ADVERTISEMENT

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 20:00 IST
Last Updated 12 ಮಾರ್ಚ್ 2014, 20:00 IST

ಕ್ರೀಡಾ ವಸತಿನಿಲಯಕ್ಕೆ ಅರ್ಜಿ ಆಹ್ವಾನ
ಬೆಂಗಳೂರು:
ಮೂಡುಬಿದಿರೆಯ ಆಳ್ವಾಸ್‌್ ಶಿಕ್ಷಣ ಪ್ರತಿಷ್ಠಾನವು ಪ್ರತಿಭಾವಂತ ಕ್ರೀಡಾಪಟುಗಳಿಂದ ಕ್ರೀಡಾ ವಸತಿ ನಿಲಯಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.

2014–15ನೇ ಸಾಲಿನಲ್ಲಿ ಪ್ರೌಢಶಾಲೆ, ಪದವಿಪೂರ್ವ, ಪದವಿ ಮತ್ತು ಉನ್ನತ ವ್ಯಾಸಂಗಕ್ಕೆ ದಾಖಲಾತಿ ಬಯಸುವ ಕ್ರೀಡಾಪಟುಗಳು ಮಾರ್ಚ್‌್ 31ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಥ್ಲೆಟಿಕ್ಸ್‌್, ವೇಟ್‌ಲಿಫ್ಟಿಂಗ್‌, ಪವರ್ ಲಿಫ್ಟಿಂಗ್‌್, ದೇಹದಾರ್ಢ್ಯ, ಕುಸ್ತಿ, ಕ್ರಿಕೆಟ್‌್, ಕಬಡ್ಡಿ, ವಾಲಿಬಾಲ್‌, ಕೊಕ್ಕೊ, ಬಾಲ್ ಬ್ಯಾಡ್ಮಿಂಟನ್‌, ಹ್ಯಾಂಡ್‌ಬಾಲ್‌, ಸಾಫ್ಟ್‌ಬಾಲ್‌,  ಫುಟ್‌ಬಾಲ್‌, ಟೇಬಲ್‌ ಟೆನಿಸ್‌, ಬ್ಯಾಸ್ಕೆಟ್‌ಬಾಲ್‌,  ಹಾಕಿ, ಯೋಗ, ಟೆನಿಸ್‌್, ಥ್ರೋಬಾಲ್‌ ಮತ್ತು ಚೆಸ್‌ ಕ್ರೀಡೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಈ ಆಯ್ಕೆ ಟ್ರಯಲ್ಸ್‌ಗಳಲ್ಲಿ  ಆಯ್ಕೆಯಾದ ಕ್ರೀಡಾಪಟುಗಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ಹಾಗೂ ವಸತಿ ಸೌಲಭ್ಯದ ಜೊತೆ ವಿಶೇಷ ತರಬೇತಿ ನೀಡಲಾಗು ತ್ತದೆ ಎಂದು ಆಳ್ವಾಸ್‌ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಅಧ್ಯಕ್ಷರು, ಆಳ್ವಾಸ್‌್ ಶಿಕ್ಷಣ ಪ್ರತಿಷ್ಠಾನ, ಮೂಡು ಬಿದಿರೆ–574227 ದಕ್ಷಿಣ ಕನ್ನಡ ಜಿಲ್ಲೆ. ದೂರವಾಣಿ: 9620387666 ಅಥವಾ 9742109257.

