ADVERTISEMENT

ಗೆಲುವಿನ ಸನಿಹ ಇಂಗ್ಲೆಂಡ್ ತಂಡ

ಆ್ಯಷಸ್ ಟೆಸ್ಟ್: ಪ್ರಭಾವಿ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ತತ್ತರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 19:59 IST
Last Updated 21 ಜುಲೈ 2013, 19:59 IST
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಆ್ಯಷಸ್ ಕ್ರಿಕೆಟ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡದ ಮೈಕಲ್ ಕ್ಲಾರ್ಕ್ ಔಟಾದಾಗ ಇಂಗ್ಲೆಂಡ್ ತಂಡದ ಆಟಗಾರರು ಸಂಭ್ರಮಿಸಿದ ಕ್ಷಣ	 -ರಾಯಿಟರ್ಸ್‌ ಚಿತ್ರ
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಆ್ಯಷಸ್ ಕ್ರಿಕೆಟ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡದ ಮೈಕಲ್ ಕ್ಲಾರ್ಕ್ ಔಟಾದಾಗ ಇಂಗ್ಲೆಂಡ್ ತಂಡದ ಆಟಗಾರರು ಸಂಭ್ರಮಿಸಿದ ಕ್ಷಣ -ರಾಯಿಟರ್ಸ್‌ ಚಿತ್ರ   

ಲಂಡನ್ (ಎಎಫ್‌ಪಿ/ರಾಯಿಟರ್ಸ್): ಎಲ್ಲಾ ವಿಭಾಗಗಳಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಕಟ್ಟಿ ಹಾಕಿದ ಇಂಗ್ಲೆಂಡ್ ತಂಡ ಆ್ಯಷಸ್ ಕ್ರಿಕೆಟ್   ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸುವತ್ತ ಹೆಜ್ಜೆ ಇಟ್ಟಿದೆ.

ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಆತಿಥೇಯ ತಂಡದವರು ನೀಡಿದ 583 ರನ್‌ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ ತನ್ನ ಎರಡನೇ ಇನಿಂಗ್ಸ್‌ನಲ್ಲಿ 89 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿದೆ.

ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ ರ‌್ಯಾನ್ ಹ್ಯಾರಿಸನ್ (13) ಹಾಗೂ ಜೇಮ್ಸ ಪ್ಯಾಟಿನ್ಸನ್ (34) ತಂಡಕ್ಕೆ ಆಸರೆಯಾಗಿದ್ದರು. ಇನ್ನೂ ಒಂದು ದಿನದ ಆಟ ಬಾಕಿ ಇರುವಂತೆಯೇ ಕಾಂಗರೂ ಪಡೆಯನ್ನು ಸೋಲಿನ ಭೀತಿ ಕಾಡುತ್ತಿದೆ.

ಬೃಹತ್ ಮೊತ್ತ: ನಾಲ್ಕನೇ ದಿನದಾಟ ಮುಂದುವರಿಸಿದ ಆಂಗ್ಲರು ತಮ್ಮ ಎರಡನೇ ಇನಿಂಗ್ಸ್‌ನಲ್ಲಿ 114.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡರು. ಈ ಮೂಲಕ ಅಲಸ್ಟೇರ್ ಕುಕ್ ಬಳಗ ಒಟ್ಟಾರೆ ಮುನ್ನಡೆಯನ್ನು 583 ರನ್‌ಗಳಿಗೆ ಹೆಚ್ಚಿಸಿಕೊಂಡಿತು.

ತಮ್ಮ ಎರಡನೇ ಇನಿಂಗ್ಸ್‌ನ ಮೊತ್ತಕ್ಕೆ ನಾಲ್ಕನೇ ದಿನದಾಟದ ಬೆಳಿಗ್ಗೆ ಆತಿಥೇಯರು ಸೇರಿಸಿದ್ದು ಕೇವಲ 16 ರನ್. ಅಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡರು. 178 ರನ್ ಗಳಿಸಿ ಅಜೇಯರಾಗುಳಿದಿದ್ದ ಜೋ ರೂಟ್ ಬೇಗನೇ ವಿಕೆಟ್ ಒಪ್ಪಿಸಿದರು. 338 ಎಸೆತಗಳನ್ನು ಎದುರಿಸಿದ ಅವರು 18 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಮೇತ 180 ರನ್ ಗಳಿಸಿದರು.

