ADVERTISEMENT

ಚಿನ್ನ ಗೆದ್ದ ಮನು ಭಾಕರ, ಅನ್ಮೋಲ್‌

ಪಿಟಿಐ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಮನು ಭಾಕರ್ ಮತ್ತು ಅನ್ಮೋಲ್‌
ಮನು ಭಾಕರ್ ಮತ್ತು ಅನ್ಮೋಲ್‌   

ಸಿಡ್ನಿ: ಭಾರತದ ಮನು ಭಾಕರ್‌ ಮತ್ತು ಅನ್ಮೋಲ್‌ ಜೋಡಿ ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವ ಕಪ್‌ ಶೂಟಿಂಗ್‌ನ ಮಿಶ್ರ ತಂಡ ವಿಭಾಗದ ಚಿನ್ನ ಗೆದ್ದಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್‌ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಸ್ಪರ್ಧೆಯ ಆರಂಭದ ಹಂತದಿಂದಲೇ ಆಧಿಪತ್ಯ ಸ್ಥಾಪಿಸಿದ ಭಾಕರ್ ಮತ್ತು ಅನ್ಮೋಲ್‌ ಫೈನಲ್‌ವರೆಗೂ ಅದೇ ಲಯದಲ್ಲಿ ಮುಂದುವರಿದರು. ಅರ್ಹತಾ ಸುತ್ತಿನ ಸ್ಪರ್ಧೆಗಳಲ್ಲಿ ಅವರು ಅತ್ಯಧಿಕ, 770 ಪಾಯಿಂಟ್ಸ್‌ ಕಲೆ ಹಾಕಿ ವಿಶ್ವ ದಾಖಲೆಯನ್ನೂ ಬರದರು.

ಸಮೀಪದ ಎದುರಾಳಿ ಚೀನಾದ ಜೋಡಿ ಲ್ಯೂ ಜಿನ್ಯಾ ಮತ್ತು ಲಿ ಕ್ಸಿ ಅವರನ್ನು 5.6 ಪಾಯಿಂಟ್‌ಗಳ ಅಂತರದಿಂದ ಭಾರತದ ಈ ಜೋಡಿ ಹಿಂದಿಕ್ಕಿದರು. ಫೈನಲ್‌ನಲ್ಲಿ ಮನು ಮತ್ತು ಅನ್ಮೋಲ್ 478.9 ಪಾಯಿಂಟ್ ಕಲೆ ಹಾಕಿದರು. ಈ ಮೂಲಕ ಸ್ವಲ್ಪದರಲ್ಲೇ ವಿಶ್ವ ದಾಖಲೆ ಸಾಧಿಸುವ ಅವಕಾಶದಿಂದ ವಂಚಿತರಾದರು. ವಿಶ್ವ ದಾಖಲೆ ಸಾಧಿಸಲು ಅವರು ಇನ್ನೂ 1.8 ಪಾಯಿಂಟ್ ಗಳಿಸಬೇಕಾಗಿತ್ತು.

ADVERTISEMENT

ಚೀನಾದ ವಾಂಗ್ ಜೆಹೊ ಮತ್ತು ಕ್ಸಿಯಾನ್‌ ಜಾರಿಕ್ಸಾನ್ ಜೋಡಿ ಕಂಚಿನ ಪದಕ ಗೆದ್ದರು. ನಾಲ್ಕನೇ ಸ್ಥಾನ ಭಾರತದ ಮಹಿಮಾ ತುಹ್ರಿ ಅಗರವಾಲ್ ಮತ್ತು ಗೌರವ್‌ ರಾಣಾ ಅವರ ಪಾಲಾಯಿತು.

ಮಂಗಳವಾರದ ಸಾಧನೆಯ ಮೂಲಕ ಭಾರತ ಏಳು ಚಿನ್ನದೊಂದಿಗೆ ಒಟ್ಟು 17 ಪದಕಗಳನ್ನು ಗಳಿಸಿದ್ದು ಪಾಯಿಂಟ್ ಪಟ್ಟಿಯ ಎರಡನೇ ಸ್ಥಾನದಲ್ಲಿದೆ. ಎಂಟು ಚಿನ್ನದೊಂದಿಗೆ 21 ಪದಕ ಗೆದ್ದಿರುವ ಚೀನಾ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.