ಕ್ರಿಕೆಟ್‌: ವಿಂಡೀಸ್‌ಗೆ ಸರಣಿ ಜಯದ ಮುನ್ನಡೆ
ಬ್ರಿಜ್‌ಟೌನ್‌ (ಎಎಫ್‌ಪಿ):
ಇಂಗ್ಲೆಂಡ್‌ ನೀಡಿದ್ದ ಸವಾಲಿನ ಗುರಿಯನ್ನು ಸುಲಭವಾಗಿ ಮುಟ್ಟಿದ ವೆಸ್ಟ್‌ ಇಂಡೀಸ್‌ ತಂಡ ಎರಡನೇ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೆಲುವು ಸಾಧಿಸುವ ಜೊತೆಗೆ ಮೂರು ಪಂದ್ಯಗಳ ಸರಣಿಯಲ್ಲಿ 2–0ರಲ್ಲಿ ಮುನ್ನಡೆ ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 152. (ಅಲೆಕ್ಸ್‌ ಹಾಲೆಸ್‌ 40, ಜಾಸ್‌್ ಬಟ್ಲರ್‌ 67, ರವಿ ಬೋಪಾರ 14; ಕೃಷ್ಮರ್‌ ಸಂತೊೋಕಿ 21ಕ್ಕೆ4, ಡ್ವೇನ್‌ ಬ್ರಾವೊ 34ಕ್ಕೆ2). ವೆಸ್ಟ್‌್ ಇಂಡೀಸ್‌: 18.5 ಓವರ್‌ಗಳಲ್ಲಿ 5  ವಿಕೆಟ್‌ಗೆ 155. (ಡ್ವೇನ್‌ ಸ್ಮಿತ್‌ 30, ಕ್ರಿಸ್‌ ಗೇಲ್‌ 36, ಮರ್ಲಾನ್‌ ಸ್ಯಾಮುಯೆಲ್ಸ್‌್ 28, ಡರೆನ್‌ ಸಮಿ ಔಟಾಗದೆ 30; ಟಿಮ್‌ ಬ್ರೆಸ್ನಿನ್‌ 51ಕ್ಕೆ2).
ಫಲಿತಾಂಶ: ವೆಸ್ಟ್‌್ ಇಂಡೀಸ್‌ಗೆ 5 ವಿಕೆಟ್‌ ಜಯ ಹಾಗೂ ಮೂರು ಪಂದ್ಯಗಳ ಸರಣಿಯಲ್ಲಿ 2–0ರಲ್ಲಿ ಮುನ್ನಡೆ. ಪಂದ್ಯ ಶ್ರೇಷ್ಠ: ಕೃಷ್ಮರ್‌ ಸಂತೋಕಿ.

ದ್ರಾವಿಡ್‌ ಕೋಚ್‌ ಆಗಲಿ: ವಾಡೇಕರ್
ಹುಬ್ಬಳ್ಳಿ:
ವಿದೇಶಿಗರನ್ನು ದೂರ ಇರಿಸಿ ದೇಶದ ಹಿರಿಯ ಕ್ರಿಕೆಟಿಗನ್ನೇ ಭಾರತ ಕ್ರಿಕೆಟ್ ತಂಡದ ಕೋಚ್‌ ಆಗಿ ನೇಮಕ ಮಾಡಬೇಕು ಎಂದು ಆಶಿಸಿದ ಭಾರತ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್‌ ಸದ್ಯ ಕೋಚ್‌ ಆಗಲು ರಾಹುಲ್‌ ದ್ರಾವಿಡ್ ಅವರಿಗಿಂತ ಉತ್ತಮ ವ್ಯಕ್ತಿ ಬೇರೆ ಯಾರೂ ಇಲ್ಲ ಎಂದು ಅಭಿಪ್ರಾಯಪಟ್ಟರು.

ನಗರದಲ್ಲಿ ನಡೆಯುತ್ತಿರುವ ಅಂಗವಿಕಲರ ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಯ ಹಿನ್ನೆಲೆಯಲ್ಲಿ ರಾಜನಗರದ ಕೆಎಸ್‌ಸಿಎ ಮೈದಾನಕ್ಕೆ ಬುಧವಾರ ಭೇಟಿ ನೀಡಿದ ಅವರು ಮಾತನಾಡಿದರು.

