ಖಾಂಟಿ ಮನ್ಸಿಸ್ಕ್, ರಷ್ಯಾ (ಪಿಟಿಐ): ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಅಜರ್‌ಬೈಜಾನ್‌ನ ಶಕ್ರಿಯಾರ್ ಮಮೆದ್ಯರೊವ್ ವಿರುದ್ಧ ಗೆಲುವು ಪಡೆದರು. ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸುವ ಮೂಲಕ ಭಾರತದ ಗ್ರ್ಯಾಂಡ್‌ಮಾಸ್ಟರ್ 2.5 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದರು.
ಮೊದಲ ಸುತ್ತಿನಲ್ಲಿ ಅರ್ಮೇನಿಯದ ಲೆವೊನ್ ಅರೋನಿಯನ್ ಅವರನ್ನು ಮಣಿಸಿದ್ದ ಆನಂದ್, ಎರಡನೇ ಸುತ್ತಿನ ಪಂದ್ಯದಲ್ಲಿ ವೆಸೆಲಿನ್ ಟೊಪಲೊವ್ ಜೊತೆ ಡ್ರಾ ಸಾಧಿಸಿದ್ದರು. ಟೊಪಲೊವ್- ಅರೋನಿಯನ್ ಮತ್ತು ಅರ್ಮೇನಿಯದ ದಿಮಿತ್ರಿ ಆಂಡ್ರೆಕಿನ್- ರಷ್ಯಾದ ಸೆರ್ಜಿ ಕರ್ಜಾಕಿನ್ ನಡುವಿನ ಮೂರನೇ ಸುತ್ತಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡವು. ಒಟ್ಟು 14 ಸುತ್ತುಗಳ ಈ ಟೂರ್ನಿಯಲ್ಲಿ ಎಂಟು ಆಟಗಾರರು ಕಣದಲ್ಲಿದ್ದಾರೆ.
ನವೆಂಬರ್ ತಿಂಗಳಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಆನಂದ್ ಅವರು ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಸೋಲು ಅನುಭವಿಸಿದ್ದರು. ಆದ್ದರಿಂದ ಈ ಟೂರ್ನಿಯಲ್ಲಿ ಆನಂದ್ ಅವರನ್ನು ಹೆಚ್ಚಿನವರು ಕಡೆಗಣಿಸಿದ್ದರು. ಆದರೆ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರಂಭದಲ್ಲೇ ಉತ್ತಮ ಪ್ರದರ್ಶನ ತೋರುವ ಮೂಲಕ ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.