ಕಠಿಣ ಗುರಿ ಎದುರು ಎರಡನೇ ಇನಿಂಗ್ಸ್ ಆರಂಭಿಸಿದ ಕಾಂಗರೂ ಪಡೆಗೆ ಏಳನೇ ಓವರ್‌ನಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ ಆ್ಯಂಡರ್‌ಸನ್ ಆಘಾತ ನೀಡಿದರು. ಅವರು ಆರಂಭಿಕ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್ ವಿಕೆಟ್ ಕಬಳಿಸಿದರು. ಬಳಿಕ ಫಿಲ್ ಹ್ಯೂಸ್ ಅವರ ವಿಕೆಟ್ ಪಡೆದ ಗ್ರೇಮ್ ಸ್ವಾನ್ ಆತಿಥೇಯ ತಂಡ ಮೇಲುಗೈ ಸಾಧಿಸಲು ಕಾರಣರಾದರು.

ಉಸ್ಮಾನ್ ಖವಾಜಾ (54; 133 ಎ, 7 ಬೌಂ) ಹಾಗೂ ನಾಯಕ ಮೈಕಲ್ ಕ್ಲಾರ್ಕ್ (51; 85 ಎ, 7 ಬೌಂ) ಮಾತ್ರ ಸ್ವಲ್ಪ ಹೊತ್ತು ಪ್ರತಿರೋಧ ತೋರಿದರು. ಆದರೆ ಆ್ಯಂಡರ್ಸನ್, ಸ್ವಾನ್, ಟಿಮ್ ಬ್ರೆಸ್ನನ್ ಹಾಗೂ ಜೋ ರೂಟ್ ಅವರ ಪ್ರಭಾವಿ ದಾಳಿಯ ಮುಂದೆ ಆಸ್ಟ್ರೇಲಿಯಾದ ಆಟ ನಡೆಯಲಿಲ್ಲ.

ಐದು ಪಂದ್ಯಗಳ ಈ ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 1-0 ಮುನ್ನಡೆ ಹೊಂದಿದೆ.

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: ಮೊದಲ ಇನಿಂಗ್ಸ್ 100.1 ಓವರ್‌ಗಳಲ್ಲಿ 361 ಹಾಗೂ ಎರಡನೇ ಇನಿಂಗ್ಸ್ 114.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 349 ಡಿಕ್ಲೇರ್ಡ್ (ಜೋ ರೂಟ್ 180, ಜೇಮಿ ಬೈಸ್ಟೋವ್ 20; ಪೀಟರ್ ಸಿಡ್ಲ್ 65ಕ್ಕೆ 3, ರ‌್ಯಾನ್ ಹ್ಯಾರಿಸ್ 31ಕ್ಕೆ2); ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 53.3 ಓವರ್‌ಗಳಲ್ಲಿ 128 ಹಾಗೂ 85 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 231 (ಶೇನ್ ವಾಟ್ಸನ್ 20, ಉಸ್ಮಾನ್ ಖವಾಜಾ 54, ಮೈಕಲ್ ಕ್ಲಾರ್ಕ್ 51, ಆ್ಯಸ್ಟನ್ ಅಗರ್ 16, ಪೀಟರ್ ಸಿಡ್ಲ್ 18, ಜೇಮ್ಸ ಪ್ಯಾಟಿನ್ಸನ್ ಬ್ಯಾಟಿಂಗ್ 34, ರ‌್ಯಾನ್ ಹ್ಯಾರಿಸ್ ಬ್ಯಾಟಿಂಗ್ 13; ಜೇಮ್ಸ ಆ್ಯಂಡರ್‌ಸನ್ 55ಕ್ಕೆ2, ಗ್ರೇಮ್ ಸ್ವಾನ್ 78ಕ್ಕೆ3, ಟಿಮ್ ಬ್ರೆಸ್ನನ್ 30ಕ್ಕೆ, ಜೋ ರೂಟ್ 9ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.