ADVERTISEMENT

ಚೆಸ್: ನೇಗಿಗೆ ಎರಡನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST

ಲೀಡೆನ್, ಹಾಲೆಂಡ್ (ಪಿಟಿಐ): ಭಾರತದ ಗ್ರ್ಯಾಂಡ್‌ಮಾಸ್ಟರ್ ಮತ್ತು ಏಷ್ಯನ್ ಚಾಂಪಿಯನ್ ಪರಿಮಾರ್ಜನ್ ನೇಗಿ ಇಲ್ಲಿ ನಡೆದ ಲೀಡೆನ್ ಅಂತರರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದರು.

ಸೋಮವಾರ ನಡೆದ 9ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ನೇಗಿ ತಮ್ಮ ಎದುರಾಳಿ ಹಾಲೆಂಡ್‌ನ ಬೆಂಜಮಿನ್ ಬಾಕ್ ಅವರನ್ನು ಮಣಿಸಿದರು. ಈ ಮೂಲಕ ಭಾರತದ ಸ್ಪರ್ಧಿ ಒಟ್ಟು ಏಳು ಪಾಯಿಂಟ್‌ಗಳೊಂದಿಗೆ `ರನ್ನರ್ ಅಪ್~ ಎನಿಸಿದರು.

ಇಂಗ್ಲೆಂಡ್‌ನ ಡೇವಿಡ್ ಹೊವೆಲ್ 7.5 ಪಾಯಿಂಟ್‌ಗಳೊಂದಿಗೆ ಚಾಂಪಿಯನ್‌ಪಟ್ಟ ತಮ್ಮದಾಗಿಸಿಕೊಂಡರು. ಕೊನೆಯ ಸುತ್ತಿನ ಪಂದ್ಯದಲ್ಲಿ ಅವರು ಬೋಸ್ನಿಯದ ಪ್ರೆಡ್ರಾಗ್ ನಿಕೋಲಿಕ್ ಜೊತೆ ಡ್ರಾ ಸಾಧಿಸಿದರು. ಎರಡನೇ ಸುತ್ತಿನ ಪಂದ್ಯದಲ್ಲಿ ನೇಗಿ ಅವರು ಹೊವೆಲ್ ಎದುರು ಪರಾಭವಗೊಂಡಿ ದ್ದರು. ಈ ಕಾರಣ ಪ್ರಶಸ್ತಿ ಗೆಲ್ಲಬೇಕೆಂಬ ಅವರ ಕನಸು ಈಡೇರಲಿಲ್ಲ.

ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಲಲಿತ್ ಬಾಬು ಮತ್ತು ಅರುಣ್ ಪ್ರಸಾದ್ ಅಲ್ಲದೆ, ಪೋಲೆಂಡ್‌ನ ಬರ್ಟೊಜ್ ಸೊಕೊ, ರಷ್ಯಾದ ಎವ್ಗೆನಿ ವೊರೊಬೊವ್, ಹಂಗೇರಿಯ ಕ್ಸಾಬಾ ಹೊರ್ವತ್ ಹಾಗೂ ನಿಕೊಲಿಕ್ ತಲಾ 6.5 ಪಾಯಿಂಟ್ ಕಲೆಹಾಕಿದರು. ಪ್ರೋಗ್ರೆಸಿವ್ ಪಾಯಿಂಟ್ ಅಳವಡಿಸಿದಾಗ ಅರುಣ್‌ಗೆ ಆರನೇ ಹಾಗೂ ಲಲಿತ್‌ಗೆ ಎಂಟನೇ ಸ್ಥಾನ ದೊರೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.