು ಸ್ವಲ್ಪವಾದರೂ ತೊಳೆಯಬಹುದು.

ತಮ್ಮ ತಂಡದ ಅನುಭವಿಗಳು ಕೂಡ ಬೆರಗಾಗಿ ನೋಡುವಂತೆ    ಪರ್ತ್ ಪಂದ್ಯದಲ್ಲಿ ಆಡಿದ್ದ ವಿರಾಟ್ ಕೊಹ್ಲಿ ಮೇಲಿನ ನಿರೀಕ್ಷೆ ಅಧಿಕವಾಗಿದೆ. ದೋನಿ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಹೊಣೆ ಹೊತ್ತುಕೊಳ್ಳಲಿರುವ ವೃದ್ಧಿಮಾನ್ ಸಹಾ ಬ್ಯಾಟ್‌ನಿಂದ ಹೆಚ್ಚು ರನ್‌ಗಳು ಹರಿದು ಬರುತ್ತವೆ ಎನ್ನುವುದೂ ಮಹತ್ವದ ಅಂಶ. ಭವಿಷ್ಯದಲ್ಲಿ ತಂಡ ಬಯಸಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗುವ ಸಂಕೇತವನ್ನು ಅಡಿಲೇಡ್ ಓವಲ್‌ನಲ್ಲಿಯೇ ನೀಡುವ ವಿಶ್ವಾಸವನ್ನಂತೂ ವೃದ್ಧಿಮಾನ್ ಹೊಂದಿದ್ದಾರೆ.

ವೇಗದ ಜೊತೆಗೆ ಸ್ಪಿನ್ ದಾಳಿಯನ್ನೂ ಹೊಂದಿಸಿಕೊಂಡು ಆಡುವ ಯೋಜನೆ ಹೊಂದಿರುವ ಭಾರತದ ಹನ್ನೊಂದರ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿ ಕೂಡ ನೆರವಾಗುವಂಥ ಅಶ್ವಿನ್‌ಗೆ ಅವಕಾಶ ನೀಡಲು `ವೀರೂ~ ಯೋಚನೆ ಮಾಡಿರುವುದೇ ಸರಿ. ಪರಿಣತ ವೇಗಿಗಳಲ್ಲಿ ಯಾರನ್ನು ಬದಿಗಿಟ್ಟು ಸ್ಪಿನ್ನರ್‌ಗೆ ಸ್ಥಾನ ನೀಡಲಾಗುತ್ತದೆ ಎನ್ನುವುದು ಮಾತ್ರ ಮಂಗಳವಾರ ಬೆಳಿಗ್ಗೆಯೇ ಸ್ಪಷ್ಟವಾಗಲಿದೆ.

ಆಸ್ಟ್ರೇಲಿಯಾದವರು ಯಥಾ ಪ್ರಕಾರ ಹನ್ನೊಂದು ಆಟಗಾರ ಪಟ್ಟಿಯನ್ನು ಪಂದ್ಯದ ಮುನ್ನಾದಿನವೇ ಸಿದ್ಧಪಡಿಸಿಟ್ಟಿದೆ. ಹೆಚ್ಚಿನ ಬದಲಾವಣೆಯೇನು ಇಲ್ಲ. ವೇಗಿ ಮೈಕಲ್ ಸ್ಟಾರ್ಕ್ ಬದಲಿಗೆ ಆಫ್ ಸ್ಪಿನ್ನರ್ ನಥಾನ್ ಲಿಯಾನ್‌ಗೆ ಅವಕಾಶ ಸಿಕ್ಕಿದೆ. ವೇಗದ ಬಲ ಹಾಗೂ ಬ್ಯಾಟಿಂಗ್ ಶಕ್ತಿಯಿಂದ ಮೊದಲ ಮೂರು ಪಂದ್ಯಗಳನ್ನು ಗೆದ್ದರುವ ಮೈಕಲ್ ಕ್ಲಾರ್ಕ್ ನೇತೃತ್ವದ ತಂಡವು 4-0ಯಲ್ಲಿ ಸರಣಿ ಜಯಿಸುವ ವಿಶ್ವಾಸ ಹೊಂದಿದೆ.
 

ತಂಡಗಳು
ಭಾರತ: ವೀರೇಂದ್ರ ಸೆಹ್ವಾಗ್ (ನಾಯಕ), ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿ.ವಿ.ಎಸ್.ಲಕ್ಷ್ಮಣ್, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ಜಹೀರ್ ಖಾನ್, ಇಶಾಂತ್ ಶರ್ಮ, ಉಮೇಶ್ ಯಾದವ್, ಅಜಿಂಕ್ಯಾ ರಹಾನೆ, ಅಭಿಮನ್ಯು ಮಿಥುನ್, ಪ್ರಗ್ಯಾನ್ ಓಜಾ, ವೃದ್ಧಿಮಾನ್ ಸಹಾ ಮತ್ತು ರೋಹಿತ್ ಶರ್ಮ.
ಆಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಎಡ್  ಕೋವನ್, ಡೇವಿಡ್ ವಾರ್ನರ್, ಶಾನ್ ಮಾರ್ಷ್, ರಿಕಿ ಪಾಂಟಿಂಗ್, ಮೈಕಲ್ ಹಸ್ಸಿ, ಬ್ರಾಡ್ ಹಡ್ಡಿನ್, ಪೀಟರ್ ಸಿಡ್ಲ್, ರ‌್ಯಾನ್ ಹ್ಯಾರಿಸ್, ಬೆನ್ ಹಿಲ್ಫೆನ್ಹಾಸ್ ಮತ್ತು ನಥಾನ್ ಲಿಯಾನ್; ಮೈಕಲ್ ಸ್ಟಾರ್ಕ್ (12ನೇ ಆಟಗಾರ).
ಅಂಪೈರ್‌ಗಳು: ಕುಮಾರ ಧರ್ಮಸೇನ (ಶ್ರೀಲಂಕಾ) ಮತ್ತು ಅಲೀಮ್ ದಾರ್ (ಪಾಕಿಸ್ತಾನ).
ಮ್ಯಾಚ್‌ರೆಫರಿ: ರಂಜನ್ ಮದುಗಲೆ (ಶ್ರೀಲಂಕಾ).
ಮೊದಲ ದಿನದಾಟ ಆರಂಭ (ಭಾರತೀಯ ಕಾಲಮಾನ): ಬೆಳಿಗ್ಗೆ 5.30ಕ್ಕೆ.
ನೇರ ಪ್ರಸಾರ: ಸ್ಟಾರ್ ಕ್ರಿಕೆಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.