ADVERTISEMENT

ಕ್ವಾರ್ಟರ್ ಫೈನಲ್‌ಗೆ ಸೈನಾ ನೆಹ್ವಾಲ್

ಬ್ಯಾಡ್ಮಿಂಟನ್: ಎರಡನೇ ಸುತ್ತಿನಲ್ಲಿ ಎಡವಿದ ಸಾಯಿ ಪ್ರಣೀತ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಸಿಂಗಪುರ (ಪಿಟಿಐ): ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದರೂ ಮರುಹೋರಾಟ ನಡೆಸಿದ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಸಿಂಗಪುರ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆದರೆ ಸಾಯಿ ಪ್ರಣೀತ್ ಎರಡನೇ ಸುತ್ತಿನಲ್ಲಿ ಮುಗ್ಗರಿಸಿದರು.

ಸಿಂಗಪುರ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ 16-21, 21-16, 21-9 ರಲ್ಲಿ ಜಪಾನ್‌ನ ಎರಿಕೊ ಹಿರೋಸೆ ವಿರುದ್ಧ ಪ್ರಯಾಸದ ಗೆಲುವು ಪಡೆದರು.

ಸುಮಾರು ಒಂದು ಗಂಟೆಯ ಹೋರಾಟದ ಬಳಿಕ ಭಾರತದ ಆಟಗಾರ್ತಿ ಗೆಲುವು ತಮ್ಮದಾಗಿಸಿಕೊಂಡರು. ಎರಡನೇ ಶ್ರೇಯಾಂಕದ ಸೈನಾ ಎಂಟರಘಟ್ಟದಲ್ಲಿ ಇಂಡೊನೇಷ್ಯದ ಲಿಂಡವೇಣಿ ಫನೇತ್ರಿ ಅವರ ಸವಾಲನ್ನು ಎದುರಿಸುವರು. ಫನೇತ್ರಿ ಎರಡನೇ ಸುತ್ತಿನ ಪಂದ್ಯದಲ್ಲಿ 21-15, 22-20 ರಲ್ಲಿ ಜಪಾನ್‌ನ ಕವೊರಿ ಇಮಾಬೆಪು ವಿರುದ್ಧ ಜಯ ಸಾಧಿಸಿದರು.

ಸಾಯಿ ಪ್ರಣೀತ್‌ಗೆ ಸೋಲು: ಭಾರತದ ಸಾಯಿ ಪ್ರಣೀತ್‌ಗೆ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ನಿರಾಸೆ ಉಂಟಾಯಿತು. ಗುರುವಾರ ನಡೆದ ಪಂದ್ಯದಲ್ಲಿ ಪ್ರಣೀತ್ 11-21, 21-17, 16-21 ರಲ್ಲಿ ವಿಶ್ವದ 12ನೇ ರ‌್ಯಾಂಕ್‌ನ ಆಟಗಾರ ಮಲೇಷ್ಯದ ವಿ ಫೆಂಗ್ ಚಾಂಗ್ ಕೈಯಲ್ಲಿ ಪರಭಾವಗೊಂಡರು.

ಸಾಯಿ ಪ್ರಣೀತ್ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ನಾಲ್ಕನೇ ರ‌್ಯಾಂಕ್‌ನ ಆಟಗಾರ ಹಾಂಕಾಂಗ್‌ನ ಯುನ್ ಹು ಅವರಿಗೆ ಆಘಾತ ನೀಡಿದ್ದರು. ಫೆಂಗ್ ವಿರುದ್ಧ ಎರಡನೇ ಸೆಟ್ ಗೆಲ್ಲಲು    ಯಶಸ್ವಿಯಾದರಾದರೂ, ನಿರ್ಣಾಯಕ ಸೆಟ್‌ನಲ್ಲಿ ಲಯ ಕಂಡುಕೊಳ್ಳಲು ಆಗಲಿಲ್ಲ. ಪುರುಷರ ಡಬಲ್ಸ್‌ನಲ್ಲಿ ಪ್ರಣವ್ ಚೋಪ್ರಾ ಮತ್ತು ಅಕ್ಷಯ್ ದೇವಾಲ್ಕರ್ 14-21, 19-21 ರಲ್ಲಿ ಕೊರಿಯಾದ ಬಾಯೆ ಚೊಯೆಲ್ ಶಿನ್ ಮತ್ತು ಯಿಯೊನ್ ಸೋಂಗ್ ಯೂ ಎದುರು ಸೋಲು ಅನುಭವಿಸಿದರು. ಭಾರತದ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ 27-25, 21-17 ರಲ್ಲಿ ಇಂಗ್ಲೆಂಡ್‌ನ ಮಾರ್ಕಸ್ ಎಲಿಸ್ ಹಾಗೂ ಸ್ಕಾಟ್ಲೆಂಡ್‌ನ ಪೌಲ್ ವಾನ್ ರೀಟ್‌ವೆಲ್ಡ್ ಅವರನ್ನು ಸೋಲಿಸಿದ್ದರು.

ಮಿಶ್ರ ಡಬಲ್ಸ್‌ನಲ್ಲಿ ಅರುಣ್ ವಿಷ್ಣು- ಅಪರ್ಣಾ ಬಾಲನ್ ಜೋಡಿ 10-21, 18-21 ರಲ್ಲಿ ಇಂಡೊನೇಷ್ಯದ ಪ್ರವೀಣ್ ಜೊರ್ದಾನ್- ವಿಟಾ ಮರಿಸ್ಸಾ ಕೈಯಲ್ಲಿ ನಿರಾಸೆ ಅನುಭವಿಸಿತು.ಪಿ. ಕಶ್ಯಪ್ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದ್ದರು. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಜಪಾನ್‌ನ ತಕುಮ ಉಯೆದಾ 18-21, 22-20, 21-15 ರಲ್ಲಿ ಭಾರತದ ಆಟಗಾರನನ್ನು ಮಣಿಸಿದ್ದರು.

ಡಬಲ್ಸ್, ಮಿಶ್ರ ಡಬಲ್ಸ್ ಮತ್ತು ಸಿಂಗಲ್ಸ್‌ನಲ್ಲಿ ಇತರ ಎಲ್ಲ ಸ್ಪರ್ಧಿಗಳು ಸೋಲು ಅನುಭವಿಸಿರುವ ಕಾರಣ ಸೈನಾ ನೆಹ್ವಾಲ್ ಮಾತ್ರ ಭಾರತದ ಭರವಸೆ ಎನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.