ADVERTISEMENT

ಚಂದ್ರಕಾಂತ್‌ಗೆ ಬಂಗಾರ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2011, 19:30 IST
Last Updated 26 ಮಾರ್ಚ್ 2011, 19:30 IST
ಚಂದ್ರಕಾಂತ್‌ಗೆ ಬಂಗಾರ
ಚಂದ್ರಕಾಂತ್‌ಗೆ ಬಂಗಾರ   

 ಬೆಂಗಳೂರು: ಸರ್ವಿಸಸ್ ತಂಡದವರು ಇಲ್ಲಿ ನಡೆಯುತ್ತಿರುವ 63ನೇ ಪುರುಷರ ಮತ್ತು 26ನೇ ಮಹಿಳೆಯರ ರಾಷ್ಟ್ರೀಯ ಸೀನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಪಾರಮ್ಯ ಮುಂದುವರಿಸಿದ್ದಾರೆ.ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪುರುಷರ 94 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಸರ್ವಿಸಸ್‌ನ ಚಂದ್ರಕಾಂತ್ ಮಾಲಿ ಬಂಗಾರದ ಪದಕ ಗೆದ್ದುಕೊಂಡರು.

ಅವರು ಒಟ್ಟು 315 ಕೆ.ಜಿ. ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದರು. ಸ್ನ್ಯಾಚ್‌ನಲ್ಲಿ 141 ಹಾಗೂ ಕ್ಲೀನ್ ಮತ್ತು ಜರ್ಕ್‌ನಲ್ಲಿ 174 ಕೆ.ಜಿ. ಭಾರ ಎತ್ತುವಲ್ಲಿ ಚಂದ್ರಕಾಂತ್ ಯಶಸ್ವಿಯಾದರು.
 

‘ಇಲ್ಲಿ ನೀಡಿದ ಪ್ರದರ್ಶನ ತೃಪ್ತಿ ನೀಡಿದೆ. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತೋರಿದ ಸಾಧನೆಗಿಂತ ಶ್ರೇಷ್ಠ ಪ್ರದರ್ಶನ ಇಲ್ಲಿ ನೀಡಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದರು. ರಾಂಚಿಯಲ್ಲಿ ನಡೆದ ಕೂಟದಲ್ಲಿ ಅವರು ಒಟ್ಟು 307 ಕೆ.ಜಿ. ಭಾರ ಎತ್ತುವ ಮೂಲಕ ಬಂಗಾರ ಪಡೆದಿದ್ದರು.
 

ADVERTISEMENT

ಈ ವಿಭಾಗದ ಬೆಳ್ಳಿ ಪದಕವನ್ನು ಕೇರಳದ ಎಂ. ಶ್ಯಾಮ್‌ಲಾಲ್ (312 ಕೆ.ಜಿ.) ಗೆದ್ದುಕೊಂಡರು. ಕಂಚಿನ ಪದಕ ಜಾರ್ಖಂಡ್‌ನ ಮಂಜಿತ್ ಸಿಂಗ್ (305 ಕೆ.ಜಿ) ಅವರ ಪಾಲಾಯಿತು.ಪುರುಷರ 85 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಸರ್ವಿಸಸ್‌ನ ಎಲ್‌ಬಿ ಸಿಂಗ್ ಅಗ್ರಸ್ಥಾನ ಗಿಟ್ಟಿಸಿದರು. ಒಟ್ಟು 298 ಕೆ.ಜಿ. ಭಾರ (ಸ್ನ್ಯಾಚ್ 131 ಕೆ.ಜಿ,; ಜರ್ಕ್ 167 ಕೆ.ಜಿ) ಎತ್ತುವ ಮೂಲಕ ಅವರು ಬಂಗಾರ ಪಡೆದರು.

ಒಟ್ಟು 293 ಕೆ.ಜಿ. ಭಾರ ಎತ್ತಿದ ಪಂಜಾಬ್‌ನ ಸಂತೋಷ್ ಕುಮಾರ್ ಬೆಳ್ಳಿ ಜಯಿಸಿದರು. ಅವರು ಸ್ನ್ಯಾಚ್‌ನಲ್ಲಿ 126 ಹಾಗೂ ಕ್ಲೀನ್ ಮತ್ತು ಜರ್ಕ್‌ನಲ್ಲಿ 163 ಕೆ.ಜಿ. ಭಾರ ಎತ್ತುವಲ್ಲಿ ಯಶಸ್ವಿಯಾದರು. ಭಾರತ ವೇಟ್‌ಲಿಫ್ಟಿಂಗ್ ಫೆಡರೇಷನ್‌ನ್ನು ಪ್ರತಿನಿಧಿಸಿದ ಕೆ. ಹರಗೋಪಾಲ್ (288 ಕೆ.ಜಿ) ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
 

ಮಹಿಳೆಯರ 75 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಬಿಹಾರದ ಎ. ಜಾನೇಶ್ವರಿ ದೇವಿ (190 ಕೆ.ಜಿ) ಅವರು ಇತರರನ್ನು ಹಿಂದಿಕ್ಕಿ ಚಿನ್ನ ಪಡೆದರು. ಮಣಿಪುರದ ಕೆ.ಎಚ್. ಪ್ರಮೀಳಾ ದೇವಿ (182 ಕೆ.ಜಿ) ಬೆಳ್ಳಿ ಜಯಿಸಿದರೆ, ಪಂಜಾಬ್‌ನ ಪ್ರದೀಪ್ ಕೌರ್ (161 ಕೆ.ಜಿ) ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

‘ಇಲ್ಲಿ ಪದಕ ಗೆಲ್ಲುವ ಭರವಸೆ ಇತ್ತು. ಚಿನ್ನ ಪಡೆಯಲು ಯಶಸ್ವಿಯಾಗಿರುವುದು ಸಂತಸ ಉಂಟುಮಾಡಿದೆ’ ಎಂದು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಜಯಿಸಿದ್ದ ಜಾನೇಶ್ವರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.