‘ವಿದೇಶಿಗರು ಕೋಚ್‌ ಅದರೆ ಸ್ಥಳೀಯ ಟೂರ್ನಿಗಳು ನಡೆಯುವಾಗ ತಂಡದ ಆಟಗಾರರನ್ನು ಗಮನಿಸುವುದಿಲ್ಲ. ಪ್ರಮುಖ ಟೂರ್ನಿಗಳ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುವ ಅವರು ನಂತರ ತಮ್ಮ ಊರಿಗೆ ಮರಳುತ್ತಾರೆ. ಅವರಿಗೆ ಸ್ಥಳೀಯ ಕ್ರೀಡಾ ಸಂಸ್ಕೃತಿಯ ಪರಿಚಯವೂ ಇರುವುದಿಲ್ಲ’ ಎಂದು ವಾಡೇಕರ್‌ ಹೇಳಿದರು.

‘ದ್ರಾವಿಡ್‌, ಸುನಿಲ್‌ ಗಾವಸ್ಕರ್‌ ಮತ್ತು ಸೌರವ್‌ ಗಂಗೂಲಿ ಕೋಚ್‌ ಹುದ್ದೆಗೆ ಅರ್ಹರು. ಇವರ ಪೈಕಿ ದ್ರಾವಿಡ್‌ಗೆ ಪೂರ್ಣ ಅಂಕ ನೀಡಬಹುದು’ ಎಂದು ಹೇಳಿದ ಅವರು ಭಾರತ ತಂಡದ ನಾಯಕತ್ವದ ಕುರಿತು ಪ್ರತಿಕ್ರಿಯಿಸಿ ‘ಮುಂದಿನ ವಿಶ್ವಕಪ್‌ ವರೆಗಾದರೂ ಮಹೇಂದ್ರ ಸಿಂಗ್‌ ದೋನಿ ಅವರನ್ನೇ ನಾಯಕನಾಗಿ ಮುಂದುವರಿಸಬೇಕು. ಇಲ್ಲವಾದರೆ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ’ ಎಂದು ಹೇಳಿದರು.

‘ಅಂಗವಿಕಲರ ಕ್ರಿಕೆಟ್‌ಗೆ ಬಿಸಿಸಿಐ ಮಾನ್ಯತೆ ಪಡೆಯಲು ನಿರಂತರ ಶ್ರಮ ನಡೆಯುತ್ತಿದೆ. ಆದರೆ ಮಂಡಳಿ ಪೂರಕವಾಗಿ ಪ್ರತಿಕ್ರಿಯಿಸುತ್ತಿಲ್ಲ. ಹೀಗಾಗಿ ಅಂಗವಿಕಲ ಕ್ರಿಕೆಟಿಗರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ’ ಎಂದು ಅಂಗವಿಕಲರ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರೂ ಆಗಿರುವ ವಾಡೇಕರ್‌ ಹೇಳಿದರು.

ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಆಯೋಜನೆಗೆ  ನಿರ್ಧಾರ
ನವದೆಹಲಿ (ಪಿಟಿಐ):
ಅಂತರರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ (ಎಐಬಿಎ) ಮಾನ್ಯತೆ ಕಳೆದುಕೊಂಡಿರುವ ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಎಐಬಿಎಫ್‌) ಪದಾಧಿಕಾರಿಗಳು ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಆಯೋಜಿಸಲು ನಿರ್ಧರಿಸಿದ್ದಾರೆ. ಇದಕ್ಕೆ ಅಂತರರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ ವಿರೋಧ ವ್ಯಕ್ತಪಡಿಸಿದೆ. ಈ ಟೂರ್ನಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ಅದು ಹೇಳಿದೆ.

ಆದರೆ ನವದೆಹಲಿಯಲ್ಲಿ ಮೇ 8ರಿಂದ 11ರವರೆಗೆ ಸೀನಿಯರ್‌ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಹಾಗೂ ಹೈದರಾಬಾದ್‌ನಲ್ಲಿ ಮೇ 18ರಿಂದ 23ರವರೆಗೆ ರಾಷ್ಟ್ರೀಯ ಯೂತ್‌ ಚಾಂಪಿಯನ್‌ಷಿಪ್‌ ಆಯೋಜಿಸುವ ವಿಷಯವನ್ನು ಎಐಬಿಎಫ್‌ ಎಲ್ಲಾ ರಾಜ್ಯ ಘಟಕಗಳಿಗೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.