ADVERTISEMENT

ಚೀನಾಕ್ಕೆ ಸೋಲುಣಿಸಿದ ಭಾರತ

ಪಿಟಿಐ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST
ನವಜ್ಯೋತ್ ಕೌರ್ ಚೆಂಡನ್ನು ಹಿಡಿತಕ್ಕೆ ಪಡೆಯಲು ಯತ್ನಿಸಿದ ಕ್ಷಣ.
ನವಜ್ಯೋತ್ ಕೌರ್ ಚೆಂಡನ್ನು ಹಿಡಿತಕ್ಕೆ ಪಡೆಯಲು ಯತ್ನಿಸಿದ ಕ್ಷಣ.   

ಕಾಕಮಿಗಾರ, ಜಪಾನ್‌: ಜಯದ ಓಟ ಮುಂದುವರಿಸಿರುವ ಭಾರತ ತಂಡ ಮಹಿಳೆಯರ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಸೋಮವಾರ ಚೀನಾಕ್ಕೆ ಆಘಾತ ನೀಡಿದೆ.

ಮೊದಲ ಪಂದ್ಯದಲ್ಲಿ ಸಿಂಗಪುರ ತಂಡವನ್ನು 10–0 ಗೋಲುಗಳಿಂದ ಸೋಲಿಸಿದ್ದ ಭಾರತ ತಂಡ ಚೀನಾದ ಎದುರು ಅಭೂತಪೂರ್ವ ಆಟದ ಮೂಲಕ 4–1 ಗೋಲುಗಳಲ್ಲಿ ಗೆಲುವು ಒಲಿಸಿಕೊಂಡಿದೆ.

ಭಾರತ ತಂಡಕ್ಕೆ ಗುರ್ಜಿತ್‌ ಕೌರ್‌ (19ನೇ ನಿ.), ನವಜ್ಯೋತ್‌ ಕೌರ್‌ (32ನೇ ನಿ), ನೇಹಾ ಗೋಯಲ್‌ (49ನೇ ನಿ.), ನಾಯಕಿ ರಾಣಿ ರಾಂಪಾಲ್‌ (58ನೇ ನಿ.) ತಲಾ ಒಂದು ಗೋಲು ತಂದುಕೊಟ್ಟರು.

ADVERTISEMENT

ಕಾಕಮಿಗಾರ ಕವಾಸ್ಕಿ ಕ್ರೀಡಾಂಗಣದಲ್ಲಿ ಭಾರತ ತಂಡ ‘ಎ’ ಗುಂಪಿನ ಎರಡನೇ ಪಂದ್ಯ ಆಡಿತು. ಸಿಂಗಪುರ ಎದುರಿನ ಪಂದ್ಯದ ಯಶಸ್ಸಿನಿಂದ ಆಟಗಾರ್ತಿಯರ ವಿಶ್ವಾಸ ಇಮ್ಮಡಿಗೊಂಡಿತ್ತು.

ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಗೂ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಭಾರತ ತಂಡದ ಮೂರು ಪ್ರಯತ್ನಗಳನ್ನು ಚೀನಾ ವಿಫಲಗೊಳಿಸಿತು.

ಎರಡನೇ ಕ್ವಾರ್ಟರ್‌ನ ನಾಲ್ಕನೇ ನಿಮಿಷದಲ್ಲಿಯೇ ಡ್ರ್ಯಾಗ್‌ಫ್ಲಿಕ್ ಪರಿಣತ ಆಟಗಾರ್ತಿ ಗುರ್ಜಿತ್ ಭಾರತಕ್ಕೆ ಮೊದಲ ಗೋಲಿನ ಮುನ್ನಡೆ ತಂದುಕೊಟ್ಟರು. ಎರಡು ನಿಮಿಷಗಳ ಅಂತರದಲ್ಲಿಯೇ ನವಜ್ಯೋತ್‌ ಫೀಲ್ಡ್‌ ಗೋಲು ದಾಖಲಿಸುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದರು.

ಚೀನಾ ತಂಡಕ್ಕೆ 38ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿತು. ಈ ಅವಕಾಶದಲ್ಲಿ ಕ್ಸಿಯು ಕ್ಸಿಯಾ ಚೆಂಡನ್ನು ಗುರಿ ಸೇರಿಸಿದರು.

ಅಂತಿಮ ಕ್ವಾರ್ಟರ್‌ನಲ್ಲಿ ಚೀನಾ ತಂಡ ಸಮಬಲ ಮಾಡಿಕೊಳ್ಳಲು ಹೆಚ್ಚು ಆಕ್ರಮಣಕಾರಿಯಾಗಿ ಆಡಿತು. ಆದರೆ ಭಾರತದ ರಕ್ಷಣಾಗೋಡೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಆಡಿದ ಭಾರತ ಎರಡು ಗೋಲುಗಳನ್ನು ಯಶಸ್ವಿಯಾಗಿ ದಾಖಲಿಸಿತು.

ನೇಹಾ 49ನೇ ನಿಮಿಷದಲ್ಲಿ ಫೀಲ್ಡ್‌ ಗೋಲು ತಂದರು. ಇದರಿಂದ ಭಾರತಕ್ಕೆ 3–1ರ ಮುನ್ನಡೆ ಲಭಿಸಿತು.

ಈ ವೇಳೆ ಚೀನಾ ತಂಡಕ್ಕೆ ಎರಡು ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತ್ತು. ಆದರೆ ಭಾರತದ ಗೋಲ್‌ಕೀಪರ್ ಯಶಸ್ವಿಯಾಗಿ ತಡೆದರು. ಭಾರತ ತಂಡದ ನಾಯಕಿ ರಾಣಿ 58ನೇ ನಿಮಿಷದಲ್ಲಿ ಗೋಲು ಗಳಿಸಿ ಜಯದ ಅಂತರ ಹೆಚ್ಚಿಸಿದರು.

ಭಾರತದ ಆಟಗಾರ್ತಿಯರು ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮಂಗಳವಾರ ಮಲೇಷ್ಯಾ ಎದುರು ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.